ಪ್ರಮುಖ ಸುದ್ದಿ

ರಸ್ತೆ ಅವ್ಯವಸ್ಥೆ : ಸಂಸದ ಪ್ರತಾಪಸಿಂಹ ತೀವ್ರ ಅಸಮಾಧಾನ : ಶೀಘ್ರ ದುರಸ್ತಿ ಕಾರ್ಯ ಆರಂಭಿಸಲು ಸೂಚನೆ

ರಾಜ್ಯ(ಮಡಿಕೇರಿ)ಡಿ.1:- ಪ್ರಕೃತಿ ವಿಕೋಪ ಸಂದರ್ಭದಲ್ಲಿ ಸಾಕಷ್ಟು ಗ್ರಾಮೀಣ ರಸ್ತೆಗಳು ಹದಗೆಟ್ಟಿದ್ದು, ಓಡಾಡಲು ತುಂಬಾ ತೊಂದರೆಯಾಗಿದೆ. ಆದ್ದರಿಂದ ಒಂದು ವಾರದೊಳಗೆ ಗ್ರಾಮೀಣ ರಸ್ತೆಗಳ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳುವಂತೆ ಸಂಬಂಧಪಟ್ಟ ಎಂಜಿನಿಯರ್‍ಗೆ ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ ಹಾಗೂ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ಸೂಚನೆ ನೀಡಿದ್ದಾರೆ.

ಸದ್ಯ ಈಗ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳ ರಸ್ತೆ ಸಂಪರ್ಕ ಕಲ್ಪಿಸಲಾಗಿದೆ. ಆದರೆ ಗ್ರಾಮೀಣ ರಸ್ತೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳ ಕಾರ್ಯವಾಗಿಲ್ಲ. ಆದ್ದರಿಂದ ಗ್ರಾಮೀಣ ರಸ್ತೆಗಳನ್ನು ಸರಿಪಡಿಸಬೇಕು. ಜೊತೆಗೆ ರಸ್ತೆ ಗುಂಡಿ ಮುಚ್ಚುವಂತೆ ಪಂಚಾಯತ್ ರಾಜ್ ಎಂಜಿನಿಯರ್‍ಗೆ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ನಿರ್ದೇಶನ ನೀಡಿದರು.

ಸಮಿತಿ ಸದಸ್ಯರಾದ ಸುಭಾಷ್ ಸೋಮಯ್ಯ ಅವರು ಎರಡನೇ ಮೊಣ್ಣಂಗೇರಿ, ಕಾಲೂರು ಮತ್ತಿತರ ಕಡೆಗಳಲ್ಲಿ ತೋಟದ ಮನೆಗಳಿಗೆ ತೆರಳಲು ರಸ್ತೆ ಸಂಪರ್ಕವಿಲ್ಲದೆ ತುಂಬಾ ತೊಂದರೆಯಾಗಿದೆ. ಆದ್ದರಿಂದ ಕೂಡಲೇ ರಸ್ತೆ ಸರಿಪಡಿಸಬೇಕು ಎಂದು ಅವರು ಮನವಿ ಮಾಡಿದರು.

ಅಡುಗೆ ಅನಿಲ ಸಂಪರ್ಕವಿಲ್ಲದ ಕುಟುಂಬಗಳಿಗೆ ಉಜ್ವಲ ಯೋಜನೆಯಡಿ ಅಡುಗೆ ಅನಿಲ ಸಂಪರ್ಕ ಕಲ್ಪಿಸಬೇಕು. ಹಾಗೆಯೇ ವಿದ್ಯುತ್ ಸಂಪರ್ಕವಿಲ್ಲದ ಕುಟುಂಬಗಳಿಗೆ ಸೌಭಾಗ್ಯ ಯೋಜನೆಯಡಿ ಕೂಡಲೇ ವಿದ್ಯುತ್ ಸಂಪರ್ಕ ಒದಗಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸಂಸದರಾದ ಪ್ರತಾಪ್ ಸಿಂಹ ಅವರು ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ಸದಸ್ಯರಾದ ಮನುಮುತ್ತಪ್ಪ ಅವರು ನಾಪೋಕ್ಲು ವ್ಯಾಪ್ತಿಯಲ್ಲಿ ವಿದ್ಯುತ್ ಟ್ರಾನ್ಸ್‍ಫಾರಂ ಇಲ್ಲದೆ, ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಆದ್ದರಿಂದ ಕೋಪಟ್ಟಿ ಬಳಿ ಪೈಸಾರಿ ಜಾಗವಿದ್ದು, ಅಲ್ಲಿ 66 ಕೆ.ವಿ.ಯ ವಿದ್ಯುತ್ ಘಟಕ ಸ್ಥಾಪಿಸಿ ಆ ಭಾಗದ ವ್ಯಾಪ್ತಿಯ ಎಲ್ಲಾ ಗ್ರಾಮಗಳ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಬೇಕು. ಜೊತೆಗೆ ನಾಪೋಕ್ಲುವಿನಲ್ಲಿ ವಿದ್ಯುತ್ ಬಿಲ್ಲು ಪಾವತಿಸುವ ಕೇಂದ್ರ ತೆರೆಯುವಂತಾಗಬೇಕು ಎಂದು ಅವರು ಮನವಿ ಮಾಡಿದರು.

ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು 66 ಕೆ.ವಿ. ವಿದ್ಯುತ್ ಘಟಕ ಸ್ಥಾಪಿಸುವ ನಿಟ್ಟಿನಲ್ಲಿ ಈಗಾಗಲೇ ಕೋಪಟ್ಟಿ, ಬಾಳೆಲೆ, ಕೊಡ್ಲಿಪೇಟೆ, ಶ್ರೀಮಂಗಲ ಮತ್ತಿತರ ಕಡೆಗಳಲ್ಲಿ ಗುರುತಿಸಲಾಗಿದ್ದು, ಇಂತಹ ಕಡೆಗಳಲ್ಲಿ ಕೂಡಲೇ 66 ಕೆ.ವಿ. ವಿದ್ಯುತ್ ಘಟಕ ಸ್ಥಾಪಿಸಬೇಕು ಎಂದು ಸೆಸ್ಕ್ ಎಂಜಿನಿಯರ್ ಅವರಿಗೆ ಸೂಚನೆ ನೀಡಿದರು.   ಅರಣ್ಯ ಪ್ರದೇಶದಲ್ಲಿ ವಾಸಿಸುತ್ತಿರುವ ಜನರಿಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಬೇಕು. ಅರಣ್ಯ ಹಕ್ಕು ಕಾಯ್ದೆಯಡಿ ಹಕ್ಕುಪತ್ರ ವಿತರಿಸಬೇಕು ಎಂದು ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ನಿರ್ದೇಶನ ನೀಡಿದರು.

ಇನ್ನೂ ಹಲವು ಹಾಡಿಗಳ ಕುಟುಂಬಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಬಾಕಿ ಇದೆ ಎಂದು ಐಟಿಡಿಪಿ ಇಲಾಖಾ ಅಧಿಕಾರಿ ಶಿವಕುಮಾರ್ ಅವರು ತಿಳಿಸಿದರು. ಗಿರಿಜನರಿಗೆ ಪೌಷ್ಟಿಕ ಆಹಾರ ಸಮರ್ಪಕವಾಗಿ ವಿತರಿಸಬೇಕು. ಅಕ್ಕಿ, ಬೇಳೆ, ರಾಗಿ, ಮೊಟ್ಟೆ, ಎಣ್ಣೆ ಮತ್ತಿತರವನ್ನು ವಿತರಿಸುವಂತೆ ಪ್ರತಾಪ್ ಸಿಂಹ ಅವರು ಸೂಚನೆ ನೀಡಿದರು. ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಯೋಜನೆಯಡಿ ಸಾಕಷ್ಟು ಕಾರ್ಯಕ್ರಮಗಳು ಇದ್ದು, ಅವುಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸುವಂತೆ ಸಂಸದರಾದ ಪ್ರತಾಪ್ ಸಿಂಹ ಅವರು ಸಲಹೆ ಮಾಡಿದರು. ಜಿಲ್ಲೆಯಲ್ಲಿ ಉಂಟಾದ ಭೂಕುಸಿತ ಹಾಗೂ ಪ್ರವಾಹದಿಂದಾಗಿ ಸಾಕಷ್ಟು ರಸ್ತೆಗಳು ಹಾನಿಯಾಗಿದ್ದು, ಈ ಬಗ್ಗೆ ಪ್ರಸ್ತಾವನೆ ಸಲ್ಲಿಸುವಂತೆ ಸಂಸದರು ಸಲಹೆ ಮಾಡಿದರು.

ಈ ಸಂಬಂಧ ಮಾಹಿತಿ ನೀಡಿದ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕಿನ ಸಹಾಯಕ ಮಹಾ ಪ್ರಬಂಧಕರಾದ ಮುಂಡಂಡ ಸಿ.ನಾಣಯ್ಯ ಅವರು ಸಂಬಂಧಪಟ್ಟ ಇಲಾಖೆಗಳಿಂದ ಪ್ರಸ್ತಾವನೆ ಸಲ್ಲಿಕೆಯಾದ ತಕ್ಷಣ ಕಳುಹಿಸಿಕೊಡಲಾಗುವುದು ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಪ್ರಕೃತಿ ವಿಕೋಪ ಕಾರ್ಯಗಳಿಗೆ ಸರ್ಕಾರ ಹಣ ಬಿಡುಗಡೆ ಮಾಡಿದೆ. ಹಣದ ಕೊರತೆಯಿಲ್ಲ ಎಂದು ಅವರು ಮಾಹಿತಿ ನೀಡಿದರು. ಇದಕ್ಕೆ ಧ್ವನಿಗೂಡಿಸಿದ ಶಾಸಕರಾದ ಎಂ.ಪಿ.ಅಪ್ಪಚ್ಚುರಂಜನ್ ಅವರು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿ ಸಂಪರ್ಕವಾಗಿದ್ದರೂ ಸಹ ಕಾಲು ರಸ್ತೆಗಳನ್ನು ಸರಿಪಡಿಸಬೇಕು. ಆ ನಿಟ್ಟಿನಲ್ಲಿ ತ್ವರಿತವಾಗಿ ಕಾಮಗಾರಿಗಳನ್ನು ಕೈಗೊಳ್ಳುವಂತೆ ಅವರು ಸೂಚನೆ ನೀಡಿದರು. ರಸ್ತೆ ಜೊತೆಗೆ ಕುಡಿಯುವ ನೀರು ಒದಗಿಸಬೇಕಿದೆ ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮನುಮುತ್ತಪ್ಪ ಅವರು ಆಗಸ್ಟ್ ತಿಂಗಳಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನವೇ ಅಸ್ತವ್ಯಸ್ತ ಉಂಟಾಗಿತ್ತು. ರಸ್ತೆ, ಸೇತುವೆ, ಜೀವಹಾನಿ, ಬೆಳೆಹಾನಿ ಉಂಟಾಯಿತು. ಇದರಿಂದ ಇಲ್ಲಿನ ಜನರು ತತ್ತರಿಸಿದರು. ಆ ಸಂದರ್ಭದಲ್ಲಿ ಸರ್ಕಾರದ ಜೊತೆ ಸಾರ್ವಜನಿಕರಿಂದ ಅಪಾರ ಪ್ರಮಾಣದ ವಸ್ತುಗಳು ಹಣ ಹರಿದು ಬಂದಿತು. ಆದರೆ ಯಾವ ರೀತಿ ಉಪಯೋಗವಾಗುತ್ತಿದೆ ಎಂಬುದು ತಿಳಿಯುತ್ತಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ಮುಖ್ಯಮಂತ್ರಿ ಅವರ ಪರಿಹಾರ ನಿಧಿಗೆ ಹಣ ಹೋಗಿದೆ. ಉಳಿದಂತೆ ಎನ್‍ಡಿಆರ್‍ಎಫ್ ಮತ್ತು ಎಸ್‍ಡಿಆರ್‍ಎಫ್ ನಿಯಮದಂತೆ ಹಣವನ್ನು ಖರ್ಚು ಮಾಡಲಾಗಿದೆ. ಜೀವ ಹಾನಿಯಾದವರಿಗೆ ಪರಿಹಾರ ಭರಿಸಲಾಗಿದೆ. ಮಣ್ಣು ತೆರವುಗೊಳಿಸುವುದು ಮತ್ತಿತರ ಕಾರ್ಯಕ್ಕಾಗಿ ಹಣ ನೀಡಲಾಗಿದೆ ಎಂದು ಅವರು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಪ್ರತಾಪ್ ಸಿಂಹ ಅವರು ಕೇಂದ್ರ ಸರ್ಕಾರದಿಂದ 546 ಕೋಟಿ ರೂ. ಬಿಡುಗಡೆಯಾಗಿದ್ದು,  ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರ ರಚನೆಯಾಗಬೇಕು ಎಂದು ಅವರು ತಿಳಿಸಿದರು.

ನಿರಾಶ್ರಿತ ಕುಟುಂಬಗಳಿಗೆ ಬಾಡಿಗೆ ಭರಿಸಲಾಗುವುದು ಎಂದು ಹೇಳಲಾಗಿತ್ತು, ಆದರೆ ಇದುವರೆಗೆ ಯಾವುದೇ ಕಾರ್ಯಗಳು ಆಗಿಲ್ಲ ಎಂದು ಮನುಮುತ್ತಪ್ಪ ಅವರು ಅತೃಪ್ತಿ ವ್ಯಕ್ತಪಡಿಸಿದರು. ಈ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅವರು ತಿಳಿಸಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: