ಕರ್ನಾಟಕಪ್ರಮುಖ ಸುದ್ದಿ

ಕೊಡಗಿನಲ್ಲಿ ಜೇನು ಹುಳುಗಳು ಸಾವನ್ನಪ್ಪಲು ಕಾರಣವೇನು? ಯಾವುದೀ ಮಾರಕ ಕಾಯಿಲೆ?

ಮಡಿಕೇರಿ (ನ.30): ಕೊಡಗಿನಲ್ಲಿ ಜೇನು ಹುಳುಗುಳು ಸಾಮೂಹಿಕವಾಗಿ ಸಾವನ್ನಪ್ಪುತ್ತಿವೆ. ಇದಕ್ಕೆ ಕಾರಣ ‘ಥಾಯಿಶ್ಯಾಕ್ ಬ್ರೂಡ್’ ಎಂಬ ವೈರಸ್ ಜೇನನ್ನು ಕಾಡತೊಡಗಿದ್ದು ಇದರಿಂದ ಜೇನುಹುಳುಗಳು ನಾಶವಾಗುವ ಲಕ್ಷಣಗಳು ಕಂಡು ಬರುತ್ತಿವೆ. ಇದೇ ಕಾಯಿಲೆ ಹಿಂದೆಯೂ ಜೇನಿಗೆ ತಗುಲಿತ್ತು ಎನ್ನಲಾಗಿದೆ.

ಈ ವೈರಸ್‍ನಿಂದ ಜೇನು ಹುಳುಗಳ ಮಾರಣ ಹೋಮ ನಡೆದಿತ್ತಲ್ಲದೆ, ಜೇನು ಕುಟುಂಬಗಳು ಸದ್ದಿಲ್ಲದೆ ನಾಶವಾಗಿ ಹೋಗಿದ್ದವು. ಒಂದು ಕಾಲದಲ್ಲಿ ಕೊಡಗಿ ಕಾಫಿ, ಏಲಕ್ಕಿ, ಕಾಡು, ಬೆಟ್ಟಗುಡ್ಡ, ಮರಗಳ ಪೊಟರೆ, ಹುತ್ತಗಳು ಹೀಗೆ ಎಲ್ಲೆಂದರಲ್ಲಿ ಜೇನು ಹುಳುಗಳು ವಾಸ್ತವ್ಯ ಹೂಡಿ ಮಕರಂದ ಹೀರಿ ಜೇನು ತುಪ್ಪ ತಯಾರಿಸಿಕೊಳ್ಳುವುದರೊಂದಿಗೆ ತಮ್ಮ ಕುಟುಂಬವನ್ನು ಹಿಗ್ಗಿಸಿಕೊಂಡು ಹೋಗುತ್ತಿದ್ದವು.

ಈ ಜೇನುಗಳು ಇರುವುದನ್ನು ಪತ್ತೆ ಹಚ್ಚಿ ಜೇನು ಕೀಳುತ್ತಿದ್ದರಾದರೂ ಬಹಳಷ್ಟು ಕಡೆಗಳಲ್ಲಿ ಜನರ ಕಣ್ಣಿಗೆ ಬೀಳದ ಕಾರಣ ಡಿಸೆಂಬರ್, ಜನವರಿ ತಿಂಗಳಲ್ಲಿ ವಾಸ್ತವ್ಯ ಹೂಡುತ್ತಿದ್ದ ಜೇನುಕುಟುಂಬ ಜೂನ್ ತಿಂಗಳ ಮಳೆಗಾಲ ಆರಂಭವಾಗುತ್ತಿದ್ದಂತೆಯೇ ಕುಟುಂಬವನ್ನು ಇಮ್ಮಡಿಗೊಳಿಸುವುದರೊಂದಿಗೆ ತಾವೇ ತಯಾರಿಸಿದ ಜೇನನ್ನು ತಾವೇ ಹೀರಿ ಬೇರೆಡೆಗೆ ವಲಸೆ ಹೋಗುತ್ತಿದ್ದವು.

ಅವತ್ತಿನ ದಿನಗಳಲ್ಲಿ ಜೇನು ಪೆಟ್ಟಿಗೆಗಳನ್ನು ಕಾಡಿನಲ್ಲಿಟ್ಟರೆ ಜೇನು ಹುಳಗಳೇ ಬಂದು ಅದಕ್ಕೆ ಸೇರಿಕೊಂಡು ಜೇನು ಸಂಗ್ರಹಿಸುವ ಕೆಲಸ ಮಾಡುತ್ತಿದ್ದವು. ಆದರೆ ಯಾವಾಗ ಥಾಯಿಶ್ಯಾಕ್ ಬ್ರೂಡ್ ಎಂಬ ಕಾಯಿಲೆ ಬಂತೋ ಜೇನು ಕುಟುಂಬಗಳು ನಾಶವಾದವು.

ಅದಾದ ಬಳಿಕ ವರ್ಷಗಳು ಉರುಳಿದಂತೆ ಅಲ್ಲಲ್ಲಿ ಜೇನುಕುಟುಂಬಗಳು ಕಾಣಿಸಲಾರಂಭಿಸಿದ್ದವಾದರೂ ಇದೀಗ ಈ ಬಾರಿಯ ಮಹಾಮಳೆ ಮತ್ತು ಶೀತದ ವಾತಾವರಣದಿಂದ ಜೇನು ಕೃಷಿಗಾಗಿ ತಮ್ಮ ಜೇನು ಪೆಟ್ಟಿಗೆಯಲ್ಲಿ ಉಳಿಸಿಕೊಂಡಿದ್ದ ಹುಳುಗಳು ಸಾವನ್ನಪ್ಪಿ ಅವುಗಳ ಸಂತತಿ ನಾಶವಾಗಲು ಆರಂಭಿಸಿರುವುದು ಕೊಡಗಿನ ಜೇನು ಮೇಲೆ ಭಾರೀ ಪರಿಣಾಮ ಬೀರುವ ಎಲ್ಲ ಲಕ್ಷಣಗಳು ಕಂಡು ಬರತೊಡಗಿದೆ.

ಥಾಯಿಶ್ಯಾಕ್ ಬ್ರೂಡ್ ವೈರಸ್ ಮೊದಲು ಕಂಡು ಬಂದಿದ್ದು ಕೇರಳ ರಾಜ್ಯದಲ್ಲಿ. ಅಲ್ಲಿಂದ ಬೇರೆಡೆಗೆ ಅದರಲ್ಲೂ ಕೊಡಗಿಗೆ ಹತ್ತಿರವಿರುವ ಕಾರಣ ಅತಿ ಶೀಘ್ರವಾಗಿ ಕಾಣಿಸಿಕೊಂಡು ಇಲ್ಲಿನ ಜೇನು ಕುಟುಂಬಗಳನ್ನು ಬಲಿ ಪಡೆದಿತ್ತು. ಕೇರಳದ ಪ್ರಾಕೃತಿಕ ಕಾಡುಗಳಲ್ಲಿದ್ದ ಹೆಜ್ಜೇನುಗಳಿಗೆ ಈ ವೈರಸ್ ಮೊದಲು ದಾಳಿ ನಡೆಸಿ ಲಕ್ಷಾಂತರ ಸಂಖ್ಯೆಯ ಹೆಜ್ಜೇನು ಹುಳುಗಳನ್ನು ಬಲಿ ಪಡೆದಿತ್ತು. ಆ ಬಳಿಕ ಈ ವೈರಸ್ ಕೊಡಗು ಜಿಲ್ಲೆಗೆ ಕಾಲಿಟ್ಟು ಹೆಜ್ಜೇನು ಮತ್ತು ಪೆಟ್ಟಿಗೆ ಜೇನಿನ ಮೇಲೂ ತನ್ನ ಮಾರಣಾಂತಿಕ ಪ್ರಭಾವ ಬೀರಿದೆ.

ಜೇನು ಕುಟುಂಬಗಳ ವಲಸೆಯಿಂದ ಕೊಡಗು ಜಿಲ್ಲೆಗೆ ಈ ವೈರಸ್ ಹರಡಿರಬಹುದೆಂದು ಜೇನು ಕೃಷಿಕರು ಸಂಶಯ ವ್ಯಕ್ತಪಡಿಸುತ್ತಾರೆ. ತೋಟಗಾರಿಕಾ ಇಲಾಖೆ ಜೇನು ಕೃಷಿಗೆ ಪ್ರೋತ್ಸಾಹ ನೀಡುತ್ತಿದ್ದು, ಇದೀಗ ಬಂದಿರುವ ಕಾಯಿಲೆಯಿಂದ ಜೇನು ಹುಳುಗಳನ್ನು ಪಾರು ಮಾಡಿ ಕೃಷಿ ಮುಂದುವರೆಸಲು ಅನುಕೂಲವಾಗುವಂತೆ ತಾಂತ್ರಿಕ ಸಲಹೆಗಳನ್ನು ನೀಡುತ್ತಿದೆ. ಆದಷ್ಟು ಬೇಗ ಕಾಯಿಲೆಗೊಂದು ಪರಿಹಾರ ಕಂಡು ಹಿಡಿಯಬೇಕಾಗಿದೆ. ಇಲ್ಲದೆ ಹೋದರೆ ಕೊಡಗು ತನ್ನ ಜೇನಿನ ವೈಭವವನ್ನು ಕಳೆದುಕೊಳ್ಳಬೇಕಾದ ಸ್ಥಿತಿ ಬಂದರೂ ಅಚ್ಚರಿಪಡಬೇಕಾಗಿಲ್ಲ ಎಂಬ ಮಾತುಗಳು ಕೇಳಿಬಂದಿವೆ. (ಎನ್.ಬಿ)

Leave a Reply

comments

Related Articles

error: