ಕರ್ನಾಟಕಪ್ರಮುಖ ಸುದ್ದಿ

ಡಿ.8ರಂದು ಹಾಸನದಲ್ಲಿ ಶ್ರೀರಾಮಾಯಣ ದರ್ಶನಂ ನಾಟಕ ಪ್ರದರ್ಶನ

ಹಾಸನ (ಡಿ.5): ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮೈಸೂರಿನ ರಂಗಾಯಣ ವತಿಯಿಂದ ಶ್ರೀ ರಾಮಾಯಣದರ್ಶನಂ ನಾಟಕವನ್ನು ಡಿ.8ರಂದು ಸಂಜೆ 6 ಗಂಟೆಗೆ ಹಾಸನಾಂಭ ಕಲಾಕ್ಷೇತ್ರದಲ್ಲಿ ಏರ್ಪಡಿಸಲಾಗಿದೆ.

ನಾಟಕದ ಹಿನ್ನಲೆ: ಆಧುನಿಕ ಕನ್ನಡ ರಂಗಭೂಮಿಯಲ್ಲಿ ವೈವಿಧ್ಯಮಯ ವೈಚಾರಿಕ ನಿಲುವುಗಳನ್ನು ಬಿತ್ತಿ ಬೆಳೆಸುತ್ತಿರುವ ಸಶಕ್ತ ರಂಗತಂಡಗಳಲ್ಲಿ ಮೈಸೂರು ರಂಗಾಯಣವು ಪ್ರಧಾನವಾಗಿ ಗುರುತಿಸಲ್ಪಡುವ ರೆಪರ್ಟರಿಯಾಗಿದೆ. ಬಿ.ವಿ. ಕಾರಂತರ ಚಿಂತನೆಗಳು ಮತ್ತು ಕನಸುಗಳು ಚಿಗುರೊಡೆದು ಮೈಸೂರು ರಂಗಾಯಣದ ರೂಪದಲ್ಲಿ ಹೆಮ್ಮರವಾಗಿ ಬೆಳೆದು ನಿಂತಿದೆ.

ಈವರೆಗೆ ಸುಮಾರು ನೂರಕ್ಕೂ ಹೆಚ್ಚು ನಾಟಕಗಳನ್ನು ಅಣಿಗೊಳಿಸಿ, ನಾಡಿನಾದ್ಯಂತ, ದೇಶದಾದ್ಯಂತ ಮತ್ತು ವಿದೇಶಗಳಲ್ಲೂ ಯಶಸ್ವಿಯಾಗಿ ಪ್ರದರ್ಶಿಸಿದ ತಂಡವಿದು. ಕಥೆ, ಕಾದಂಬರಿ, ಕಾವ್ಯ ಸಿದ್ಧಪಡಿಸಿ, ಪ್ರದರ್ಶಿಸಿದ ಹೆಗ್ಗಳಿಕೆಯೂ, ಆಧುನಿಕ ರಂಗಭೂಮಿಯ ಎಲ್ಲ ಬಗೆಯ ನಾಟಕಗಳನ್ನು ಪ್ರದರ್ಶಿಸಿದ ದಾಖಲೆಯೂ ಮೈಸೂರು ರಂಗಾಯಣದ್ದಾಗಿದೆ.

2010ರಲ್ಲಿ ಕುವೆಂಪು ಅವರ ಬೃಹತ್ ಕಾದಂಬರಿ ಮಲೆಗಳಲ್ಲಿ ಮದುಮಗಳು ಕೃತಿಯನ್ನು ಒಂಭತ್ತು ಗಂಟೆಗಳ ನಾಟಕವಾಗಿಸಿ ಅಹೋರಾತ್ರಿ ನಾಲ್ಕು ಸಮಾನಾಂತರ ವೇದಿಕೆಗಳಲ್ಲಿ ಪ್ರದರ್ಶಿಸಿದ್ದು ಕನ್ನಡ ರಂಗಭೂಮಿ ಇತಿಹಾಸದಲ್ಲೇ ನೂತನ ಪ್ರಯೋಗವಾಗಿದೆ, ಇಂಥ ಹೆಗ್ಗಳಿಕೆಗಳ ರಂಗಾಯಣವೀಗ ಮತ್ತೊಂದು ಸಾಹಸವನ್ನು ಹೊತ್ತು ನಿಮ್ಮ ಮುಂದೆ ನಿಂತಿದೆ.

ತಮ್ಮ ಸಾಹಿತ್ಯ ರಚನೆ ಮತ್ತು ವೈಚಾರಿಕ ಚಿಂತನೆಗಳಿಂದ ಇಡೀ ನಾಡಿನ ಜನತೆಯನ್ನು ಆ ಮೂಲಕ ಈ ಸಮಾಜವನ್ನು ಪ್ರಭಾವಿಸಿದ ಮಹಾಕವಿ ಕುವೆಂಪು ಅವರ ಶ್ರೀರಾಮಾಯಣ ದರ್ಶನಂ ಮಹಾಕಾವ್ಯಕ್ಕೆ ಜ್ಞಾನಪೀಠ ಪ್ರಶಸ್ತಿ ಸಂದು ಐವತ್ತು ವರ್ಷಗಳು ತುಂಬಿದ ಈ ಸಂದರ್ಭದಲ್ಲಿ ಮಹಾಕಾವ್ಯದಲ್ಲಿ ಕವಿ ಚಿತ್ರಿಸಿರುವ ವೈಚಾರಿಕ ದರ್ಶನಗಳನ್ನು ಪ್ರಸ್ತುತ ಸಮಾಜದ ಜನತೆಯ ಮುಂದಿಡುವ ಪ್ರಯತ್ನವಾಗಿ ಐದು ಗಂಟೆಗಳ ನಾಟಕವನ್ನು ಸಿದ್ದಪಡಿಸಲಾಗಿದೆ.

ಸಂಪೂರ್ಣವಾಗಿ ಮಹಾಕಾವ್ಯದ ಹಳೆಗನ್ನಡ ಭಾಷೆಯಲ್ಲೇ ಸಿದ್ಧಗೊಂಡಿರುವ ಈ ನಾಟಕವೂ ಕನ್ನಡ ರಂಗಭೂಮಿಯಲ್ಲಿ ದಾಖಲೆಯೆ ಸರಿ. ನಾಡಿನಾದ್ಯಂತ ಆಯ್ಕೆ ಮಾಡಿದ ನಲವತ್ತು ಜನ ನುರಿತ ಕಲಾವಿದರು ಮತ್ತು ತಂತ್ರಜ್ಞರು ಮೈಸೂರು ರಂಗಾಯಣದ ಹಿರಿಯ ಕಲಾವಿದರ ಜೊತೆ ಸೇರಿ ಸಿದ್ಧಗೊಂಡಿರುವ ನಾಟಕವಿದು.

ಕವಿ ಕುವೆಂಪು ಅವರೇ ಹೇಳುವಂತೆ ಕಾವ್ಯದ ವಸ್ತು ಹಳೆಯದಾದರೂ ಕವಿ ಅದನ್ನು ಹೊಸತೆಂಬಂತೆ, ಮರು ಹುಟ್ಟು ಪಡೆದಂತೆ ಹೊಸ ದರ್ಶನಗಳನ್ನೇ ಕಂಡರಿಸಿದ್ದಾರೆ. ಅಂತೆಯೇ ಈ ನಾಟಕವೂ ಮಹಾಕಾವ್ಯದ ದರ್ಶನಗಳನ್ನು ಪ್ರಧಾನವಾಗಿ ಒಳಗೊಂಡಿದ್ದು, ಈವರೆಗಿನ ರಾಮಾಯಣದಲ್ಲಿ ಮರೆಯಾಗಿದ್ದ ಅನೇಕ ಪಾತ್ರಗಳ ಅಂತರಂಗವನ್ನು ತೆರೆದಿಡಲಿದೆ.

ಶ್ರೀರಾಮಾಯಣ ದರ್ಶನಂ ರಂಗ ಪ್ರಸ್ತುತಿಯು ಬರೀ ರಾಮಾಯಣ ಕಥೆಯಲ್ಲ. ಈ ದೇಶದ ಮೂರು ಸಂಸ್ಕøತಿಗಳ ತಾಕಲಾಟಗಳನ್ನು ಒಳಗೊಂಡಿದೆ. ನಗರ ಸಂಸ್ಕೃತಿಯನ್ನು ಜೀವಕೊಟ್ಟು ಕಾಪಿಡುವ ವನ ಸಂಸ್ಕೃತಿ ಅಲ್ಲಿನ ಶಾಂತಿಯನ್ನು ಭಂಗಗೊಳಿಸುತ್ತಲೇ ಶ್ರೀಮಂತ ಸಂಸ್ಕøತಿಯೊಂದರ ಮೇಲೆ ದಾಳಿ ಮಾಡುವ ನಗರ ಸಂಸ್ಕೃತಿ, ಹೀಗೆ ಭಿನ್ನ ಧಾರೆಗಳ ಸಂಘರ್ಷಗಳು ಇಲ್ಲಿವೆ.

ಇಪ್ಪತ್ತನೇ ಶತಮಾನದ ಮಹಾಕಾವ್ಯವೆನಿಸಿದ ಶ್ರೀರಾಮಾಯಣ ದರ್ಶನಂ ಕೃತಿಯನ್ನು ಅದರ ಸಾರ್ವಕಾಲಿಕ ವೈಚಾರಿಕ ದರ್ಶನಗಳನ್ನು ವಿಶ್ವಪ್ರಜ್ಞೆಯನ್ನು ನಾಡಿನಾದ್ಯಂತ ಬಿತ್ತಿ ಬೆಳೆಸಲಿರುವ ಈ ರಂಗಪ್ರಸ್ತುತಿಯ ಜವಾಬ್ದಾರಿಯನ್ನು ನಂಬಿಕೆಯಿಟ್ಟು ರಂಗಾಯಣಕ್ಕೆ ವಹಿಸಿದುದಲ್ಲದೆ ಸಂಪೂರ್ಣ ಆರ್ಥಿಕ ಸಹಕಾರವನ್ನು ಇಲಾಖೆಯಿಂದ ಒದಗಿಸಿ ಬೆನ್ನು ತಟ್ಟಿದವರು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರಾದ ಎನ್.ಆರ್. ವಿಶುಕುಮಾರ್ ಅವರು.

ಈ ಮಹಾಕಾವ್ಯವನ್ನು ರಂಗಾಯಣದ ಹಿರಿಯ ಕಲಾವಿದರಾದ ಜಗದೀಶ ಮನೆವಾರ್ತೆ ಮತ್ತು ಕೃಷ್ಣಕುಮಾರ್ ನಾರ್ಣಕಜೆ ಅವರೇ ರಂಗರೂಪಕ್ಕಿಳಿಸಿದ್ದಾರೆ. ಭಾರತೀಯ ರಂಗಶಿಕ್ಷಣ ಕೇಂದ್ರದ ಶಿಕ್ಷಕರಾದ ಉಮೇಶ್ ಸಾಲಿಯಾನ್ ಅವರು ಸಹ ನಿರ್ದೇಶನ ಮಾಡಿದ್ದಾರೆ. ಹಿರಿಯ ರಂಗಕರ್ಮಿ ಕೆ.ಜಿ. ಮಹಾಬಲೇಶ್ವರ ಅವರ ನಿರ್ದೇಶನದಲ್ಲಿ ಸಿದ್ಧಗೊಂಡಿರುವ ಈ ವಿಶಿಷ್ಟ ಪ್ರಯೋಗವನ್ನು ಎಂದಿನಂತೆ ನಾಡಿನ ಜನತೆ ಪ್ರೀತಿಯಿಂದ ಸ್ವೀಕರಿಸುವರೆಂಬ ನಂಬಿಕೆ ರಂಗಾಯಣದ್ದು.

ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನಾಟಕ ವೀಕ್ಷಿಸುವಂತೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಂಟಿ ನಿರ್ದೇಶಕರು ಹಾಗೂ ರಂಗಾಯಣ ನಿರ್ದೇಶಕರಾದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ವಿನೋದ್ ಚಂದ್ರ ಕೋರಿದ್ದಾರೆ. (ಎನ್.ಬಿ)

Leave a Reply

comments

Related Articles

error: