
ಸಿನಿಮಾ ರಂಗದಲ್ಲಿ ಏನನ್ನಾದರೂ ಸಾಧಿಸಬೇಕು ಅಂತಲೇ ಹಲವು ಮಂದಿ ಗಾಂಧಿನಗರವನ್ನು ಪ್ರವೇಶಿಸುತ್ತಾರೆ. ಆದರೆ ನಮ್ಮಿಂದ ಇದು ಸಾಧ್ಯವಿಲ್ಲ ಎಂದು ಕೈಚೆಲ್ಲುತ್ತಾರೆ. ಇವರ ಮಧ್ಯೆ ಅದೃಷ್ಟವಿರುವ ಕೆಲವರು ಮಾತ್ರ ಗಾಂಧಿನಗರದ ಗಲ್ಲಿ ಗಲ್ಲಿಗಳಲ್ಲಿ ಕಟೌಟ್ ಹಾಕಿಸಿಕೊಂಡು ಮಿಂಚುತ್ತಾರೆ. ಇದ್ಯಾವ ವಿಷಯ. ಗಾಂಧಿನಗರಕ್ಕೂ ಆಡುತ್ತಿರುವ ಮಾತಿಗೂ ಎತ್ತಣಿಂದೆತ್ತ ಸಂಬಂಧ ಅಂತ ಯೋಚಿಸುತ್ತಿದ್ದೀರಾ? ಖಂಡಿತವಾಗಿಯೂ ಸಂಬಂಧ ಇದೆ. ಯಾಕೆ ಅಂದರೆ ಫ್ಯಾಷನ್ ಟೈಲರ್ ಒಬ್ಬರು ನಿರ್ಮಿಸುತ್ತಿರುವ ಸ್ಯಾಂಡಲ್ ವುಡ್ ನಲ್ಲಿ ಹೊಸ ಧೂಳ್ ಎಬ್ಬಿಸಲು ಬರುತ್ತಿರುವ ಸೂಪರ್ ಸಿನಿಮಾ ಕಥೆ.
ಒಂದು ಸಿನಿಮಾ ಅಂದರೆ ನಮ್ಮ ಕಣ್ಣ ಮುಂದೆ ಹಲವಾರು ಕಲಾವಿದರು ಸುಳಿದುಹೋಗುತ್ತಾರೆ. ಆದರೆ ಇದು ಕೇವಲ ಇಬ್ಬರೆ ಕಲಾವಿದರನ್ನೊಳಗೊಂಡ ಸಿನಿಮಾ. ತೆರೆಗೆ ಬರಲು ಸದ್ದಿಲ್ಲದೆ ತಯಾರಿ ನಡೆಸುತ್ತಿದೆ. ಅದೇ ‘ವೀ2‘ ಸಿನಿಮಾ. ಮೈಸೂರಿನ ನಾಗರಾಜ್ ಅಲಿಯಾಸ್ ಭಯಾನಕ ನಾಗ ರವರು ನಿರ್ಮಿಸಿ, ನಿರ್ದೇಶಿಸಿ, ನಟಿಸುತ್ತಿರುವ ಚಿತ್ರದಲ್ಲಿ ಇಬ್ಬರೇ ಕಲಾವಿದರು..!
ಅಚ್ಚರಿಯೆನಿಸಿದರೂ ಇದು ಸತ್ಯ. ಕನ್ನಡ ಸಿನಿಮಾ ರಂಗದಲ್ಲಿ ಮೂಕಿ ಚಿತ್ರದ ಮೂಲಕ ಆ ಕಾಲದಲ್ಲಿ ಪುಷ್ಪಕವಿಮಾನ ಚಿತ್ರ ಹೆಸರು ಮಾಡಿತ್ತು. ಆದರೆ, ಮೈಸೂರಿನ ಕುವೆಂಪುನಗರದ ನಾಗರಾಜ್ ಹಾಗೂ ಸ್ನೇಹಿತರಾದ ಕೃಷ್ಣನಾಗ್ ಇಬ್ಬರೇ ಕಲಾವಿದರು ತಂತ್ರಜ್ಞರಾಗಿಯೂ ಕೆಲಸ ಮಾಡಿ ಇದೀಗ ಸುದ್ದಿ ಮಾಡ ಹೊರಟಿದ್ದಾರೆ. ಸಹಾಯಕ್ಕೆಂದು ವಿಕ್ರಮ್ ಎಂಬ ಯುವಕನನ್ನು ಬಳಸಿಕೊಂಡು ಎರಡು ಗಂಟೆ 15 ನಿಮಿಷದ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ಚಿತ್ರ ಶೇ.80ರಷ್ಟು ಮುಗಿದಿದ್ದು ಕೇವಲ ಕ್ಲೈಮ್ಯಾಕ್ಸ್ ಸೀನ್ ಮಾತ್ರ ಬಾಕಿ ಉಳಿಸಿಕೊಳ್ಳಲಾಗಿದೆ.
30 ಲಕ್ಷರೂ. ವೆಚ್ಚದಲ್ಲಿ ನಿರ್ಮಾಣವಾಗಿರೋ ವಿಭಿನ್ನ ಚಿತ್ರ
ಈಗಾಗಲೇ ಚಿತ್ರಕ್ಕೆ 15 ಲಕ್ಷ ಹಣವನ್ನು ವೆಚ್ಚ ಮಾಡಲಾಗಿದೆ. ಮೈಸೂರು, ಚಾಮುಂಡಿ ಬೆಟ್ಟ, ಶ್ರೀರಂಗಪಟ್ಟಣ, ಕರಿಘಟ್ಟ ಸೇರಿದಂತೆ ಮೈಸೂರು ಸುತ್ತಮುತ್ತಲಲ್ಲಿ ಚಿತ್ರವನ್ನು ಚಿತ್ರೀಕರಿಸಲಾಗಿದೆಯಂತೆ. ವಿಶೇಷ ಅಂದರೆ, ಓರ್ವ ನಟನೆ ಮಾಡುವಾಗ, ಮತ್ತೊಬ್ಬ ಕಲಾವಿದ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾನೆ. ಮತೋರ್ವ ನಟನೆ ಮಾಡುವಾಗ ಇನೋರ್ವ ಕ್ಯಾಮರಾದಲ್ಲಿ ಸೆರೆ ಹಿಡಿಯುತ್ತಾನೆ. ಹೀಗೆ ಇಬ್ಬರೇ ಕೆಲಸ ಮಾಡಿದ್ದಾರೆ. ಇಬ್ಬರು ನಟನೆ ಮಾಡುವಾಗ ವಿಕ್ರಮ್ ಎಂಬ ಯುವಕನ ಸಹಾಯ ಪಡೆದಿದ್ದಾರೆ. ಅದು ಶೇ. 05 ರಷ್ಟು ಮಾತ್ರ ಅಂತಾರೆ ನಿರ್ದೇಶಕ, ನಟ ನಾಗರಾಜ್
ಹಣದ ಹಿಂದೆ ಬಿದ್ದು ಯಾವ ರೀತಿ ಜೀವನವನ್ನೇ ಕಳೆದುಕೊಳ್ಳುತ್ತಾರೆ ಎನ್ನುವ ಕುರಿತ ಚಿತ್ರ ಇದಾಗಿದ್ದು, ಅದನ್ನೇ ವಿಭಿನ್ನವಾಗಿ ಚಿತ್ರೀಕರಿಸಲಾಗಿದೆ. ಕಷ್ಟ ಹಾಗೂ ಮಾನಸಿಕ ಒತ್ತಡಕ್ಕೆ ಸಿಲುಕಿ, ವಾಮ ಮಾರ್ಗದ ಮೂಲಕ ಹಣ ಸಂಪಾದಿಸಲು ಹೋಗಿ ಏನೆಲ್ಲಾ ಕಷ್ಟ ಅನುಭವಿಸುತ್ತಾರೆ ಎನ್ನುವುದೇ ಈ ಚಿತ್ರದ ಸಾರಾಂಶವಾಗಿದೆ.
ಮಗಳ ಮದುವೆ ಹಣದಲ್ಲಿ ಚಿತ್ರ ನಿರ್ಮಾಣ
ನಾಗರಾಜ್ ಅವರ ಸಿನಿಮಾ ಹುಚ್ಚು ಎಷ್ಟಿದೆ ಎಂದರೆ, ತನ್ನ ಮಗಳ ಮದುವೆಗೆಂದು ಕೂಡಿಟ್ಟಿದ್ದ ಹಣವನ್ನೆಲ್ಲ ಸಿನಿಮಾಗೆ ಹಾಕಿದ್ದಾರೆ. ಆದರೆ, ಈ ಚಿತ್ರ ಗೆದ್ದೆ ಗೆಲ್ಲುತ್ತೆ. ಪ್ರೇಕ್ಷಕ ಪ್ರಭು ನಮ್ಮ ಕೈ ಹಿಡಿಯುತ್ತಾನೆ ಎಂಬ ನಂಬಿಕೆಯಿದೆ. ಚಿತ್ರ ಚೆನ್ನಾಗಿ ಮೂಡಿ ಬಂದಿದ್ದು, ಚಿತ್ರದಲ್ಲಿ ಹೊಡೆದಾಟ, ಬಡಿದಾಟ, ಮರಸುತ್ತುವ ಹಾಡುಗಳು ಏನೂ ಇಲ್ಲ. 15 ದಿನದ ಚಿತ್ರೀಕರಣ ಮುಗಿದಿದೆ. ಚಿತ್ರ ಅತ್ಯುತ್ತಮ ಸಾಲಿನಲ್ಲಿ ನಿಲ್ಲಲಿದೆ ಅನ್ನೋ ವಿಶ್ವಾಸ ನಾಗರಾಜ್ ಅವರದ್ದು.
ಅದೇನೇ ಇರಲಿ ಹೊಸದಾದ ಪ್ರಯೋಗಾತ್ಮಕ ಚಿತ್ರವನ್ನು ಮೈಸೂರಿನ ನಾಗರಾಜ್ ಮಾಡಿದ್ದಾರೆ. ಈ ಚಿತ್ರದ ಟೀಸರ್ ಶುಕ್ರವಾರ ಬಿಡುಗಡೆಯಾಗಲಿದ್ದು, ಚಿತ್ರ ಯಾವ ರೀತಿ ಪ್ರೇಕ್ಷಕರನ್ನು ಸೆರೆ ಹಿಡಿಯಬಲ್ಲುದು ಎನ್ನುವುದು ಚಿತ್ರ ಬಿಡುಗಡೆಯ ನಂತರವೇ ತಿಳಿದು ಬರಲಿದೆ.
ಸುರೇಶ್.ಎನ್.