ಮನರಂಜನೆಮೈಸೂರು

ಕಂಚಿನ ಕಂಠದ ನಟ ಮರಳಿ ಬಾರದ ಲೋಕಕ್ಕೆ

ಬಾಲಿವುಡ್ ನ ಖ್ಯಾತ ನಟ ಓಂಪುರಿ(66) ಶುಕ್ರವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಕಂಚಿನ ಕಂಠದ ಖ್ಯಾತಿಯ  ಓಂಪುರಿ  ಅಪಾರ ಅಭಿಮಾನಿಗಳನ್ನು ಬಿಟ್ಟು ಮರಳಿಬಾರದ ಲೋಕಕ್ಕೆ ತೆರಳಿದ್ದಾರೆ. ಇನ್ನು ಒಂದು ವಾರಕ್ಕೆ ಅಂದರೆ  ಜನವರಿ 13ರಂದು ಮೈಸೂರಿನಲ್ಲಿ ನಡೆಯಲಿರುವ  ರಾಷ್ಟ್ರೀಯ ಬಹುರೂಪಿ ನಾಟಕೋತ್ಸವವನ್ನು ಓಂಪುರಿ ಉದ್ಘಾಟಿಸಲಿದ್ದರು.

ಹರಿಯಾಣದ ಅಂಬಾಲದಲ್ಲಿ  18ಅಕ್ಟೋಬರ್ 1950ರಲ್ಲಿ ಜನಿಸಿದ ಓಂಪುರಿ ದೆಹಲಿಯ ನ್ಯಾಶನಲ್ ಸ್ಕೂಲ್ ಆಫ್ ಡ್ರಾಮಾದಲ್ಲಿ ಶಿಕ್ಷಣವನ್ನು ಪೂರೈಸಿದ್ದರು.  ಪದ್ಮಶ್ರೀ, ನ್ಯಾಶನಲ್ ಫಿಲ್ಮ್ ಪ್ರಶಸ್ತಿ ಸೇರಿದಂತೆ ಹಲವು ಪ್ರಶಸ್ತಿಗೆ ಭಾಜನರಾಗಿದ್ದರು. ಓಂಪುರಿ ಅವರಿಗೂ ಮೈಸೂರಿಗೂ ಒಂದು ನಂಟಿದೆ. ಅವರ ಮೊದಲು ಚಿತ್ರರಂಗ ಪ್ರವೇಶಿಸಿದ್ದೇ ಕನ್ನಡ ಸಿನಿಮಾ ಮೂಲಕ. ಮೈಸೂರಿನ ಚಾಮುಂಡಿ ಬೆಟ್ಟದ ಎದುರು ಅವರ ಫಸ್ಟ್ ಶಾಟ್. ಅವರ ಸಿನಿ ಬದುಕು ಆರಂಭಗೊಂಡಿದ್ದೇ ಮೈಸೂರಿನಲ್ಲಿ. ಅದೊಂದು ಮಕ್ಕಳ ಚಿತ್ರ. ಗಿರೀಶ್ ಕಾರ್ನಾಡರ ಕರೆಯ ಮೇರೆಗೆ ಅವರು ಮೈಸೂರಿಗೆ ಬಂದಿದ್ದರು. ನಂತರ ಗೋಧೂಳಿ, ತಬ್ಬಲಿಯು ನೀನಾದೆ ಮಗನೆ, ಎಕೆ 47ಚಿತ್ರಗಳಲ್ಲಿ ಬಣ್ಣ ಹಚ್ಚಿದರು. ತಾನು ಚಿತ್ರರಂಗಕ್ಕೆ ಕಾಲಿಟ್ಟಿದ್ದೇ ಕನ್ನಡ ಸಿನಿಮಾ ಮೂಲಕ ಎಂದು ಹಲವು ಕಡೆ ಹೇಳಿಕೊಂಡಿದ್ದರು. ಆರು ಭಾಷೆಗಳಲ್ಲಿ ನಟಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.

ಮೈ ಸನ್ ದಿ ಫ್ಯಾನಟಿಕ್, ಈಸ್ಟ್ ಈಸ್ ವೆಸ್ಟ್, ದಿ ಪರೋಲ್ ಆಫೀಸರ್ ಸೇರಿದಂತೆ ಹಲವು ಬ್ರಿಟಿಷ್ ನಿರ್ಮಾಣದ ಚಿತ್ರಗಳಲ್ಲಿ ನಟಿಸಿ ಅಂತಾರಾಷ್ಟ್ರೀಯ ಮನ್ನಣೆಯನ್ನೂ ಗಳಿಸಿಕೊಂಡರು. ಹಾಲಿವುಡ್ ಚಿತ್ರಗಳಲ್ಲಿಯೂ ನಟಿಸಿದರು.ಹಿಂದಿ ಕಿರುತೆರೆ ಧಾರವಾಹಿಗಳಲ್ಲಿಯೂ ನಟಿಸಿದ್ದಾರೆ.

ಸುಮಾರು 200ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿ ಜನಮನ್ನಣೆ ಗಳಿಸಿದ್ದರು. ಓಂಪುರಿ ನಿಧನಕ್ಕೆ ಚಿತ್ರರಂಗ ಕಂಬನಿ ಮಿಡಿದಿದೆ.

Leave a Reply

comments

Related Articles

error: