ಪ್ರಮುಖ ಸುದ್ದಿ

ಮೇಕೆದಾಟು ನೀರಾವರಿ ಯೋಜನೆ ನಮ್ಮ ಜಾಗದಲ್ಲಿ ಮಾತ್ರ,ತಮಿಳುನಾಡು ಇದಕ್ಕೆ ತಕಾರರು ಎತ್ತುವುದು ಸೂಕ್ತವಲ್ಲ : ಸಚಿವ ಡಿ.ಕೆ. ಶಿವಕುಮಾರ್

ರಾಜ್ಯ(ಬೆಂಗಳೂರು)ಡಿ.7:- ಮೇಕೆದಾಟು ನೀರಾವರಿ ಯೋಜನೆಯನ್ನು ನಮ್ಮ ಜಾಗದಲ್ಲಿ ಮಾತ್ರ ಮಾಡುತ್ತಿದ್ದು, ತಮಿಳುನಾಡು ಇದಕ್ಕೆ ತಕಾರರು ಎತ್ತುವುದು ಸೂಕ್ತವಲ್ಲ. ತಮಿಳುನಾಡು ರಾಜಕೀಯಕ್ಕಾಗಿ ಲಾಭಕ್ಕಾಗಿ ಇದನ್ನು ವಿರೋಧ ಮಾಡುವುದು ಬೇಡ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದರು.

ಈ ಯೋಜನೆ ನಮ್ಮ ರಾಜ್ಯದ ಹಕ್ಕು. ಸಮುದ್ರಕ್ಕೆ ಹರಿದು ಹೋಗುವ ನೀರನ್ನು ಮಾತ್ರ ನಾವು ಬಳಸಿಕೊಳ್ಳುತ್ತಿದ್ದೇವೆ ಎಂದು ಅವರು ತಿಳಿಸಿದರು. ಮಾಜಿ ಮುಖ್ಯಮಂತ್ರಿಗಳು ಹಾಗೂ ಮಾಜಿ ನೀರಾವರಿ ಸಚಿವರ ಸಭೆಯ ನಂತರ ಸುದ್ದಿಗೋಷ್ಠಿಯ ನಂತರ ಮಾತನಾಡಿ ತಮಿಳುನಾಡು ಸರ್ಕಾರ ಮೇಕೆದಾಟು ವಿಚಾರದಲ್ಲಿ ಚರ್ಚಿಸಲು ವಿಶೇಷ ಅಧಿವೇಶನ ಕರೆದಿದೆ. ಈ ಯೋಜನೆಯ ನೀರನ್ನು ನೀರಾವರಿಗೆ ಬಳಸುವುದಿಲ್ಲ. ಕೇವಲ ಕುಡಿಯುವ ನೀರಿಗಾಗಿ ಬಳಕೆ ಮಾಡಿಕೊಳ್ಳಲಾಗುತ್ತದೆ. ತಮಿಳುನಾಡು ಅನಗತ್ಯವಾಗಿ ಕೋರ್ಟ್‌ಗೆ ಹೋಗುವುದು ಬೇಡ ಎಂದು ಮನವಿ ಮಾಡುವುದಾಗಿ ತಿಳಿಸಿದರು.

ಮೇಕೆದಾಟು ಯೋಜನೆಯನ್ನು ಜಾರಿಗೆ ತರುವುದರ ವಿರುದ್ಧ ತಮಿಳುನಾಡು ಸರ್ಕಾರ ವಿಶೇಷ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದೆ. ಇದರ ವಿರುದ್ಧ ಕಾನೂನಾತ್ಮಕವಾಗಿ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು. 5916 ಕೋಟಿ ರೂ. ವೆಚ್ಚದ ಯೋಜನೆಗೆ ಪ್ರಾಥಮಿಕ ಯೋಜನಾ ವರದಿ ಸಿದ್ದವಾಗಿದೆ. ಈಗಾಗಲೇ ನಾವು ಈ ವಿಚಾರದಲ್ಲಿ ಒಂದು ಹೆಜ್ಜೆ ಮುಂದಿಟ್ಟಿದ್ದೇವೆ ಎಂದರು. 4,996 ಹೆಕ್ಟೇರ್ ಜಮೀನು ಈ ಯೋಜನಾ ವ್ಯಾಪ್ತಿಗೆ ಬರಲಿದ್ದು, ಈ ಪೈಕಿ 380 ಹೆಕ್ಟೇರ್ ಕಂದಾಯ ಇಲಾಖೆಗೆ ಸೇರಿದ್ದಾಗಿದೆ.

ಉಳಿದದ್ದು ಅರಣ್ಯ ಇಲಾಖೆಗೆ ಸೇರಿದ್ದಾಗಿದೆ. ಈ ಯೋಜನೆಗೆ ಕೇಂದ್ರ ಮತ್ತು ಜಲ ಆಯೋಗ ಒಪ್ಪಿಗೆ ನೀಡಿದೆ. ಈ ವಿಚಾರದಲ್ಲಿ ಮುಂದುವರೆಯುವಂತೆ ಒಪ್ಪಿಗೆ ದೊರೆತಿರುವುದರಿಂದ ಇದರಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: