ದೇಶಪ್ರಮುಖ ಸುದ್ದಿ

ತೆಲಂಗಾಣ ಚುನಾವಣೆ: ಯುಪಿ ಸಿಎಂ ಯೋಗಿ – ಓವೈಸಿ ಮಾತಿನ ಯುದ್ಧ

ಹೈದರಾಬಾದ್ (ಡಿ.3): ತೆಲಂಗಾಣ ವಿಧಾನಸಭೆ ಚುನಾವಣಾ ಪ್ರಚಾರದಲ್ಲಿ ನಿರತರಾಗಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹಾಗೂ ಹೈದರಾಬಾದ್ ಸಂಸದ ಎಐಎಂಐಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ನಡುವೆ ಮಾತಿನ ಯುದ್ಧವೇ ಏರ್ಪಟ್ಟಿದೆ.

ಬಿಜೆಪಿಯ ಅತ್ಯಂತ ಪ್ರಮುಖ ತಾರಾ ಪ್ರಚಾರಕರಾಗಿ ತೆಲಂಗಾಣದಲ್ಲಿ ಪ್ರಚಾರದಲ್ಲಿ ನಿರತರಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಅಸಾದುದ್ದಿನ್ ಓವೈಸಿ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಆದರೆ ಯುಪಿ ಸಿಎಂ ಹೇಳಿಕೆಗೆ ಓವೈಸಿ ತಿರುಗೇಟು ನೀಡಿದ್ದಾರೆ.

ತೆಲಂಗಾಣದಲ್ಲಿ ಪ್ರಚಾರ ಸಭೆಯೊಂದರಲ್ಲಿ ಮಾತನಾಡುತ್ತಿದ್ದ ಯೋಗಿ ಆದಿತ್ಯನಾಥ್, ‘ಅಕಸ್ಮಾತ್ ತೆಲಂಗಾಣದಲ್ಲಿ ಬಿಜೆಪಿಯೇನಾದರೂ ಅಧಿಕಾರಕ್ಕೆ ಬಂದರೆ ಎಐಎಂಐಎಂ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಹೈದರಾಬಾದಿನಿಂದ ಪಲಾಯನಗೈಯುತ್ತಾರೆ’ ಎಂಬ ಹೇಳಿಕೆ ನೀಡಿದ್ದರು. ‘ಇತಿಹಾಸದಲ್ಲಿ ಹೈದರಾಬಾದಿನ ನಿಜಾಮ ಹೇಗೆ ಹೈದರಾಬಾದಿನಿಂದ ಓಡಿಹೋದರೋ ಹಾಗೆಯೇ ಓಬವೈಸಿಯೂ ಓಡಿಹೋಗುತ್ತಾರೆ’ ಎಂದು ಯೋಗಿ ಹೇಳಿದ್ದರು.

ಇದಕ್ಕೆ ತಿರುಗೇಟು ನೀಡಿರುವ ಓವೈಸಿ, “ನಾನು ನನ್ನ ತಂದೆಯ ರಾಷ್ಟ್ರದಲ್ಲಿದ್ದೇನೆ. ನಾನ್ಯಾಕೆ ಇಲ್ಲಿಂದ ಓಡಿ ಹೋಗಲಿ? ಇಲ್ಲಿಂದ ನನ್ನನ್ನು ಪಲಾಯನಗೊಳಿಸಲು ಯಾರಿಗೂ ಸಾಧ್ಯವಿಲ್ಲ. ಒತ್ತಾಯದಿಂದಲೂ ನನ್ನನ್ನು ಇಲ್ಲಿಂದ ಓಡಿಸುವುದಕ್ಕೆ ಸಾಧ್ಯವಿಲ್ಲ. ಇಂಥ ಬೆದರಿಕೆಗಳಿಗೆ ನಾನು ಬಗ್ಗೋಲ್ಲ. ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಮದ್ರ ಮೋದಿ ಇಬ್ಬರದೂ ಒಂದೇ ರೀತಿಯ ಮನಸ್ಥಿತಿ” ಎಂದಿದ್ದಾರೆ.

ಯೋಗಿ ಅವರ ಹೇಳಿಕೆಗೆ ಅಸಾದುದ್ದಿನ್ ಓವೈಸಿ ನೀಡಿದ ಪ್ರತಿಕ್ರಿಯೆ ಸಾಲದೆಂಬಂತೆ, ಅವರ ಸಹೋದರ ಅಕ್ಬರುದ್ದಿನ್ ಓವೈಸಿ ಸಹ ಯೋಗಿಗೆ ಪ್ರತ್ಯುತ್ತರ ನೀಡಿದ್ದು, “ನಾವು ಓಡಿಹೋಗುವುದಕ್ಕಾಗಿ ಇಲ್ಲಿಲ್ಲ. ನಮ್ಮ ಸಾವಿರ ತಲೆಮಾರುಗಳು ಇಲ್ಲಿ ಬದುಕುತ್ತಿವೆ. ಮೊದಲು ಉತ್ತರ ಭಾರತದ ನಿಮ್ಮದೇ ಕ್ಷೇತ್ರದಲ್ಲಿ 150 ಮಕ್ಕಳು ಮೃತರಾದರಲ್ಲ, ಅದಕ್ಕೆ ಪರಿಹಾರ ಹುಡುಕಿ. ನಂತರ ನಮ್ಮನ್ನು ಓಡಿಸಬಹುದು” ಎಂದು ಕುಹಕದ ಪ್ರತಿಕ್ರಿಯೆ ನೀಡಿದ್ದಾರೆ.

ತೆಲಂಗಾಣದ 119 ಕ್ಷೇತ್ರಗಳಿಗೆ ಡಿಸೆಂಬರ್ 7 ರಂದು ಚುನಾವಣೆ ನಡೆಯಲಿದ್ದು, ಡಿ.11 ರಂದು ಫಲಿತಾಂಶ ಹೊರಬೀಳಲಿದೆ. (ಎನ್.ಬಿ)

Leave a Reply

comments

Related Articles

error: