ಮೈಸೂರು

ಜಿಲ್ಲಾ ಹಾಗೂ ರಾಜ್ಯ ಮಟ್ಟದ ವಾರ್ಷಿಕ ಕ್ರೀಡಾಕೂಟ; ಜ.7-8ಕ್ಕೆ

ಕೇಂದ್ರ ಸರ್ಕಾರದ ಖೇಲೋ ಇಂಡಿಯಾ ಯೋಜನೆಯಡಿ ಜಿಲ್ಲಾ ಮತ್ತು ರಾಜ್ಯಮಟ್ಟದ ವಾರ್ಷಿಕ ಕ್ರೀಡಾಕೂಟವನ್ನು ಹಮ್ಮಿಕೊಳ್ಳಲಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಸುರೇಶ್ ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಪತ್ರಕರ್ತರ ಭವನದಲ್ಲಿ ಮಾತನಾಡಿದ ಅವರು, ಮೈಸೂರು ಜಿಲ್ಲಾ ಪಂಚಾಯತ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಬೆಂಗಳೂರಿನ ಕರ್ನಾಟಕ ಕ್ರೀಡಾ ಪ್ರಾಧಿಕಾರದ ಸಂಯುಕ್ತಾಶ್ರಯದಲ್ಲಿ 2016-17ನೇ ಸಾಲಿನ ಜಿಲ್ಲಾ ಮಟ್ಟದ 14 ಮತ್ತು 17 ವರ್ಷದೊಳಗಿನ ಈಜು ಸ್ಪರ್ಧೆಯನ್ನು ಜ.7 ರಂದು ಸಂಜೆ 4:30ಕ್ಕೆ ಮೈಸೂರು ವಿ.ವಿ.ಯ ಈಜುಕೊಳದಲ್ಲಿ ಸಂಘಟಿಸಲಾಗಿದ್ದು ಹೆಸರು ನೋಂದಾಯಿಸಿಕೊಳ್ಳಲು ಅಂದು ಸಂಜೆ 4 ಗಂಟೆಯವರೆಗೂ ಕಾಲಾವಕಾಶವಿದೆ. ವ್ಯವಸ್ಥಾಪಕ ಪುಟ್ಟಸ್ವಾಮಿ ಟಿ. ಅವರುನ್ನು ಮೊಬೈಲ್ ಸಂಖ್ಯೆ 9448601382 ಮೂಲಕ ಸಂಪರ್ಕಿಸಬಹುದು.

ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಅಥ್ಲೆಟಿಕ್ಸ್, ಕಬಡ್ಡಿ, ವಾಲಿಬಾಲ್ ಮತ್ತು ಬ್ಯಾಸ್ಕೆಟ್‍ಬಾಲ್ ಕ್ರೀಡೆಗಳನ್ನು ಆಯೋಜಿಸಿದ್ದು ಜ.10 ರಂದು 14 ವರ್ಷದೊಳಗಿನವರಿಗೆ ಹಾಗೂ ಜ.11 ರಂದು 17 ವರ್ಷದೊಳಗಿನವರಿಗಾಗಿ ಕ್ರೀಡಾಕೂಟಗಳು ಜರುಗುವವು ಎಂದರು.

ಖೇಲೋ ಇಂಡಿಯಾ ಯೋಜನೆಯಡಿ ಗ್ರಾಮೀಣ ಕ್ರೀಡಾಪಟುಗಳನ್ನು ಗುರುತಿಸಿ ಮುಖ್ಯವಾಹಿನಿಗೆ ಕರೆತರಲು ಕ್ರೀಡಾಕೂಟ ನೆರವಾಗಲಿದ್ದು 1500 ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದೆ. ಇದೇ ಮೊದಲ ಬಾರಿಗೆ ಈಜು ಸ್ಪರ್ಧೆಯನ್ನು ಆಯೋಜಿಸಲಾಗಿದ್ದು ಶಾಲಾ ಹಾಗೂ ಶಾಲೆಯ ಹೊರಗಿರುವ ಎಲ್ಲ ಕ್ರೀಡಾಪಟುಗಳೂ ಭಾಗವಹಿಸಬಹುದು. ರಾಷ್ಟ್ರಾದ್ಯತ 20 ವಿಧದ ಕ್ರೀಡಾ ಸ್ಪರ್ಧೆಗಳು ಜರುಗಲಿದ್ದು ಕರ್ನಾಟಕದಲ್ಲಿ ಈಜು ಸೇರಿದಂತೆ 8 ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಈಗಾಗಲೇ ಉಡುಪಿ ಹಾಗೂ ಬೆಳಗಾವಿಯಲ್ಲಿ ನಡೆಯುತ್ತಿರುವ ಜುಡೋ ಸ್ಪರ್ಧೆ ವಿಜೇತರು ರಾಜ್ಯಮಟ್ಟದಲ್ಲಿ ಭಾಗವಹಿಸುವರು ಎಂದರು.

ಚಾಮುಂಡಿ ವಿಹಾರದಲ್ಲಿ ನಿರ್ಮಾಣಗೊಳ್ಳುತ್ತಿರುವ ಈಜುಕೊಳದ ಉದ್ಘಾಟನೆ ಕೆಲವು ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗುತ್ತಿದ್ದು ಬಹುತೇಕ ಫೆ.15ರಂದು ಲೋಕಾರ್ಪಣೆಗೊಳ್ಳಲಿದೆ. ಪ್ರಸ್ತಕ ಸಾಲಿನ ಬೇಸಿಗೆಗೆ ಮೈಸೂರಿಗರಿಗೆ ಈಜು ಕೊಳವು ಲಭ್ಯವಾಗಲಿದೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಚಾಮುಂಡಿ ವಿಹಾರ ಕ್ರೀಡಾಂಗಣವು ಹಂತ ಹಂತವಾಗಿ ಮಾರ್ಪಡಾಗುತ್ತ ರಾಜ್ಯದಲ್ಲಿಯೇ ನಂಬರ್ 1 ಕ್ರೀಡಾಂಗಣವಾಗಿ ರೂಪುಗೊಳ್ಳುತ್ತಿದ್ದು, ಇನ್ನು ಸ್ವಲ್ಪ ಸಮಯದಲ್ಲೇ ವಿಶ್ವದರ್ಜೆಗೇರುವುದು ಎಂದು ಆಶಿಸಿದರು. ಸುದ್ದಿಗೋಷ್ಠಿಯಲ್ಲಿ ಕಚೇರಿ ಸಿಬ್ಬಂದಿಗಳಾದ ಕಾವ್ಯ ಹಾಗೂ ಶ್ಯಾಮಲಾ ಉಪಸ್ಥಿತರಿದ್ದರು.

Leave a Reply

comments

Related Articles

error: