ಮೈಸೂರು

ಬಡವರಿಗೆ ಸೂರು ನಿರ್ಮಿಸಿಕೊಡುವ ಪುಣ್ಯದ ಕೆಲಸ ಕ್ರೆಡಾಯ್ ಸಂಸ್ಥೆಯ ಮೇಲಿದೆ : ಸಚಿವ ಜಿ.ಟಿ.ದೇವೇಗೌಡ

ಮೈಸೂರು,ಡಿ.6:- ಬಡವರಿಗೆ ಸೂರು ನಿರ್ಮಿಸಿಕೊಡುವ ಪುಣ್ಯದ ಕೆಲಸ ಕ್ರೆಡಾಯ್ ಸಂಸ್ಥೆಯ ಮೇಲಿದೆ ಎಂದು ಉನ್ನತ ಶಿಕ್ಷಣ ಹಾಗೂ ಜಿಲ್ಲಾ  ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ತಿಳಿಸಿದರು.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತವಿಶ್ವವಿದ್ಯಾನಿಲಯದ ಘಟಿಕೋತ್ಸವ ಭವನದಲ್ಲಿ ಎರಡು ದಿನಗಳ ಕಾಲ ಆಯೋಜಿಸಲಾದ ಭಾರತೀಯ ರಿಯಲ್ ಎಸ್ಟೇಟ್ ನಿರ್ಮಾಣಗಾರರ ನವಭಾರತ ಸಮ್ಮೇಳನವನ್ನಿಂದು ಉದ್ಘಾಟಿಸಿ ಮಾತನಾಡಿದರು. ಕ್ರೆಡಾಯ್ ಸಂಸ್ಥೆ ದೇಶಾದ್ಯಂತ ಆವರಿಸಿದೆ. ರಾಜ್ಯ ಸರ್ಕಾರ ಮತ್ತು ಕ್ರೆಡಾಯ್ ಸಂಸ್ಥೆ ಇಪ್ಪತ್ಮೂರು ರಾಜ್ಯಗಳಲ್ಲಿ ಎರಡುನೂರಾ ನಾಲಕ್ಕು ಸುಂದರವಾದ ನಗರವನ್ನು ಮಾಡತಕ್ಕಂತಹ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಲವು ಸವಾಲಿದೆ ಅವುಗಳನ್ನೆಲ್ಲ ಎದುರಿಸಿ ಶ್ರಮಿಸಬೇಕಿದೆ. ಪ್ರಧಾನಿ ನರೇಂದ್ರ ಮೋದಿಯವರು ಕೂಡ ಯೋಜನೆಗೆ ಚಾಲನೆ ನೀಡಿದ್ದಾರೆ ಎಂದರು. ಕರ್ನಾಟಕದಲ್ಲಿ ಕೂಡ ಕಾರ್ಯ ಮುಂಚೂಣಿಯಲ್ಲಿದೆ. ನಾವು ಎಲ್ಲ ಪಕ್ಷದವರೂ ಇಲ್ಲಿ ಸೇರಿದ್ದೇವೆ. ಪಕ್ಷಭೇದ ಮರೆತು ಅಭಿವೃದ್ಧಿ ಕೆಲಸದಲ್ಲಿ ನಾವೆಲ್ಲ ಒಂದು ಎಂಬುದನ್ನು ತಿಳಿಸಿದ್ದೇವೆ ಎಂದರು. ಕೆಆರ್ ಎಸ್ ಡ್ಯಾಂ ನ್ನು ಇಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಮೈಸೂರು ಒಡೆಯರ ಕಾಲದಲ್ಲಿ ನಿರ್ಮಿಸಿದ್ದರು. ಹಲವು ಪಾರಂಪರಿಕ ಕಟ್ಟಡಗಳೂ ಕೂಡ ಇಂದಿಗೂ ಗಟ್ಟಿಯಾಗಿ ಉಳಿದುಕೊಂಡಿವೆ. ಅದೇ ರೀತಿ ಬಲಿಷ್ಠ ಕಟ್ಟಡಗಳು ನಿರ್ಮಾಣಗಳಾಗಬೇಕು. ಮುಂದಿನ ಪೀಳಿಗೆಗೆ ಸೂರು, ಪಟ್ಟಣ ಎಲ್ಲವನ್ನೂ ನಿರ್ಮಿಸಿಕೊಡಬೇಕು. ಮೈಸೂರು ನಗರ ಬೆಳೆಯುತ್ತಿದೆ. ಆದರೆ ಅದರ ಸುತ್ತಮುತ್ತಲ ಹಲವು ಕಡೆ ನಿರ್ಲಕ್ಷ್ಯಕ್ಕೊಳಗಾಗಿದೆ. ಅವುಗಳನ್ನೂ ಕೂಡ ಸುಂದರವಾದ ಟೌನ್ ಶಿಪ್ ಮಾಡುವ ಮೂಲಕ, ಬಡವರಿಗೆ ಸೂರು ನಿರ್ಮಾಣ ಮಾಡಿಕೊಡುವ ಪುಣ್ಯದ ಕೆಲಸ ಕ್ರೆಡಾಯ್ ಸಂಸ್ಥೆಯ ಮೇಲಿದೆ ಎಂದು ತಿಳಿಸಿದರು.

ಜಿಎಸ್ ಟಿ ಕಡಿಮೆ ಮಾಡಿ ಎಂದು ಕೇಳುತ್ತಿದ್ದೀರಿ, ನಿಮ್ಮ ಮನವಿ ನ್ಯಾಯಯುತವಾದದ್ದೇ. ಸರಳೀಕರಣಗೊಳಿಸುವುದು ಸರ್ಕಾರದ ಜವಾಬ್ದಾರಿ. ಅದನ್ನು ಮಾಡುತ್ತೇವೆ. ಬೆಂಬಲ ನೀಡುತ್ತೇವೆ. 12ಸಾವಿರ ಉದ್ಯಮಿಗಳು ಅಡೆತಡೆಯ ನಡುವೆಯೂ ನಿಂತಿರುವುದನ್ನು ನೋಡಿದರೆ ಭಾರತಕ್ಕೆ ಉಜ್ವಲಭವಿಷ್ಯವಿದೆ ಎಂಬುದು ತಿಳಿಯುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಆರ್ಟ್ ಆಫ್ ಲೀವಿಂಗ್ ನ ಸಂಸ್ಥಾಪಕ ಶ್ರೀರವಿಶಂಕರ ಗುರೂಜಿ ಆಶೀರ್ವಚನ ನೀಡಿದರು. ಈ ಸಂದರ್ಭ ಸಚಿವ ಯು.ಟಿ.ಖಾದರ್, ಸಂಸದ ಪ್ರತಾಪ್ ಸಿಂಹ, ಶಾಸಕರುಗಳಾದ  ಎಸ್.ಎ.ರಾಮದಾಸ್, ತನ್ವೀರ್ ಸೇಠ್, ಮೇಯರ್ ಪುಷ್ಪಲತಾ ಜಗನ್ನಾಥ್, ಎನ್ ಐ ಎಸ್ ಮುಖ್ಯಸ್ಥ ಬಾಲಕೃಷ್ಣ ಹೆಗ್ಡೆ, ಕ್ರೆಡಾಯ್ ರಾಷ್ಟ್ರೀಯ ಜಂಟಿ ಕಾರ್ಯದರ್ಶಿ ಕೆ.ಶ್ರೀರಾಮ್, ಕ್ರೆಡಾಯ್ ಕರ್ನಾಟಕ ಮುಖ್ಯಸ್ಥ ಡಾ.ವಿ.ಕೆ.ಜಗದೀಶ್ ಬಾಬು, ಕ್ರೆಡಾಯ್ ಮೈಸೂರಿನ ಅಧ್ಯಕ್ಷ ಚಿನ್ನಸ್ವಾಮಿ, ಎನ್ಐಎನ್ ಸಂಘಟನಾ ಸಮಿತಿ ಮುಖ್ಯಸ್ಥ ಡಿ.ಶ್ರೀಹರಿ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: