ಕರ್ನಾಟಕ

ಏಡ್ಸ್ ಮುಕ್ತ ಜಿಲ್ಲೆಯನ್ನಾಗಿಸಲು ನ್ಯಾ. ಸಿ.ಕೆ.ಚಂದ್ರಶೇಖರ್ ಕರೆ

ಹಾಸನ (ಡಿ.3): ಜೀವನ ಶೈಲಿಗೆ ಲಕ್ಷಣ ರೇಖೆ ಹಾಕಿಕೊಂಡು ಮುಂಜಾಗ್ರತೆ ವಹಿಸುವ ಮೂಲಕ ಮಾರಕ ರೋಗವಾದ ಏಡ್ಸ್ ನಿಯಂತ್ರಣಕ್ಕೆ ಮುಂದಾಗುವಂತೆ 3ನೇ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಿ.ಕೆ.ಚಂದ್ರಶೇಖರ್ ಮರಗುರು ಅವರು ಕರೆ ನೀಡಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ನಿಯಂತ್ರಣ ಮತ್ತು ಪತಿ ಬಂಧಕ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ನಗರದ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ವಿಶ್ವ ಏಡ್ಸ್ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರು ಹೋಗಿ ಇಂತಹ ಭಯಾನಕ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂದರಲ್ಲದೆ, ಜೀವನಕ್ಕೆ ಕಟ್ಟುಪಾಡುಗಳನ್ನು ಅಳವಡಿಸಿಕೊಂಡು ರೋಗ ಮುಕ್ತ ಸಮಾಜ ನಿರ್ಮಾಣಕ್ಕೆ ಕಂಕಣ ಬದ್ಧರಾಗುವಂತೆ ತಿಳಿಸಿದರು. ಹೆಚ್.ಐ.ವಿ ಸೋಂಕಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರಬೇಕು. ಈ ನಿಟ್ಟಿನಲ್ಲಿ ಉತ್ತಮ ಜೀವನ ನಡೆಸಲು ಅವಕಾಶ ಕಲ್ಪಿಸಬೇಕು ಎಂದರು. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರೆಲ್ಲರೂ ತಮ್ಮ ನೆರೆಹೊರೆಯವರಿಗೆ ಅರಿವು ಮೂಡಿಸುವಂತೆ ತಿಳಿಸಿದರು.

ಜಗತ್ತಿನಲ್ಲಿ 34 ಮಿಲಿಯನ್ ಜನರು ಈ ರೋಗದಿಂದ ಬಳಲುತ್ತಿದ್ದಾರೆ. ಕರ್ನಾಟಕ ರಾಜ್ಯ ದೇಶದಲ್ಲಿ 9ನೇ ಸ್ಥಾನದಲ್ಲಿದೆ ಎಂದರಲ್ಲೆ ರಾಜ್ಯದಲ್ಲಿ ಬಾಗಲಕೋಟೆ, ಬೆಳಗಾವಿ, ಬಿಜಾಪುರ, ಚಿತ್ರದುರ್ಗ ಕ್ರಮವಾಗಿ ಮೊದಲ ನಾಲ್ಕು ಸ್ಥಾನದಲ್ಲಿವೆ ಎಂದರು. ಜಿಲ್ಲೆಯನ್ನು ಏಡ್ಸ್ ಮುಕ್ತವನ್ನಾಗಿಸಲು ಜನರಲ್ಲಿ ಹೆಚ್ಚಿನ ತಿಳುವಳಿಕೆ ಮೂಡಿಸಬೇಕು ಎಂದರು.

ಹಿರಿಯ ಸಿವಿಲ್ ಜಡ್ಜ್ ಹಾಗೂ ಕಾನೂನು ಸೇನಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯವರಾದ ಸಿ.ಕೆ ಬಸವರಾಜು ಅವರು ಮಾತನಾಡಿ ಪ್ರತಿ ಎ.ಆರ್.ಟಿ ಕೇಂದ್ರದಲ್ಲಿ ಇಬ್ಬರು ಪ್ಯಾನಲ್ ವಕೀಲರು ಇರುತ್ತಾರೆ, ವಕೀಲರ ಮೂಲಕ ಕಾನೂನು ಸೇವೆಯನ್ನು ಉಚಿತವಾಗಿ ಪಡೆಯಬಹುದಾಗಿದೆ ಎಂದರು. ಈ ರೋಗ ದೇಶಕ್ಕೆ ಶೋಭೆ ತರುವಂತದಲ್ಲ. ಪ್ರತಿ ಗ್ರಾಮದಲ್ಲಿ ಜಾಗೃತಿ ಮೂಡಿಸಿ ಹೆಚ್.ಐ.ವಿ ಸೋಂಕಿತರ ಸಂಖ್ಯೆಯನ್ನು ಗಣನೀಯವಾಗಿ ಇಳಿಮುಖ ಮಾಡಬೇಕು ಎಂದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಸತೀಶ್‍ಕುಮಾರ್ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಮಾತನಾಡಿ, ಇಂದು 30ನೇ ವಿಶ್ವ ಏಡ್ಸ್ ದಿನಾಚರಣೆ ಆಚರಿಸುತ್ತಿದ್ದು. ಆರೋಗ್ಯ ಕಾರ್ಯಕರ್ತೆಯರು ಹಾಗೂ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಅರಿವು ಮೂಡಿಸುವ ಮೂಲಕ ಜಿಲ್ಲೆಯಲ್ಲಿ ಈ ರೋಗವನ್ನು ನಿಯಂತ್ರಣಕ್ಕೆ ತರಲಾಗುತ್ತಿದೆ ಎಂದರಲ್ಲದೆ ಮುಂದಿನ ದಿನಗಳಲ್ಲಿ ಈ ರೋಗವನ್ನು ಸಂಪೂರ್ಣ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷರಾದ ಎಂ.ಡಿ ವೆಂಕಟೇಶ್ ರವರು ಮಾತನಾಡಿ ಮನುಕುಲಕ್ಕೆ ಮಾರಕವಾದ ಏಡ್ಸ್ ರೋಗದ ಪರಿಣಾಮಕಾರಿ ನಿಯಂತ್ರಣಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದರು.

ಡಾ.ನಾಗೇಶ್ ಆರಾಧ್ಯ ಅವರು ಪ್ರಸ್ತಾವಿಕವಾಗಿ ಮಾತನಾಡಿ ಶೇ.30ರಷ್ಟು ಜನರಿಗೆ ಹೆಚ್.ಐ.ವಿ. ಸೋಂಕು ಇರುವ ವಿಷಯ ಗೊತ್ತಿಲ್ಲ, ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದರು. ಜಿಲ್ಲೆಯಲ್ಲಿ ಹೆಚ್.ಐ.ವಿ. ಸೋಂಕಿತ 23 ತಾಯಂದಿರಿಗೆ ಹೆರಿಗೆ ಮಾಡಿಸಿದ್ದು, ಸೋಂಕು ಮುಕ್ತ ಮಕ್ಕಳು ಜನಿಸಿರುವುದು ಸಂತೋಷಕರ ಸಂಗತಿ ಎಂದರು.

ಡಾ.ರಾಜ್ ಗೋಪಾಲ್ ಮಾತನಾಡಿ ಪ್ರತಿಯೊಬ್ಬರು ಆರೋಗ್ಯಯುತ ಜೀವನ ನಡೆಸುವ ನಿಟ್ಟಿನಲ್ಲಿ ಸಮತೋಲಿತ ಆಹಾರ ಸೇವನೆ ಜೊತೆಗೆ ವ್ಯಾಯಾಮ ಮಾಡುವುದನ್ನು ರೂಢಿಸಿಕೊಳ್ಳಬೇಕು ಎಂದರಲ್ಲದೆ ಮನಸ್ಸಿನ ಚಂಚಲತೆಗೆ ಕಡಿವಾಣ ಹಾಕಿ ಸ್ವಚ್ಛ ಜೀವನ ನೆಡೆಸಲು ಇಚ್ಛಾಶಕ್ತಿ ಬೆಳಿಸಿಕೊಳ್ಳಬೇಕು ಎಂದರು.

ಈ ಕಾರ್ಯಕ್ರಮಕ್ಕೂ ಮೊದಲು ವಿಶ್ವ ಏಡ್ಸ್ ದಿನಾಚರಣೆ ಅಂಗವಾಗಿ ಏರ್ಪಡಿಸಲಾಗಿದ್ದ ಜಾಥಾ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿಯವರ ಕಚೇರಿ ಆವರಣದಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್. ವೈಶಾಲಿ ಅವರು ಹಸಿರು ನಿಶಾನೆ ತೋರುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. (ಎನ್.ಬಿ)

Leave a Reply

comments

Related Articles

error: