
ಪ್ರಮುಖ ಸುದ್ದಿಮೈಸೂರು
ರಾಮಮಂದಿರ ನಿರ್ಮಾಣ ‘ಯುಕ್ತ ತೀರ್ಮಾನ’ ಕೈಗೊಳ್ಳಲು ಪ್ರಧಾನಿಗೆ ಪತ್ರ : ಕೆ.ಎಸ್.ಭಗವಾನ್
ಮೈಸೂರು, ಡಿ.6 : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ರಾಮನಪರ ಸುಗ್ರೀವಾಜ್ಞೆ ಹೊರಡಿಸಬೇಕೆಂದು ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಧರ್ಮಸಭೆಯ ಸರ್ಕಾರಕ್ಕೆ ಅಂತಿಮ ಎಚ್ಚರಿಕೆ ನೀಡಿರುವುದು ದೇಶದಲ್ಲಿ ಅರಾಜಕತೆ ಸೃಷ್ಟಿಸುವ ಯತ್ನವಾಗಿರುವ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರು ಜನರ ಕ್ಷೇಮ ಅರಿತು ಸರ್ಕಾರದ ಹೊಣೆ ಅಡಿಯಲ್ಲಿ ಯುಕ್ತ ತೀರ್ಮಾನ ಕೈಗೊಳ್ಳಬೇಕೆಂದು ಕರ್ನಾಟಕ ಜನಪರ ಆಂದೋಲನ ಆಗ್ರಹಿಸಿ ಪತ್ರ ಬರೆದಿದೆ.
ಈ ಕುರಿತಂತೆ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಂದೋಲನದ ಅಧ್ಯಕ್ಷ ಪ್ರೊ.ಕೆ.ಎಸ್. ಭಗವಾನ್, ರಾಮಮಂದಿರ ನಿರ್ಮಿಸದಿದ್ದಲ್ಲಿ ದೇಶದ ಎಲ್ಲ ಮಸೀದಿಗಳನ್ನು ಧ್ವಂಸ ಮಾಡಲಾಗುವುದೆಂದು ಆ ವೇಳೆ ಕೆಲ ಭಾಷಣಕಾರರು ಬೆದರಿಕೆ ಹಾಕಿದ್ದು, ಕಾಂಗ್ರೆಸ್ನ ಬೆದರಿಕೆ ಕಾರಣದಿಂದಲೇ ರಾಮಜನ್ಮ ಭೂಮಿ ವಿವಾದದ ವಿಚಾರಣೆ ವಿಳಂಬವಾಗುತ್ತಿದೆ ಎಂದು ಸಹಾ ಆಕ್ಷೇಪಿಸಿದ್ದಾರೆ.
ಈ ರೀತಿಯ ಬೆದರಿಕೆಗಳಿಂದ ಜನರು ಆತಂಕಗೊಳ್ಳುವುದು ಸಹಜವೇ ಆಗಿದ್ದು, ಅವನ್ನು ಆಧರಿಸಿ ಸರ್ಕಾರ ನಡೆಯುತ್ತಿದೆಯೇ ಎಂಬ ಬಗ್ಗೆಯೂ ಶಂಕೆಗಳು ಮೂಡಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಜೊತೆಗೆ, ರಾಮಮಂದಿರ ನಿರ್ಮಿಸಲೆಂದೇ ಜನರು ಮತ ನೀಡಿಲ್ಲ. ಬದಲಾಗಿ ದೇಶದಲ್ಲಿ ಸುಭದ್ರ ಸರ್ಕಾರ ರಚಿಸಲು ಸರ್ಕಾರ ಆರಿಸಿದ್ದು, ಎಲ್ಲ ಜಾತಿ, ಮತ, ಪಂಥದ ಜನರ ಪ್ರಾಣ, ಮಾನ, ಆಸ್ತಿ ರಕ್ಷಣೆ ಸರ್ಕಾರದ ಹೊಣೆಯಾಗಿದೆ ಎಂದು ತಿಳಿಸಿದರು.
ಜೊತೆಗೆ, ದಾರಿ ತಪ್ಪಿ, ತೂಕ ತಪ್ಪಿ ನಗೆ, ಆಳ್ವಿಕೆ ವೇಳೆ ದಾರಿ ತಪ್ಪಿ, ತೂಕ ತಪ್ಪಿ ನಡೆಯುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಹಾ ಒತ್ತಾಯಿಸಿದರು.
ಅಲ್ಲದೆ, ಜನರನ್ನು ಬೆದರಿಸಿ, ಆತಂಕಗೊಳಿಸಿ, ಅರಾಜಕತೆ ಸೃಷ್ಟಿಸುತ್ತಿರುವವರ ವಿರುದ್ಧ ಕಠಿಣ ಕ್ರಮ ಕೈಗೊಂಡು ಎಲ್ಲ ಜನರ ಹಿತ ಕಾಯಬೇಕೆಂದು ಸಹಾ ಆಗ್ರಹಿಸಿದರು.
ಪ್ರೊ. ಶಬ್ಬೀರ್ ಮುಸ್ತಾಫ, ಕೆ.ಎಸ್. ಶಿವರಾಮು, ಬಿ.ಆರ್. ರಂಗಸ್ವಾಮಿ, ಇನ್ನಿತರರು ಹಾಜರಿದ್ದರು. (ವರದಿ : ಕೆ.ಎಂ.ಆರ್)