ಮೈಸೂರು

‘ಪೇ ಅಂಡ್ ಪಾರ್ಕಿಂಗ್ ‘ : ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ನಡೆ ಖಂಡಿಸಿ ಸಭೆ

ಮೈಸೂರು,ಡಿ.5:- ನಗರದಲ್ಲಿ ‘ಪೇ ಅಂಡ್ ಪಾರ್ಕಿಂಗ್’ ಎಂಬ ಪೆಡಂಭೂತವನ್ನು ಸಾರ್ವಜನಿಕರ ಹೆಗಲೇರಿಸಲು ಹೊರಟಿರುವ ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ನಡೆಯನ್ನು ಖಂಡಿಸಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿಂದು ಸಭೆ ನಡೆಸಲಾಯಿತು.

ಅಗ್ರಹಾರದ ಕನ್ನಡ ಒಕ್ಕೂಟದ ಕಛೇರಿಯಲ್ಲಿಂದು ನಡೆದ ಸಭೆಯಲ್ಲಿ ಸಮಗ್ರ ಕರ್ನಾಟಕ ರಕ್ಷಣಾ ವೇದಿಕೆಯ ಅದ್ಯಕ್ಷ ಅರವಿಂದ ಶರ್ಮ ಮಾತನಾಡಿ ಮೈಸೂರು ಮಹಾನಗರ  ಬೆಳೆಯುತ್ತಿದೆ ವಾಹನ ದಟ್ಟಣೆಯೂ ಹೆಚ್ಚಾಗುತ್ತಿದೆ ಅದೇ ರೀತಿ ಸರ್ಕಾರದ ಹಲವಾರು ನಿರ್ಧಾರಗಳಿಂದ ಬೆಲೆ ಏರಿಕೆ ಹೆಚ್ಚಾಗಿ ಸಾಮಾನ್ಯ ನಾಗರೀಕರ ಜೇಬಿಗೆ ಕತ್ತರಿ ಬೀಳುತ್ತಿದೆ ಇದೆಲ್ಲದರ ಮಧ್ಯೆ ನಗರದಲ್ಲಿ ‘ಪೇ ಅಂಡ್ ಪಾರ್ಕಿಂಗ್’ ಎಂಬ ಪೆಡಂಭೂತವನ್ನು ಸಾರ್ವಜನಿಕರ ಹೆಗಲೇರಿಸಿ ಹಗಲಿನಲ್ಲೂ ಸಾರ್ವಜನಿಕರು ಬೆಚ್ಚಿ ಬೀಳುವ ಹಾಗೆ ಮಾಡಲು ಮೈಸೂರು ಮಹಾನಗರ ಪಾಲಿಕೆಯ ಅಧಿಕಾರಿಗಳು  ಹೊರಟಿದ್ದಾರೆ ಎಂದರು.  ಈ ವಿಚಾರವಾಗಿ  2016 ಅಕ್ಟೋಬರ್ 7 2017ರ ಫೆಬ್ರವರಿ 2 , ಎಪ್ರಿಲ್, 14 ಮೇ 12 , ಜೂನ್ 23ರಂದು ಒಟ್ಟು 5 ಬಾರಿ ಗುತ್ತಿಗೆ ಕರೆಯಲಾಗಿತ್ತು.  ಆದರೆ ಯಾರೂ ಖಾಸಗಿ ಗುತ್ತಿಗೆದಾರರು ಮುಂದೆ ಬರಲಿಲ್ಲ ಹಾಗೂ ಸಾರ್ವಜನಿಕ ವಲಯದಲ್ಲಿ ‘ಪೇ ಅಂಡ್ ಪಾರ್ಕಿಂಗ್’ ಎಂಬ ಭೂತಕ್ಕೆ   ಬಹಳ ವಿರೋಧ ವ್ಯಕ್ತವಾಗಿತ್ತು ಇದನ್ನು ಕಣ್ಣೊರೆಸಲು ಅಂದಿನ ಮೇಯರ್ ಇದನ್ನು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಇಟ್ಟಿದ್ದೇವೆ ಅಷ್ಟೇ ಎಂದು ಹೇಳಿದ್ದರು.

ಅದೇ ರೀತಿ ಈಗಲೂ ಸಾರ್ವಜನಿಕರಿಗೆ ಹೊರೆಯಾಗುತ್ತಿರುವ ‘ಪೇ ಅಂಡ್ ಪಾರ್ಕಿಂಗ್’  ವಿರೋಧ ವ್ಯಕ್ತವಾಗುತ್ತಿದೆ ಯಾರೂ ಖಾಸಗಿಯವರು ಟೆಂಡರ್ ತೆಗೆದುಕೊಳ್ಳಲು ಮುಂದಾಗದಿದ್ದರೆ ಪಾಲಿಕೆಯೇ  ನಿರ್ವಹಿಸುತ್ತದೆ ಎಂದು ನಗರ ಪಾಲಿಕೆಯ ಅಧಿಕಾರಿಗಳು ತಿಳಿಸಿರುವ ಹಿನ್ನೆಲೆಯಲ್ಲಿ ಅವೈಜ್ಞಾನಿಕ ಹಾಗೂ ಸಾರ್ವಜನಿಕರಿಗೆ ಹೊರೆಯಾಗುವ ಇಂತಹ ಯೋಜನೆಯನ್ನು ನಗರ ಪಾಲಿಕೆ ಕೂಡಲೆ ಕೈ ಬಿಡಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಕನ್ನಡ ಒಕ್ಕೂಟ – ಮೈಸೂರು ವತಿಯಿಂದ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಎಂದು ತಿಳಿಸಿದರು.

ಸಭೆಯಲ್ಲಿ ಹಿರಿಯ ಹೋರಾಟಗಾರು ಹಾಗೂ ಒಕ್ಕೂಟದ ಎಲ್ಲಾ ಸದಸ್ಯರು ‘ಪೇ ಅಂಡ್ ಪಾರ್ಕಿಂಗ್’  ವಿರೋಧಿಸಿ  ಮುಂದಿನ ಹೋರಾಟದ ನಿರ್ಧಾರಗಳನ್ನು ಕೈಗೊಂಡರು. ಈ ಸಂದರ್ಭ ಇತಿಹಾಸ ತಜ್ಞ  ಪ್ರೋ ನಂಜರಾಜೇ ಅರಸ್ , ಸಾಹಿತಿ ಪ್ರೊ. ಕೆ. ಎಸ್ .ಭಗವಾನ್, ಹಿರಿಯ ಹೋರಾಟಗಾರರಾದ ಸತ್ಯಪ್ಪ  ,ಆಲೂರು ಮಲ್ಲಣ್ಣ  ಹಾಗೂ ಪುಟ್ಟ ನಂಜಯ್ಯ, ಡಾ. ರಾಜಕುಮಾರ್ ಅಭಿಮಾನಿ ಬಳಗದ ಸಂಸ್ಥಾಪಕ ಅಧ್ಯಕ್ಷ ರಾಮೇಗೌಡ,  ಕನ್ನಡ ಕ್ರಾಂತಿದಳ ಯುವಘಟಕದ ಅಧ್ಯಕ್ಷ ತೇಜಸ್ವಿ ಕುಮಾರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: