ಮೈಸೂರು

ಹಿಂದಿನ ಯುಪಿಎ ಸರ್ಕಾರ ದೇಶದಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದರಿಂದ ಅನ್ನಭಾಗ್ಯಯೋಜನೆಗಳು ಬಡವರ ಹಸಿವನ್ನು ನೀಗಿಸುತ್ತಿವೆ : ಸಂಸದ ಆರ್.ಧ್ರುವನಾರಾಯಣ

ಮೈಸೂರು,ಡಿ.1:- ಕಾಂಗ್ರೆಸ್ ನೇತೃತ್ವದ ಹಿಂದಿನ ಯುಪಿಎ ಕೇಂದ್ರ ಸರ್ಕಾರ ದೇಶದಲ್ಲಿ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೆ ತಂದಿದ್ದರಿಂದ ರಾಜ್ಯದಲ್ಲಿ ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್‍ನಂತಹ ಯೋಜನೆಗಳು ಬಡವರ ಹಸಿವನ್ನು ನೀಗಿಸುತ್ತಿವೆ ಎಂದು ಸಂಸದ ಆರ್.ಧ್ರುವನಾರಾಯಣ ಹೇಳಿದರು.

ತೀ.ನರಸೀಪುರ ಪಟ್ಟಣದ ಮಾರುಕಟ್ಟೆ ರಸ್ತೆಯಲ್ಲಿ ಇತ್ತೀಚೆಗೆ ಇಂದಿರಾ ಕ್ಯಾಂಟೀನನ್ನು ಉದ್ಘಾಟಿಸಿದ ನಂತರ ಮಾತನಾಡಿ, ಮಾಜಿ ಪ್ರಧಾನಿ ಮನಮೋಹನ್‍ಸಿಂಗ್ ನೇತೃತ್ವದಲ್ಲಿ ದೇಶದಲ್ಲಿ ದಶಕಗಳ ಕಾಲ ಅಧಿಕಾರದಲ್ಲಿದ್ದ ಯುಪಿಎ ಕೇಂದ್ರ ಸರ್ಕಾರ ಹಸಿವುಮುಕ್ತ ರಾಷ್ಟ್ರಕ್ಕಾಗಿ ಆಹಾರ ಭದ್ರತಾ ಕಾಯ್ದೆಯನ್ನು ಜಾರಿಗೊಳಿಸಿದರು. ರಾಜ್ಯದಲ್ಲಿಯೂ ಹಿಂದಿನ ಸರ್ಕಾರದಲ್ಲಿ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಹಸಿವುಮುಕ್ತ ನಾಡನ್ನು ಮಾಡುವ ಉದ್ದೇಶದಿಂದ ಅನ್ನಭಾಗ್ಯ ಹಾಗೂ ಇಂದಿರಾ ಕ್ಯಾಂಟೀನ್ ಯೋಜನೆಗಳನ್ನು ಆರಂಭಿಸಿದರು ಎಂದರು.

ಬೆಂಗಳೂರು ಮತ್ತು ಮೈಸೂರು ಸೇರಿದಂತೆ ರಾಜ್ಯದಾದ್ಯಂತ ತಲೆಯೆತ್ತಿರುವ ಇಂದಿರಾ ಕ್ಯಾಂಟೀನ್‍ಗಳು 5 ರೂಗಳಿಗೆ ಉಪಹಾರ, 10 ರೂಗಳಿಗೆ ಊಟದ ಸೌಲಭ್ಯವನ್ನು ನೀಡುತ್ತಿದ್ದು, ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಉಪಯುಕ್ತವಾಗಿವೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೂ ಇಷ್ಟವಾಗಿದ್ದು, ಕಾರು-ಬೈಕುಗಳಲ್ಲಿಯೂ ಬಂದು ಕೂಡ ಇಂದಿರಾ ಕ್ಯಾಂಟೀನ್‍ನಲ್ಲಿ ಉಪಹಾರ ಮತ್ತು ಊಟ ಸೇವಿಸುವುದನ್ನು ನಗರ ಪ್ರದೇಶಗಳಲ್ಲಿ ನೋಡಿದ್ದೇನೆ. ಪುರಸಭೆಗೆ ನಿರ್ವಹಣೆಯ ಉಸ್ತುವಾರಿ ಇರುವುದರಿಂದ ನೂತನ ಜನಪ್ರತಿನಿಧಿಗಳು ಉತ್ತಮವಾಗಿ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವರುಣ ಶಾಸಕ ಡಾ.ಎಸ್.ಯತೀಂದ್ರ ಮಾತನಾಡಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಳ್ಳಿಗಾಡಿನ ಬಡತನದ ಕುಟುಂಬದಿಂದ ಬಂದವರಾಗಿದ್ದರಿಂದ ಬಡತನ ಮತ್ತು ಅನ್ನದ ಹಾಹಾಕಾರವನ್ನು ಕಂಡಿದ್ದರಿಂದ ಬಡವರ ಕೈಗೆ ಪಡಿತರ ಸಿಗಬೇಕು. ಕಡಿಮೆ ದರದಲ್ಲಿ ಅನ್ನ ಲಭ್ಯವಾಗಬೇಕೆಂದು ಅನ್ನಭಾಗ್ಯ ಯೋಜನೆ ಮತ್ತು ಇಂದಿರಾ ಕ್ಯಾಂಟೀನನ್ನು ಆರಂಭಿಸಿದ್ದರು. ಇಂದಿರಾ ಕ್ಯಾಂಟೀನ್ ಬಗ್ಗೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದ್ದರಿಂದಲೇ ತಾಲೂಕು ಕೇಂದ್ರಗಳಲ್ಲಿಯೂ ಇಂದಿರಾ ಕ್ಯಾಂಟೀನ್‍ಗಳನ್ನು ಆರಂಭಿಸಲಾಗುತ್ತಿದೆ ಎಂದು ತಿಳಿಸಿದರು.

ಶಾಸಕ ಎಂ.ಅಶ್ವಿನ್‍ಕುಮಾರ್, ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ, ಜಿ.ಪಂ ಸದಸ್ಯ ಮಂಜುನಾಥನ್, ಪುರಸಭೆ ಸದಸ್ಯರಾದ ಎಸ್.ಕೆ.ಕಿರಣ, ಮಂಜು, ಮಹಮ್ಮದ್ ಸಯೀದ್, ಎಲ್.ಮಂಜುನಾಥ್, ವಿ.ಮೋಹನ್, ಸಿದ್ದು, ಮಾದೇವಿ, ನಾಗರತ್ನ, ಬಿ.ಬೇಬಿ, ಬಿ.ವಸಂತ, ಆರ್.ನಾಗರಾಜು, ಆರ್.ತೇಜಸ್ವಿನಿ, ಎಸ್.ಮದನ್ ರಾಜ್, ಸಿ.ಪ್ರಕಾಶ, ಮುಖ್ಯಾಧಿಕಾರಿ ಅಶೋಕ, ನಾಮ ನಿರ್ದೇಶಿತ ಸದಸ್ಯರಾದ ಬಿ.ಮರಯ್ಯ, ಮಹದೇವ, ಆಲಗೂಡು ನಾಗರಾಜು, ಎನ್.ಸೋಮಣ್ಣ, ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: