ಮೈಸೂರು

ಅಪರಾಧ ತಡೆಯುವುದು ಕೇವಲ ಪೊಲೀಸರ ಜವಾಬ್ದಾರಿ ಮಾತ್ರವಲ್ಲ, ಸಾರ್ವಜನಿಕರ ಸಹಕಾರವೂ ಅಷ್ಟೇ ಅತ್ಯಗತ್ಯ : ಎಸಿಪಿ ಧರ್ಮಪ್ಪ

ಮೈಸೂರು,ಡಿ.4:- ಅಪರಾಧ ತಡೆಯುವುದು ಕೇವಲ ಪೊಲೀಸರ ಜವಾಬ್ದಾರಿ ಮಾತ್ರವಲ್ಲ. ಸಾರ್ವಜನಿಕರ ಸಹಕಾರವೂ ಅಷ್ಟೇ ಅತ್ಯಗತ್ಯ ಎಂದು ಕೆ.ಆರ್.ಠಾಣೆಯ ಎಸಿಪಿ ಧರ್ಮಪ್ಪ ತಿಳಿಸಿದರು.

ನಾರಾಯಣ ಶಾಸ್ತ್ರೀ ರಸ್ತೆಯಲ್ಲಿಂದು ಲಕ್ಷ್ಮಿಪುರಂ ಪೊಲೀಸ್ ಠಾಣೆಯ ವತಿಯಿಂದ ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಪೊಲೀಸರು ತಮಟೆ ಬಾರಿಸುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ಅಪರಾಧ ತಡೆ ಮಾಸಾಚರಣೆಯ ಅಂಗವಾಗಿ ಪ್ರತಿದಿನ ಒಂದೊಂದು ಕಡೆ ಪೊಲೀಸರು ಅಪರಾಧ ತಡೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುತ್ತಿದ್ದಾರೆ. ಈ ಸಂದರ್ಭ ಮಾತನಾಡಿದ ಎಸಿಪಿ ಧರ್ಮಪ್ಪ ಬೆಲೆಬಾಳುವ ಒಡವೆಗಳನ್ನು ಧರಿಸಿ ಜನನಿಬಿಡ ಪ್ರದೇಶಗಳಲ್ಲಿ ಒಂಟಿಯಾಗಿ ತಿರುಗಾಡಬೇಡಿ. ಚಿನ್ನದ ಆಭರಣಗಳನ್ನು ಧರಿಸಿ ಓಡಾಡುವ ಸಂದರ್ಭದಲ್ಲಿ ಬಟ್ಟೆಯಿಂದ ಮರೆಮಾಚಿಕೊಳ್ಳಿ. ಒಂಟಿಯಾಗಿ ಓಡಾಡುವಾಗ ಅಪರಿಚಿತ ವ್ಯಕ್ತಿಗಳು ನಿಮ್ಮ ಬಳಿ ಬಂದು ವಿಳಾಸ ಕೇಳುವಾಗ ಎಚ್ಚರವಹಿಸಿ. ಮನೆಯಲ್ಲಿ ಅಪ್ರಾಪ್ತರನ್ನು ಒಂಟಿಯಾಗಿ ಬಿಟ್ಟು ಹೋಗುವುದನ್ನು ತಪ್ಪಿಸಿ. ಮನೆ ಬಾಗಿಲು ತಟ್ಟಿದಾಗ, ಅಥವಾ ಬೆಲ್ ಮಾಡಿದಾಗ ಬಾಗಿಲು ತೆರೆಯದೇ ಕಿಟಕಿಯಿಂದ ನೋಡಿ ಖಚಿತಪಡಿಸಿಕೊಂಡು ಬಾಗಿಲು ತೆರೆಯಿರಿ. ಮನೆಬಿಟ್ಟು ಎರಡು ದಿನ ಹೊರಹೋಗುವುದಿದ್ದಲ್ಲಿ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಿ. ಅಪರಾಧ ತಡೆಯುವುದು ಕೇವಲ ಪೊಲೀಸರ ಜವಾಬ್ದಾರಿಯಷ್ಟೇ ಅಲ್ಲ. ಅದಕ್ಕೆ ನಿಮ್ಮ ಸಹಕಾರ ಕೂಡ ಅತ್ಯಗತ್ಯ ಎಂದರು. ಸಾರ್ವಜನಿಕರಿಗೆ ಕರಪತ್ರ ಹಂಚಿ ಜಾಗೃತಿ ಮೂಡಿಸಿದರು.

ಈ ಸಂದರ್ಭ ಲಕ್ಷ್ಮಿಪುರಂ ಠಾಣೆಯ ಇನ್ಸಪೆಕ್ಟರ್ ರಘು, ಎಎಸ್ ಐ ಗೌರಿಶಂಕರ್, ಸಿಬ್ಬಂದಿಗಳಾದ ಕುಮಾರ್, ಸಿದ್ದಪ್ಪಾಜಿ, ಸುದೀಪ್, ಮಲ್ಲಿಕಾರ್ಜುನ್ ಮತ್ತಿತರರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: