ಪ್ರಮುಖ ಸುದ್ದಿ

ಕೊಡವ ನ್ಯಾಷನಲ್ ಡೇ : ಮಳೆ ಸಂತ್ರಸ್ತರ ಪರವಾಗಿ ಹಕ್ಕೊತ್ತಾಯ ಮಂಡಿಸಿದ ಸಿಎನ್‍ಸಿ

ರಾಜ್ಯ(ಮಡಿಕೇರಿ) ಡಿ.3:- ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದ ಸಂತ್ರಸ್ತರಾಗಿರುವ ಕುಟುಂಬಗಳ ಸ್ವಾಭಿಮಾನದ ಬದುಕಿನ ಹಕ್ಕಿಗಾಗಿ ಮಿಡಿಯುವ ಮತ್ತು ಸ್ಫೂರ್ತಿ ನೀಡುವ ದಿನವನ್ನಾಗಿ 28ನೇ ಕೊಡವ ನ್ಯಾಷನಲ್ ಡೇ ಕಾರ್ಯಕ್ರಮ ಕೊಡವ ನ್ಯಾಷನಲ್ ಕೌನ್ಸಿಲ್ ವತಿಯಿಂದ ಮಡಿಕೇರಿಯಲ್ಲಿ ನಡೆಯಿತು.

ವಾಯುವ್ಯ ಕೊಡಗಿನ ಏಳು ನಾಡುಗಳಲ್ಲಿ ಘಟಿಸಿದ ಜಲಸ್ಫೋಟ ಮತ್ತು ಭೂ ಸ್ಫೋಟದಿಂದಾಗಿ ಅನೇಕ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದು, ಇವರಲ್ಲಿ ಹೊಸ ಬದುಕಿನ ಸ್ಫೂರ್ತಿ ತುಂಬುವ ಉದ್ದೇಶದಿಂದ ಕೊಡವ ನ್ಯಾಷನಲ್ ಡೇಯನ್ನು ಈ ಬಾರಿ ಸಂತ್ರಸ್ತರ ಪರವಾದ ಹಕ್ಕುಗಳ ಮಂಡನೆಯ ದಿನವನ್ನಾಗಿ ಆಚರಿಸುವ ಮೂಲಕ ನೊಂದವರ ನೋವಿಗೆ ಸ್ಪಂದಿಸುವ ಕಾರ್ಯವನ್ನು ಮಾಡಲಾಗಿದೆ ಎಂದು ಸಿಎನ್‍ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಗಾಂಧಿ ಮೈದಾನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ತಿಳಿಸಿದರು.

ಕಳೆದ 28 ವರ್ಷಗಳಿಂದ ಕೊಡವರ ಹಕ್ಕಿಗಾಗಿ ಶಾಂತಿಯುತ ಹೋರಾಟವನ್ನು ನಡೆಸುತ್ತಾ ಬಂದಿರುವ ಸಿಎನ್‍ಸಿ ಸಂಘಟನೆ ಇಂದು ಪ್ರಕೃತಿ ವಿಕೋಪದ ಸಂತ್ರಸ್ತರಿಗಾಗಿ ಮಿಡಿಯುವ ಕಾರ್ಯವನ್ನು ಮಾಡುತ್ತಿದೆ. ಘಟನೆ ಸಂಭವಿಸಿ ಮೂರು ತಿಂಗಳುಗಳೇ ಕಳೆದಿದ್ದರು ಸರ್ಕಾರ ಯಾವುದೇ ಪರಿಹಾರ ಕಾರ್ಯವನ್ನು ನೈಜ ಕಾಳಜಿಯಿಂದ ಮಾಡುತ್ತಿಲ್ಲ. ಸಂತ್ರಸ್ತರ ಪುನಶ್ಚೇತನಕ್ಕಾಗಿ ಸಿಎನ್‍ಸಿ ನಿರಂತರ ಹೋರಾಟ ನಡೆಸಲಿದ್ದು, ಸರಕಾರವನ್ನು ಎಚ್ಚರಿಸುವ ಕಾರ್ಯ ಮಾಡಲಿದೆ ಎಂದರು. ಸಂತ್ರಸ್ತರಿಗೆ ಸೂಕ್ತ ಪರಿಹಾರವನ್ನು ನೀಡಲು ಸರಕಾರಕ್ಕೆ ಸಾಧ್ಯವಾಗದೆ ಇದ್ದರೆ ಕೊಡಗನ್ನು ನಾವೇ ಪುನರ್ ನಿರ್ಮಿಸಿಕೊಳ್ಳುತ್ತೇವೆ ಎಂದು ನಾಚಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಇದೇ ಸಂದರ್ಭ ಅವರು ಹಲವು ಬೇಡಿಕೆಗಳ ಹಕ್ಕೊತ್ತಾಯವನ್ನು ಮಂಡಿಸಿದರು.  ಸಭಾ ಕಾರ್ಯಕ್ರಮಕ್ಕೂ ಮೊದಲು ಸಿಎನ್‍ಸಿ ಪ್ರಮುಖರು ನಗರದ ಮುಖ್ಯ ಬೀದಿಗಳಲ್ಲಿ ಸಾಂಪ್ರದಾಯಿಕ ಕೊಡವ ಉಡುಪಿನೊಂದಿಗೆ ಮೆರವಣಿಗೆ ನಡೆಸಿದರು. ಮಳೆ ಸಂತ್ರಸ್ತರು ಕೂಡ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಗಾಂಧಿ ಮೈದಾನದ ವೇದಿಕೆಯಯಲ್ಲಿ ಗುರುಹಿರಿಯರನ್ನು ಸ್ಮರಿಸಿಕೊಳ್ಳುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಕೊಡವ ಸಮಾಜದ ಅಧ್ಯಕ್ಷ ಕೆ.ಎಸ್.ದೇವಯ್ಯ, ಸಿಎನ್‍ಸಿ ಸಂಘಟನೆಯ ಪದಾಧಿಕಾರಿಗಳು ಈ ಸಂದರ್ಭ ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: