ಮೈಸೂರು

ಸರ್ಕಾರದಿಂದ ಸಾಲಕೊಡಿಸುವುದಾಗಿ ವೃದ್ಧೆಯರ ಚಿನ್ನಾಭರಣ ದೋಚಿ ವಂಚನೆ

ಮೈಸೂರು,ಡಿ.7:- ಸರ್ಕಾರದಿಂದ ಸಾಲಕೊಡಿಸುವುದಾಗಿ ಇಬ್ಬರು ವೃದ್ಧೆಯರನ್ನು ನಂಬಿಸಿದ ವಂಚಕ ಅವರ ಬಳಿಯಿದ್ದ ಚಿನ್ನಾಭರಣ ಮತ್ತು ನಗದನ್ನು ದೋಚಿಕೊಂಡು ಪರಾರಿಯಾದ ಘಟನೆ ಮೈಸೂರಿನಲ್ಲಿ ನಡೆದಿದೆ.

ಕೆ.ಆರ್.ನಗರದ ಜಯಮ್ಮ(60) ಮತ್ತು ತಿಲಕ್ ನಗರದ ಕಮಲಾಬಾಯಿ(70) ಚಿನ್ನಾಭರಣ ಮತ್ತು ನಗದು ಕಳೆದುಕೊಂಡವರಾಗಿದ್ದಾರೆ.ಚಿನ್ನಾಭರಣ ಮತ್ತು ಹಣವನ್ನು  ಕಳೆದುಕೊಂಡಿರುವ ಜಯಮ್ಮ  ದೇವರಾಜ ಠಾಣೆಗೆ ದೂರು ನೀಡಿದ್ದಾರೆ.

ಡಿ.4 ಮಗಳ ಮನೆಗೆ ಹೋಗಲೆಂದು ನಗರ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಿದ್ದಾಗ ಅಪರಿಚಿತ ವ್ಯಕ್ತಿಯು ಹತ್ತಿರ ಬಂದು ಸರ್ಕಾರದ ಹಣ ಕೊಡಿಸುವುದಾಗಿ ನಂಬಿಸಿ ಚೆಲುವಾಂಬ ಆಸ್ಪತ್ರೆಯ ಆವರಣಕ್ಕೆ ಕರೆದುಕೊಂಡು ಹೋಗಿ ಒಡವೆಗಳಿದ್ದರೆ ಹಣ ಕೊಡುವುದಿಲ್ಲ ಎಂದು ಹೇಳಿ ತಾನು ಧರಿಸಿದ್ದ ಸುಮಾರು 50ಗ್ರಾಂ ತೂಕದ ಎರಡು ಎಳೆ ಸಾದಾ ಸರ ಮತ್ತು 5000ರೂ. ಹಣವನ್ನು ಅವರ ಬಳಿ ಇದ್ದ ಬಟ್ಟೆ ಬ್ಯಾಗಿನಲ್ಲಿ ಹಾಕಿಸಿದ್ದ. ಬ್ಯಾಗ್ ತೆಗೆದುಕೊಂಡು ಹೋಗಬಾರದು ಚೆಕ್ ಮಾಡುತ್ತಾರೆಂದು ಹೇಳಿ ಎಳನೀರಿನ ಅಂಗಡಿಯಲ್ಲಿ ಬ್ಯಾಗ್ ಇಟ್ಟುಅವರನ್ನು ತುರ್ತು ಚಿಕಿತ್ಸಾ ಘಟಕದ ಹತ್ತಿರ ಕೂರಿಸಿ ಹೋಗಿದ್ದು, ಮತ್ತೆ ಬಾರದಿದ್ದಾಗ ವಾಪಸ್ಸು ಎಳನೀರಿನ ಅಂಗಡಿಯಲ್ಲಿ ಬಂದು ಕೇಳಿದೆ.  ಬ್ಯಾಗನ್ನು ಅಪರಿಚಿತ ವ್ಯಕ್ತಿಯು ತೆಗೆದುಕೊಂಡು ಹೋಗಿರುವುದಾಗಿ ತಿಳಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ದೇವರಾಜ ಠಾಣೆಗೆ ಇದೇ ರೀತಿಯ ಮತ್ತೊಂದು ದೂರನ್ನು ಕಮಲಾಬಾಯಿಯವರ ಮೊಮ್ಮಗ ಮೋಹನ್ ಕುಮಾರ್ ನೀಡಿದ್ದಾರೆ.

ಅಜ್ಜಿಯವರಾದ ಕಮಲಾಬಾಯಿ(70 ವರ್ಷ) ಅವರು ಡಿ.5 ರಂದು ಸಿಟಿ ಬಸ್ ನಿಲ್ದಾಣದಲ್ಲಿ ಬಸ್ಸಿಗಾಗಿ ಕಾಯುತ್ತಾ ನಿಂತಿದ್ದಾಗ ಯಾರೋ ಅಪರಿಚಿತ ವ್ಯಕ್ತಿ ಅಜ್ಜಿಯ ಬಳಿ ಬಂದು ಪರಿಚಯ ಮಾಡಿಕೊಂಡು ಮುಖ್ಯಮಂತ್ರಿಗಳ ನಿಧಿಯಿಂದ 10 ಸಾವಿರ ಸಾಲವನ್ನು ನೀಡುತ್ತಾರೆ. ನಿಮಗೆ ಅದನ್ನು ಕೊಡಿಸುತ್ತೇನೆ ಎಂದು ಅವರನ್ನು ಟೌನ್ ಹಾಲ್ ಆವರಣಕ್ಕೆ ಕರೆದುಕೊಂಡು ಹೋಗಿ ಚಿನ್ನದ ಪದಾರ್ಥಗಳನ್ನು ಹಾಕಿಕೊಂಡಿದ್ದರೆ ಸಾಲ ಕೊಡುವುದಿಲ್ಲ ಅದನ್ನು ಬಿಚ್ಚಿ ಇಟ್ಟುಕೊಳ್ಳಿ ಎಂದು ಹೇಳಿ ಕಿವಿಯಲ್ಲಿದ್ದ ಚಿನ್ನದ ಓಲೆಗಳನ್ನು ಬಿಚ್ಚಿಸಿ ಪರ್ಸ್ ನಲ್ಲಿ ಹಾಕಿಕೊಳ್ಳಲು ಹೇಳಿದ್ದನಂತೆ. ಪರ್ಸ್ ನಲ್ಲಿದ್ದ ಇನ್ನೊಂದು ಜೊತೆ ಓಲೆ ಮತ್ತು 4000ರೂ. ಹಣ, ಎಲ್ಲವನ್ನು ನಾನು ಇಟ್ಟುಕೊಳ್ಳುತ್ತೇನೆ ಕೊಡಿ ಎಂದು ಕೇಳಿದಾಗ ಕೊಡುವುದಿಲ್ಲ ಎಂದಿದಕ್ಕೆ ಅಜ್ಜಿಯವರಿಗೆ ಚಾಕು ತೋರಿಸಿ ಪರ್ಸ್ ನಲ್ಲಿದ್ದ ಸುಮಾರು 17 ಗ್ರಾಂ ಚಿನ್ನದ ಪದಾರ್ಥ ಮತ್ತು 4000ರೂ. ನಗದನ್ನು ಕಿತ್ತುಕೊಂಡು ಪರಾರಿಯಾಗಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.

ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಂಚಕನಿಗೆ ಪೊಲೀಸರು ಬಲೆ ಬೀಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: