
ಕರ್ನಾಟಕ
ಬೆಳಗಾವಿ: ಬುಲೇರೋ-ಟ್ರ್ಯಾಕ್ಟರ್ ನಡುವೆ ಮುಖಾಮುಖಿ ಡಿಕ್ಕಿ: 6 ಮಂದಿ ದುರ್ಮರಣ
ಬೆಳಗಾವಿ,ಡಿ.4-ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡು ಮರಳಿ ಬರುವಾಗ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ 6 ಮಂದಿ ಮೃತಪಟ್ಟಿರುವ ಘಟನೆ ಗೋಕಾಕ್ ತಾಲೂಕಿನ ಹಿರೇನಂದಿ ಗ್ರಾಮದ ಬಳಿ ನಡೆದಿದೆ.
ಸವದತ್ತಿ ತಾಲೂಕಿನ ಮಾಡಮಗೇರಿ ಹಾಗೂ ಯರಜರವಿ ಗ್ರಾಮದ ನಿವಾಸಿಗಳಾದ ಗಂಗವ್ವ ಹುರಳಿ (30) ಕಾಶವ್ವ ಖಂಡ್ರಿ (70), ಯಲ್ಲವ್ವ ಪೂಜಾರಿ (45) ಯಲ್ಲವ್ವ ಗುಂಡಪ್ಪನವರ (40) ಹಾಗೂ ರೇಣುಕಾ ಸೊಪಾಡ್ಲ (35) ಮಲ್ಲವ್ವ ಖಂಡ್ರಿ ಘಟನೆಯಲ್ಲಿ ಮೃತಪಟ್ಟ ದುರ್ದೈವಿಗಳು.
ಇಂದು ಮುಂಜಾನೆ 3ಕ್ಕೆ ಘಟನೆ ಸಂಭವಿಸಿದ್ದು, ಕಬ್ಬು ತುಂಬಿದ ಟ್ರ್ಯಾಕ್ಟರ್ ಹಾಗೂ ಬುಲೇರೋ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬುಲೇರೋದಲ್ಲಿ ಪ್ರಯಾಣಿಸುತ್ತಿದ್ದ ನಾಲ್ವರು ಸ್ಥಳದಲ್ಲೇ ಮೃತಪಟ್ಟರೆ, ಇಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಬುಲೆರೋದಲ್ಲಿ ಪ್ರಯಾಣಿಸುತ್ತಿದ್ದ ಇನ್ನುಳಿದ 8ಕ್ಕೂ ಅಧಿಕ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಅಪಘಾತದ ರಭಸಕ್ಕೆ ಬೊಲೆರೋ ಜೀಪ್ ನಜ್ಜುಗುಜ್ಜಾಗಿ ರಸ್ತೆ ಬದಿ ಉರುಳಿ ಬಿದ್ದಿದೆ. ಅಪಘಾತದಿಂದಾಗಿ ಕಬ್ಬಿನ ರಾಶಿ ರಸ್ತೆಯಲ್ಲೆಲ್ಲಾ ಚೆಲ್ಲಾಡಿದ್ದು , ಸುಮಾರು ಬೆಳಗ್ಗೆ 6 ಗಂಟೆಯವರೆಗೂ ಈ ಭಾಗದಲ್ಲಿ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ಗೋಕಾಕ್ ಗ್ರಾಮಾಂತರ ಠಾಣೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಸಾಲು ಗಟ್ಟಿ ನಿಂತಿದ್ದ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಗೋಕಾಕ್ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಎಂ.ಎನ್)