ದೇಶ

ಆಯವ್ಯಯ ಮುಂದೂಡುವ ಬಗ್ಗೆ ತುರ್ತು ವಿಚಾರಣೆಯ ಅಗತ್ಯವಿಲ್ಲ: ಸುಪ್ರೀಂ

ನವದೆಹಲಿ: ಉತ್ತರಪ್ರದೇಶ ಸೇರಿ ಪಂಚರಾಜ್ಯಗಳ ಚುನಾವಣೆ ಹಿನ್ನೆಲೆಯಲ್ಲಿ ಬಜೆಟ್ ಮಂಡನೆಯನ್ನು ಮುಂದೂಡಬೇಕು. ಈ ಬಗ್ಗೆ ತುರ್ತು ವಿಚಾರಣೆ ನಡೆಸಬೇಕೆಂದು ವಿಪಕ್ಷಗಳು ಸಲ್ಲಿಸಿದ್ದ ಮನವಿಯನ್ನು ಸುರ್ಪೀಂ ಕೋರ್ಟ್ ತಳ್ಳಿಹಾಕಿದೆ.

ಬಜೆಟ್ ಮುಂದೂಡುವ ವಿಚಾರದ ಬಗ್ಗೆ ಯಾವುದೇ ಅವಸರ ಮಾಡುವ ಅಗತ್ಯವಿಲ್ಲ. ಅರ್ಜಿ ವಿಚಾರಣೆಗೆ ಬಂದ ಸಂದರ್ಭದಲ್ಲಿ ಈ ಬಗ್ಗೆ ಚರ್ಚಿಸೋಣ ಎಂದು ಮುಖ್ಯ ನ್ಯಾಯಮೂರ್ತಿ ಜೆ.ಎಸ್.ಖೇಹರ್ ನೇತೃತ್ವದ ಪೀಠ ಸೂಚಿಸಿದೆ.

ಪಂಚರಾಜ್ಯಗಳ ಚುನಾವಣೆಯು ಫೆ.4ರಿಂದ ಮಾ.8ರವರೆಗೆ ವಿವಿಧ ಹಂತಗಳಲ್ಲಿ ನಡೆಯಲಿದ್ದು, ಈಗಾಗಲೇ ನೀತಿಸಂಹಿತೆ ಜಾರಿಯಲ್ಲಿದೆ. ಹಾಗಾಗಿ ಫೆ.1ರಂದು ಬಜೆಟ್ ಮಂಡನೆಗೆ ಅವಕಾಶ ಮಾಡಿಕೊಟ್ಟರೆ ಅದು ಮತದಾರರ ಮೇಲೆ ಪ್ರಭಾವ ಬೀಳುತ್ತದೆ ಎಂದು ವಿಪಕ್ಷಗಳು ಆರೋಪಿಸಿ ಬಜೆಟ್ ದಿನಾಂಕವನ್ನು ಮುಂದೂಡುವಂತೆ ಪಟ್ಟು ಹಿಡಿದಿದ್ದವು. ಇತ್ತ ಕೇಂದ್ರ ಸರಕಾರವು ನಾಲ್ಕು ತಿಂಗಳ ಹಿಂದೆಯೇ ನಿರ್ಧಾರವಾದ ಬಜೆಟ್ ಅನ್ನು ಮುಂದೂಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿತ್ತು. ಕೇಂದ್ರ ಸರಕಾರದ ಅಭಿಪ್ರಾಯಕ್ಕೆ ಸಮ್ಮತಿ ಸೂಚಿಸಿದ್ದ ಚುನಾವಣಾ ಆಯೋಗವು ಬಜೆಟ್ ಮುಂದೂಡಬೇಕೆಂಬ ವಿಪಕ್ಷಗಳ ದೂರನ್ನು ಪರಿಶೀಲಿಸಲು ನಿರಾಕರಿಸಿತ್ತು.

Leave a Reply

comments

Related Articles

error: