ಮೈಸೂರು

ಪುರುಷರ ಬಂಜೆತನ ಸಮಸ್ಯೆ ನಿವಾರಣೆಗೆ ಉಚಿತ ತಪಾಸಣಾ ಶಿಬಿರ; ಜ.12ರಂದು

ಇಂದಿನ ದಿನಗಳಲ್ಲಿ ಬಂಜೆತನ ಸಮಸ್ಯೆಯು ಸ್ತ್ರೀಯರಿಗಿಂತ ಪುರುಷರಲ್ಲಿ ಹೆಚ್ಚಾಗಿ ಕಂಡುಬರುತ್ತಿದೆ. ಆಧುನಿಕ ಜೀವನ ಶೈಲಿ, ಕುಲುಷಿತ ವಾತಾವರಣ, ಒತ್ತಡ ಹಾಗೂ ಆಧುನಿಕ ಪರಿಕರಗಳಿಂದ ಉಂಟಾಗುತ್ತಿರುವ ಪರಿಣಾಮದಿಂದಾಗಿ ವೀರ್ಯಾಣುಗಳ ಸಂಖ್ಯೆ ಇತ್ತೀಚೆಗೆ ಪುರುಷರಲ್ಲಿ ಕಡಿತಗೊಳ್ಳುತ್ತಿರುವುದು ಬಂಜೆತನಕ್ಕೆ ಕಾರಣವಾಗಿದೆ. ಇಂತಹ ಸಮಸ್ಯೆ ಇದ್ದವರ ಪ್ರಯೋಜನಕ್ಕಾಗಿ ಮೈಸೂರಿನಲ್ಲಿ ‘ಪುರುಷರ ಬಂಜೆತನ ಉಚಿತ ತಪಾಸಣಾ ಶಿಬಿರ’ವನ್ನು ಆಯೋಜಿಸಲಾಗಿದೆ ಎಂದು ಮೈಸೂರು ಕ್ಲಿನಿಕಲ್ ಸೊಸೈಟಿ ಅಧ್ಯಕ್ಷ ಡಾ.ಸಿ. ಶರತ್‍ಕುಮಾರ್ ಅವರು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗುರುವಾರ ಪತ್ರಕರ್ತರ ಭವನದಲ್ಲಿ ಮಾತನಾಡಿ, ಜ.12ರ ಗುರುವಾರದಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 1 :30 ರವರೆಗೆ ನಗರದ ಸಯ್ಯಾಜಿರಾವ್ ರಸ್ತೆಯಲ್ಲಿರುವ ಮೆಡಿವೇವ್ ಪ್ರನಾಳ ಶಿಶು ಮತ್ತು ಗರ್ಭಧಾರಣಾ ಸಂಶೋಧನಾ ಆಸ್ಪತ್ರೆಯಲ್ಲಿ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ. ಮೈಸೂರು ಕ್ಲಿನಿಕಲ್ ಸೊಸೈಟಿ, ಮೈಸೂರು ವಿಶ್ವವಿದ್ಯಾನಿಲಯ ಪ್ರಾಣಿಶಾಸ್ತ್ರ ವಿಭಾಗ, ಸಿಸಿಎಫ್ಡಿ, ಸಿಸಿಎಂಬಿ ಹೈದ್ರಾಬಾದ್ ಹಾಗೂ ಮೆಡಿವೇವ್ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಡೆಸುವ ಶಿಬಿರದಲ್ಲಿ  ಪ್ರತಿಯೊಬ್ಬರ ತಪಾಸಣೆಗಾಗಿ 15 ಸಾವಿರ ರೂಪಾಯಿ ವೆಚ್ಚ ತಗುಲಲಿದೆ. ಆದರೆ ನಮ್ಮ ಶಿಬಿರದಲ್ಲಿ ಈ ತಪಾಸಣೆಯನ್ನು ಸಂಪೂರ್ಣ ಉಚಿತವಾಗಿ ನೀಡಲಾಗುವುದು ಎಂದರು.

ವಿಶ್ವ ಆರೋಗ್ಯ ಸಂಸ್ಥೆಯ ವರದಿ ಪ್ರಕಾರ ಕಳೆದ ದಶಕಗಳಲ್ಲಿ ಪುರುಷರ ವೀರ್ಯಾಣು ಸಂಖ್ಯೆ ತೀರ ಕಡಿಮೆಯಾಗಿದೆ. ಮುಂದಿನ 20 ವರ್ಷಗಳಲ್ಲಿ ಆಧುನಿಕ ಜೀವನಶೈಲಿಗೆ ತೆರೆದುಕೊಂಡ ಗಂಡಸರ ಪುರುಷತ್ವವೂ ಸಂಪೂರ್ಣ ನಶಿಸಬಹುದೆಂದು ವೈಜ್ಞಾನಿಕ ಸಂಶೋಧನೆಗಳು ತಿಳಿಸಿವೆ. ಅತಿಯಾದ ಬೊಜ್ಜು, ವೇಗದ ಹಾಗೂ ಒತ್ತಡದ ಜೀವನ ಶೈಲಿ, ಅಧಿಕ ರಕ್ತದೊತ್ತಡ, ಮಧುಮೇಹ ಸೇರಿದಂತೆ ಹಲವಾರು ಅನುವಂಶಿಕ ಕಾರಣಗಳು ಪುರುಷರ ಬಂಜೆತನಕ್ಕೆ ಕಾರಣವಾಗಿವೆ ಎಂದರು.

ಬಂಜೆತನಕ್ಕೆ ಹೆಣ್ಣೆ ಕಾರಣವೆಂದು ಕಳೆದ ಎರಡು ದಶಕಗಳ ಹಿಂದೆ ಆಕೆಯನ್ನು ದೂರಲಾಗುತ್ತಿತ್ತು. ಸಂಶೋಧನೆಗಳ ಪ್ರಕಾರ ಪುರುಷನೇ ಶೇ.70 ಪ್ರಕರಣಗಳಲ್ಲಿ ಕಾರಣೀಭೂತನಾಗಿದ್ದಾನೆ ಎನ್ನುವುದು ವಾಸ್ತವ. ಆದರೆ ಇದರ ಅರಿವು ಸಾಮಾನ್ಯರಿಗೆ ಇಲ್ಲ ಎಂದರು.

ತಪಾಸಣೆಯಲ್ಲಿ ವೀರ್ಯಾಣುವಿನ ಪರೀಕ್ಷೆಗಳು, ಜೀವರಸಾಯನ, ವರ್ಣತಂತು ಹಾಗೂ Y ವರ್ಣತಂತುವಿನ ಪರೀಕ್ಷೆಗಳನ್ನು ನಡೆಸಲಾಗುವುದು. ವರದಿ ಸಿಡಿಎಫ್‍ಡಿಯಿಂದ ನೇರವಾಗಿ ಬರಲಿದ್ದು ಯಾವ ವೈದ್ಯರಿಂದಲಾದರೂ ಔಷಧೋಪಚಾರ ಪಡೆದುಕೊಳ್ಳಬಹುದು ಎಂದು ತಿಳಿಸಿದರು.

ಮೈಸೂರು ವಿ.ವಿ.ಯ ಪ್ರಾಣಿಶಾಸ್ತ್ರ ವಿಭಾಗದ ಡಾ.ಎಸ್.ಎಸ್.ಮಾಲಿನಿ ಮಾತನಾಡಿ, ಪಟ್ಟಣವಾಸಿ ಪುರುಷರಿಗೆ ಹೋಲಿಸಿದರೆ ಗ್ರಾಮೀಣರಲ್ಲಿ ವೀರ್ಯಾಣುಗಳ ಸಂಖ್ಯೆ ಹೆಚ್ಚಿದೆ. ವಿಶ್ವ ಆರೋಗ್ಯ ಸಂಸ್ಥೆಯ ವರದಿಯ ಪ್ರಕಾರ ಐವತ್ತು ವರ್ಷಗಳ ಹಿಂದೆ ಒರ್ವ ಆರೋಗ್ಯವಂತ ಪುರುಷನ ವೀರ್ಯಾಣುವಿನ ಪ್ರಮಾಣ 200 ಮಿಲಿಯನ್ ಎಂಎಲ್ ಎಂದು ದಾಖಲಿಸಲಾಗಿತ್ತು. ಇಂದಿಗೂ ಬುಡಕಟ್ಟು ಜನಾಂಗವಾದ ಸಿದ್ದಿ ಸಮುದಾಯದ ಪುರುಷರಲ್ಲಿ ವೀರ್ಯಾಣು ಪ್ರಮಾಣ 200 ಮಿಲಿಯನ್ ಅಷ್ಟೇ ಇದೆ ಎಂದು ಸಂಶೋಧನೆಗಳಿಂದ ಸ್ಪಷ್ಟವಾಗಿದೆ.

ಕಲುಷಿತ ವಾತಾವರಣ, ಮೊಬೈಲ್, ಲ್ಯಾಪ್‍ಟ್ಯಾಪ್‍ ಹಾಗೂ ಇತರೆ ಎಲೆಕ್ಟ್ರಾನಿಕ್ ಪರಿಕರಗಳ ಹೆಚ್ಚಿನ ಬಳಕೆ, ರಾಸಾಯನಿಕ ವಿಷಕಾರಿ ಆಹಾರ ಬಳಕೆಯಿಂದ ರೋಗ ನಿರೋಧಕ ಶಕ್ತಿ ಕುಂಠಿತವಾಗಿದೆ. ಇದು ಪುರುಷರಲ್ಲಿ ಬಂಜೆತನ ಉಂಟಾಗಲು ಪ್ರಮುಖ ಕಾರಣ ಎಂದು ತಿಳಿಸಿದರು.

ಮೈಸೂರು ಕ್ಲಿನಿಕಲ್ ಸೊಸೈಟಿಯ ಗೌರವ ಕಾರ್ಯದರ್ಶಿ ಡಾ.ಎಂ.ಜಿ.ಆರ್. ಅರಸ್ ಅವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Leave a Reply

comments

Related Articles

error: