ಪ್ರಮುಖ ಸುದ್ದಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸವಾರರನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ಬಂಧನ

ರಾಜ್ಯ(ಬೆಂಗಳೂರು)ಡಿ.12:- ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (ಕೆಐಎ) ರಸ್ತೆಯಲ್ಲಿ ವಾಹನ ಚಾಲಕರು ಮತ್ತು ಸವಾರರನ್ನು ಬೆದರಿಸಿ ದರೋಡೆ ಮಾಡುತ್ತಿದ್ದ ಗ್ಯಾಂಗ್ ನ್ನು ಈಶಾನ್ಯ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಹುಣಸೆಮಾರನಹಳ್ಳಿ ಫ್ಲೈಓವರ್‌ ಮತ್ತು ಬಚ್ಚಹಳ್ಳಿ ಕ್ರಾಸ್‌ ಗೇಟ್‌ ಬಳಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಆರ್‌.ಟಿ. ನಗರ ನಿವಾಸಿಗಳಾದ ಮಹಮ್ಮದ್‌ ಇಫ್ತಿಕರ್‌ ಅಲಿ (20), ಸೈಯ್ಯದ್‌ ಸುಹೇಲ್‌ (19) ಹಾಗೂ ಶೇಖ್‌ ಅಸ್ಗರ್‌ (21) ಬಂಧಿತರು. ಸರಣಿಯಾಗಿ ನಡೆದಿದ್ದ 6 ದರೋಡೆ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾದ ಮಹಮ್ಮದ್‌ ಅರ್ಷದ್‌ ಖಾನ್‌ (19) ಎಂಬಾತನನ್ನು ನ.29ರಂದು ಬೆಳಗ್ಗೆ ಗುಂಡು ಹಾರಿಸಿ ಪೊಲೀಸರು ಬಂಧಿಸಿದ್ದರು.

ಬಂಧಿತ ಆರೋಪಿಗಳಿಂದ 2 ದ್ವಿಚಕ್ರ ವಾಹನ, 5 ಮೊಬೈಲ್‌ ಫೋನ್‌, ಒಂದು ಬೆಳ್ಳಿ ಸರ ಹಾಗೂ ನಗದು ಜಪ್ತಿ ಮಾಡಲಾಗಿದೆ. ಪ್ರಮುಖ ಆರೋಪಿ ಮಹಮ್ಮದ್‌ ಅರ್ಷದ್‌ ಖಾನ್‌ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ್ದ. ಜಾಮೀನಿನ ಮೇಲೆ ಬಿಡುಗಡೆಯಾಗಿ ಹೊರ ಬಂದ ಬಳಿಕ ಉಳಿದ ಮೂವರನ್ನು ಸೇರಿಸಿಕೊಂಡು ಸಂಚು ರೂಪಿಸಿ ದರೋಡೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ನ.29ರಂದು ನಸುಕಿನಲ್ಲಿ ಹುಣಸೆಮಾರನಹಳ್ಳಿ ಫ್ಲೈಓವರ್‌ ಬಳಿ ಕ್ಯಾಬ್‌ಗಾಗಿ ಕಾಯುತ್ತಿದ್ದ ಖಾಸಗಿ ಸಂಸ್ಥೆ ಉದ್ಯೋಗಿಯನ್ನು ಬೆದರಿಸಿ ಮೊಬೈಲ್‌ ಫೋನ್‌ ಕಸಿದುಕೊಂಡಿದ್ದರು. ನಂತರ ಓರ್ವ ಕ್ಯಾಬ್‌ ಚಾಲಕ ಹಾಗೂ ಆತನ ನೆರವಿಗೆ ಬಂದ ಮತ್ತೊಬ್ಬ ವ್ಯಕ್ತಿಯಿಂದ 2 ಫೋನ್‌ಗಳು ಹಾಗೂ ಒಂದು ದ್ವಿಚಕ್ರ ವಾಹನ ದೋಚಿದ್ದರು. ಮೂರನೇ ಪ್ರಕರಣದಲ್ಲೂ ಕ್ಯಾಬ್‌ ಚಾಲಕನಿಗೆ ಬೆದರಿಸಿ ಬೆಳ್ಳಿ ಸರ ಹಾಗೂ ಮೊಬೈಲ್‌ಫೋನ್‌ ದೋಚಿದ್ದರು. ಈ ಕುರಿತು ಚಿಕ್ಕಜಾಲ ಠಾಣೆಯಲ್ಲಿ ಮೂರು ಪ್ರತ್ಯೇಕ ಕೇಸ್‌ಗಳು ದಾಖಲಾಗಿದ್ದವು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: