ದೇಶ

ಕೇಂದ್ರ ಬಜೆಟ್ ಮಂಡನೆ ಮುಂದೂಡಲು ಪ್ರತಿಪಕ್ಷಗಳ ಮನವಿ

ನವದೆಹಲಿ: ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್(ಟಿಎಂಸಿ), ಡಿಎಂಕೆ, ಜೆಡಿಯು ಮೊದಲಾದ ಪ್ರತಿಪಕ್ಷಗಳು ಗುರುವಾರದಂದು ಚುನಾವಣಾ ಆಯೋಗವನ್ನು ಭೇಟಿಯಾಗಿ ಕೇಂದ್ರ ಬಜೆಟ್ ಮಂಡನೆಯನ್ನು ಮುಂದೂಡುವಂತೆ ಮನವಿ ಮಾಡಿತು.

ಫೆಬ್ರವರಿ 1 ರಂದು ಕೇಂದ್ರ ಸರಕಾರ ಬಜೆಟ್ ಮಂಡಿಸಲು ನಿರ್ಧರಿಸಿದ್ದು, ಫೆ.4ರಿಂದ 5 ರಾಜ್ಯಗಳ ಚುನಾವಣೆ ಪ್ರಕ್ರಿಯೆ ಆರಂಭವಾಗಲಿದೆ. ಮತದಾರರನ್ನು ಸೆಳೆಯಲು ಕೇಂದ್ರ ಸರಕಾರವು ಅವರಿಗಾಗಿ ಕೆಲ ಯೋಜನೆಗಳನ್ನು ಬಜೆಟ್ ನಲ್ಲಿ ಸೇರಿಸಬಹುದೆಂಬ ಭಯ ಪ್ರತಿಪಕ್ಷಗಳನ್ನು ಕಾಡುತ್ತಿದೆ.

ಮಾ.8 ರಂದು ಬಜೆಟ್ ಮಂಡಿಸಿ, ಮಾ.31ರ ಒಳಗೆ ಅನುಮೋದನೆ ಪಡೆಯಲಿ ಎಂದು ಟಿಎಂಸಿ ಪಕ್ಷದ ಮುಖಂಡರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ಇದು ಪ್ರಜಾಪ್ರಭುತ್ವಕ್ಕೆ ವಿರುದ್ಧವಾಗಿದೆ. ಬಜೆಟ್ ಮಂಡನೆ ದಿನಾಂಕವನ್ನು ಮುಂದೂಡುವಂತೆ ಚುನಾವಣಾ ಆಯೋಗದ ಬಳಿ ಮನವಿ ಮಾಡಿಕೊಂಡಿದ್ದೇವೆ. ಮತದಾರರನ್ನು ಮನದಲ್ಲಿಟ್ಟುಕೊಂಡು ಕೇಂದ್ರ ಬಜೆಟ್ ಮಂಡಿಸಿದರೆ, ನ್ಯಾಯಯುತ ಚುನಾವಣೆ ನಡೆಯುವುದು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡ ಗುಲಾಮ್ ನಬಿ ಅಜಾದ್ ಅಭಿಪ್ರಾಯಪಟ್ಟಿದ್ದಾರೆ.

11 ಮಂದಿಯಿದ್ದ ನಿಯೋಗ ಚುನಾವಣಾ ಆಯೋಗದ ಅಧಿಕಾರಿಗಳನ್ನು ಭೇಟಿಯಾಗಿ ಬಜೆಟ್ ದಿನಾಂಕ ಮುಂದೂಡುವಂತೆ ಮನವಿ ಮಾಡಿದೆ. ಚುನಾವಣಾ ಆಯೋಗ ಕೇಂದ್ರದ ಬಜೆಟ್ ಮಂಡನೆ ದಿನಾಂಕ ಮುಂದೂಡುವ ಬಗ್ಗೆ ಇನ್ನೂ ಏನು ಹೇಳಿಕೆ ನೀಡಿಲ್ಲ.

Leave a Reply

comments

Related Articles

error: