ಪ್ರಮುಖ ಸುದ್ದಿ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಜನಾರ್ದನ ಪೂಜಾರಿ ಹೇಳಿಕೆಗೆ ಮುಸ್ಲಿಂ ಒಕ್ಕೂಟ ಗರಂ

ರಾಜ್ಯ(ಮಂಗಳೂರು)ಡಿ.4:- ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗಲೇಬೇಕೆಂದು ಖಾಸಗಿ ಸುದ್ದಿ ವಾಹಿನಿಗೆ ಹೇಳಿಕೆ ನೀಡಿದ್ದ ಕಾಂಗ್ರೆಸ್ ಹಿರಿಯ ಮುಖಂಡ ಜನಾರ್ದನ ಪೂಜಾರಿ ವಿರುದ್ಧ ಹಲವು ಮುಸ್ಲಿಮರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹೊರಹಾಕುತ್ತಿರುವ ಮಧ್ಯೆಯೇ ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟ ಕೂಡ ಗರಂ ಆಗಿದೆ.

ಜನಾರ್ದನ ಪೂಜಾರಿ ಅವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಒಕ್ಕೂಟ ಅಧ್ಯಕ್ಷ ಹಾಗೂ ಮೇಯರ್ ಮಾಜಿ ಕೆ.ಅಶ್ರಫ್, ಅಯೋಧ್ಯೆಯ ಬಾಬ್ರಿ ಮಸೀದಿ ಮತ್ತು ರಾಮ ಜನ್ಮ ಭೂಮಿ ವಿವಾದಿತ ವ್ಯಾಜ್ಯ ಸುಪ್ರೀಂ ಕೋರ್ಟ್ ನಲ್ಲಿ ಇತ್ಯರ್ಥಕ್ಕೆ ಬಾಕಿಯಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕ ಜನಾರ್ದನ ಪೂಜಾರಿ ಅವರು ಈ ರೀತಿಯ ಹೇಳಿಕೆ ನೀಡಿ ಒಂದು ನಿರ್ದಿಷ್ಟ ಸಮುದಾಯದ ವಿರುದ್ಧ ಮತ್ತು ಇನ್ನೊಂದು ಸಮುದಾಯದ ಪರ ಮಾತನಾಡಿದ್ದಾರೆ ಎಂದು ಅಶ್ರಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಿರಂತರವಾಗಿ ದಶಕಗಳಿಂದ ಚುನಾವಣೆಯಲ್ಲಿ ಬೆಂಬಲಿಸುತ್ತಾ ಬಂದಿರುವ ಒಂದು ನಿಷ್ಠಾವಂತ ಸಮುದಾಯದ ಧಾರ್ಮಿಕ ಭಾವನೆ ಮತ್ತು ನಂಬಿಕೆಗೆ ಪೂಜಾರಿ ಅವರು ತೀವ್ರ ಘಾಸಿ ಉಂಟು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿರಿಯ ರಾಜಕೀಯ ನಾಯಕರಾಗಿ ಅವರ ನಡೆ ಸಂಶಯಕ್ಕೆ ಎಡೆಮಾಡಿದ್ದು, ಪಕ್ಷದ ಸಿದ್ಧಾಂತಕ್ಕೆ ಹಾನಿಯಾಗುವುದರಲ್ಲಿ ಸಂಶಯವಿಲ್ಲ. ಮುಸ್ಲಿಂ ಅಲ್ಪಸಂಖ್ಯಾತ ಮತದಾರರು ಈ ರೀತಿಯ ದ್ವಂದ್ವ ನಿಲುವು ಹೊಂದಿದ ನಾಯಕರ ಮೇಲೆ ವಿಶ್ವಾಸ ಕಳೆದುಕೊಳ್ಳುವ ಕಾಲ ದೂರವಿಲ್ಲ. ಅಲ್ಲದೆ, ಪೂಜಾರಿಯವರ ಈ ದ್ವಂದ್ವ ನಿಲುವಿನ ಬಗ್ಗೆ ಜಿಲ್ಲೆ ಮತ್ತು ರಾಜ್ಯ ಮುಸ್ಲಿಂ ಅಲ್ಪಸಂಖ್ಯಾತ ಕಾಂಗ್ರೆಸ್ ನಾಯಕರು ಮೌನ ಮುರಿದು ತಕ್ಷಣ ಪ್ರತಿಕ್ರಿಯಿಸಲಿ ಎಂದು ಆಗ್ರಹಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: