
ಮೈಸೂರು,ಡಿ.1:- ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ಮೈದಾನದಲ್ಲಿ ಮಹಾರಾಷ್ಟ್ರ ವಿರುದ್ಧ ನಡೆದ ರಣಜಿ ಕ್ರಿಕೆಟ್ ಪಂದ್ಯದಲ್ಲಿ ಕರ್ನಾಟಕ ಮೊದಲ ಜಯ ಸಾಧಿಸಿದ್ದು, ಪ್ರವಾಸಿ ತಂಡದ ವಿರುದ್ಧ 7ವಿಕೆಟ್ಗಳ ಗೆಲುವಿನ ನಗೆ ಬೀರಿದೆ.
ಕರ್ನಾಟಕದ ಗೆಲುವಿಗೆ ಮಹಾರಾಷ್ಟ್ರ ತಂಡ 186 ರನ್ಗಳ ಟಾರ್ಗೆಟ್ ನೀಡಿತ್ತು. ನಿನ್ನೆ ವಿಕೆಟ್ ನಷ್ಟವಿಲ್ಲದೇ 54ರನ್ಗಳಿಕೆ ಮಾಡಿತ್ತು. ಕೊನೆಯ ದಿನವಾಗಿದ್ದ ಇಂದು ಕರ್ನಾಟಕ ತಂಡಕ್ಕೆ 130 ರನ್ಗಳ ಅವಶ್ಯಕತೆ ಇತ್ತು. ಈ ಮೊತ್ತ ಬೆನ್ನಟ್ಟಿದ್ದ ತಂಡ ಕೇವಲ ಮೂರು ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿದೆ. 2ನೇ ಇನ್ನಿಂಗ್ಸ್ನಲ್ಲಿ ದೇವದತ್ತ ಪಡಿಕಲ್ (77) ಡಿ.ನಿಶ್ಚಲ್(61) ಹಾಗೂ ಕೌನೆನ್ ಅಬ್ಬಾಸ್ (34) ರನ್ಗಳಿಕೆ ಮಾಡಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದರು.
ಮೊದಲ ಇನ್ನಿಂಗ್ಸ್ನಲ್ಲಿ ಕರ್ನಾಟಕ ಮಾರಕ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 113 ರನ್ಗಳಿಗೆ ಆಲೌಟ್ ಆಗಿದ್ದ ಮಹಾರಾಷ್ಟ್ರ ತಂಡ 2ನೇ ಇನ್ನಿಂಗ್ಸ್ನಲ್ಲೂ 256 ರನ್ಗೆ ಸರ್ವಪತನ ಕಂಡು, ಎದುರಾಳಿಗೆ 184 ರನ್ಗಳ ಟಾರ್ಗೆಟ್ ನೀಡಿತು. ಇದಕ್ಕೂ ಮೊದಲು ಕರ್ನಾಟಕ ತಂಡ ಮೊದಲ ಇನ್ನಿಂಗ್ಸ್ನಲ್ಲಿ 186 ರನ್ಗಳಿಗೆ ಆಲೌಟ್ ಆಗಿತ್ತು. ಕರ್ನಾಟಕದ ಪರ ಮಾರಕ ಬೌಲಿಂಗ್ ಪ್ರದರ್ಶನ ನೀಡಿದ ಶ್ರೇಯಸ್ ಗೋಪಾಲ್ ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. 2ನೇ ಇನ್ನಿಂಗ್ಸ್ನಲ್ಲಿ 4ವಿಕೆಟ್ ಪಡೆದುಕೊಂಡ ಗೋಪಾಲ್, ಮೊದಲ ಇನ್ನಿಂಗ್ಸ್ನಲ್ಲಿ ಅಮೋಘ 40ರನ್ಗಳಿಕೆ ಮಾಡಿದ್ದರು. ಈಗಾಗಲೇ ಕರ್ನಾಟಕ ತಂಡ ಆಡಿರುವ ಎರಡು ಪಂದ್ಯಗಳಲ್ಲಿ ಎರಡೂ ಪಂದ್ಯ ಡ್ರಾ ಸಾಧಿಸಿ ತೃಪ್ತಿ ಪಟ್ಟುಕೊಂಡಿತು.(ಕೆ.ಎಸ್,ಎಸ್.ಎಚ್)