ಪ್ರಮುಖ ಸುದ್ದಿ

ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ ಆರೋಪ :  ಜಾಥಾ ನಡೆಸಲು ನಿರ್ಧಾರ

ರಾಜ್ಯ(ಮಡಿಕೇರಿ) ಡಿ.4 :- ಕೊಡಗಿನ ಅತಿವೃಷ್ಟಿ ಹಾನಿ ಸಂತ್ರಸ್ತರ ಬದುಕನ್ನು ಹಸನು ಮಾಡಲು ಅಗತ್ಯವಿರುವ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳುವಲ್ಲಿ ರಾಜ್ಯ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿರುವ ಕೊಡಗು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ, ಮುಖ್ಯಮಂತ್ರಿಗಳು ಜಿಲ್ಲೆಗೆ ಆಗಮಿಸುವ ಸಂದರ್ಭ ಸಂತ್ರಸ್ತರ ಬೃಹತ್ ಜಾಥಾವನ್ನು ನಡೆಸಲು ನಿರ್ಧರಿಸಿರುವುದಾಗಿ ತಿಳಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಬಿ.ದೇವಯ್ಯ, ಪರಿಹಾರ ಕಾರ್ಯಗಳಿಗೆ ಸಂಬಂಧಿಸಿದಂತೆ ಜಿಲ್ಲಾಡಳಿತದಿಂದ ಸೂಕ್ತ ಸ್ಪಂದನ ದೊರೆಯದೆ ಇರುವುದರಿಂದ ಜಿಲ್ಲೆಯ ಎಲ್ಲಾ ಭಾಗಗಳ ಸಂತ್ರಸ್ತರು ಒಗ್ಗೂಡಿ ಜಾಥಾವನ್ನು ನಡೆಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಕೇಂದ್ರ ಸರ್ಕಾರ ಪ್ರಕೃತಿ ವಿಕೋಪದ ಪರಿಹಾರವಾಗಿ ರಾಜ್ಯಕ್ಕೆ ಬಿಡುಗಡೆ ಮಾಡಿರುವ 546 ಕೋಟಿ ರೂ.ಗಳಲ್ಲಿ ಬಹುಭಾಗವನ್ನು ಕೊಡಗು ಜಿಲ್ಲೆಗೆ ನೀಡಬೇಕು ಮತ್ತು ಮುಖ್ಯಮಂತ್ರಿಗಳ ಪರಿಹಾರ ನಿಧಿಯಲ್ಲಿ ಕೊಡಗಿನ ಸಂತ್ರಸ್ತರಿಗಾಗಿ ದಾನಿಗಳಿಂದ ಕ್ರೋಡೀಕರಣಗೊಂಡಿರುವ ಹಣದ ಬಗ್ಗೆ ಶ್ವೇತಪತ್ರ ಹೊರಡಿಸಬೇಕೆಂದು ಅವರು ಒತ್ತಾಯಿಸಿದರು.

ಮಳೆಹಾನಿ ಸಂಭವಿಸಿ ನಾಲ್ಕು ತಿಂಗಳು ಕಳೆದರು ಪರಿಹಾರ ಕಾರ್ಯದ ಬಗ್ಗೆ ಸ್ಪಷ್ಟ ನಿಲುವು ತಳೆಯಲು ಜಿಲ್ಲಾಡಳಿತಕ್ಕೆ ಸಾಧ್ಯವಾಗಿಲ್ಲ. ಇನ್ನು ಮುಂದೆ ನಮ್ಮಿಂದ ಕೈಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೋರಾಟದ ಮೂಲಕವೇ ಪರಿಹಾರವನ್ನು ಪಡೆಯುತ್ತೇವೆ ಎಂದು ದೇವಯ್ಯ ಸ್ಪಷ್ಟಪಡಿಸಿದರು. ಅಕ್ಕಿ, ಬಟ್ಟೆ, ತಾತ್ಕಾಲಿಕ ಆಶ್ರಯ ನೀಡುವುದು ಸುಲಭ. ಆದರೆ, ಸ್ವಂತ ಜಾಗ, ಕೃಷಿ ಭೂಮಿ, ತೋಟವನ್ನು ಕಳೆದುಕೊಂಡವರು ಇನ್ನೂ ಅತಂತ್ರ ಸ್ಥಿತಿಯಲ್ಲೆ ದಿನದೂಡುತ್ತಿದ್ದಾರೆ. ಇವರ ಬಗ್ಗೆ ಸರ್ಕಾರ ಕಾಳಜಿ ವಹಿಸಬೇಕಾಗಿದೆ. ಇನ್ನು ಮೂರು, ನಾಲ್ಕು ತಿಂಗಳುಗಳಲ್ಲಿ ಮತ್ತೆ ಮಳೆಗಾಲ ಆರಂಭವಾಗುವುದರಿಂದ ಹೂಳು ತೆಗೆಯದೇ ಇರುವ ನದಿಗಳಲ್ಲಿ ಪ್ರವಾಹದ ಪರಿಸ್ಥಿತಿ ಏರ್ಪಡುವ ಸಾಧ್ಯತೆ ಇದೆ. ಮಳೆಗಾಲಕ್ಕೂ ಮೊದಲು ಹೂಳು ತೆಗೆಯುವ ಕಾರ್ಯಕ್ಕೆ ಮುಂದಾಗಲಿ ಎಂದು ದೇವಯ್ಯ ಸಲಹೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ಟಿ.ಪ್ರಸನ್ನ, ಉಪಾಧ್ಯಕ್ಷ ಎ.ಟಿ. ಮಾದಪ್ಪ ಹಾಗೂ ಸದಸ್ಯ ಭರತ್ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: