ಮೈಸೂರು

ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗಾಹುತಿ : ಸಂಕಷ್ಟದಲ್ಲಿ ರೈತ

ಮೈಸೂರು,ಡಿ.1:- ಕಟಾವಿಗೆ ಬಂದಿದ್ದ ಕಬ್ಬು ಬೆಂಕಿಗಾಹುತಿಯಾದ ಘಟನೆ ಕೆ.ಆರ್.ನಗರದಲ್ಲಿ ನಡೆದಿದೆ.

ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಹೊಸೂರು ಕಾವಲ್ ಗ್ರಾಮದಲ್ಲಿ 2 ಎಕರೆಯಲ್ಲಿ ಕಟಾವಿಗೆ ಬಂದಿದ್ದ ಕಬ್ಬಿನ ಫಸಲು ಸುಟ್ಟು ಕರಕಲಾಗಿದೆ. ಜಮೀನಿನ ಮೇಲ್ಭಾಗದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ಕಬ್ಬಿಗೆ ಸ್ಪರ್ಶಿಸಿದ ಪರಿಣಾಮ ಈ ಘಟನೆ ನಡೆದಿದೆ ಎನ್ನಲಾಗಿದೆ.

ಹೊಸೂರು ಕಾವಲ್ ಗ್ರಾಮದ ರೈತ ಚಿಕ್ಕೇಗೌಡರಿಗೆ ಸೇರಿದ 1 ಎಕರೆ ಜಮೀನಿನಲ್ಲಿ ಬೆಂಕಿ ಕಾನಿಸಿಕೊಂಡಿದ್ದು, ಪಕ್ಕದಲ್ಲೇ ಇದ್ದ ಮಂಜನಹಳ್ಳಿ ಗ್ರಾಮದ ರೈತ ರಾಮೇಗೌಡರ ಜಮೀನಿಗೂ ಬೆಂಕಿ ಹರಡಿದೆ. ಅಲ್ಲಿಯೂ ಒಂದು ಎಕರೆ ಜಮೀನಿನಲ್ಲಿ ಬೆಳೆದು ನಿಂತಿದ್ದ ಕಬ್ಬು ಸುಟ್ಟು ಭಸ್ಮವಾಗಿದೆ.

ರಾಮೇಗೌಡ ಅವರು ಸ್ಥಳೀಯ ಬ್ಯಾಂಕಿನಲ್ಲಿ ಹಾಗೂ ಕೈ ಸಾಲ ಮಾಡಿಕೊಂಡು ಕಬ್ಬು ಬಿತ್ತನೆ ಮಾಡಿದ್ದರು.  ಚಿಕ್ಕೇಗೌಡರು ಭೇರ್ಯದ ಕಾವೇರಿ ಗ್ರಾಮೀಣ ಬ್ಯಾಂಕಿನಲ್ಲಿ 3 ಲಕ್ಷ ಸಾಲ ಮಾಡಿದ್ದರು. ಕಟಾವಿಗೆ ಬಂದಿದ್ದ ಕಬ್ಬಿನ ಫಸಲು ನಾಶವಾಗಿದ್ದರಿಂದ ರೈತರೀಗ ಕಂಗಾಲಾಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: