ಮೈಸೂರು

ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತೇನೆ : ಬಿಜೆಪಿ ಮುಖಂಡ ಕೆ.ಶಿವರಾಂ

ಮೈಸೂರು,ಡಿ.8:- ಮುಂಬರುವ ಸಾರ್ವತ್ರಿಕ ಲೋಕಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹಾಗೂ ದಲಿತ ನಾಯಕ, ಮಾಜಿ ಸಚಿವ ವಿ.ಶ್ರೀನಿವಾಸ್‍ಪ್ರಸಾದ್ ಅವರ ಸೂಚನೆಯಂತೆ ಚಾಮರಾಜನಗರ ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ನಾನು ಸ್ಪರ್ಧಿಸುತ್ತೇನೆ ಎಂದು ನಿವೃತ್ತ ಐಎಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಕೆ.ಶಿವರಾಂ ಹೇಳಿದರು.

ತಿ.ನರಸೀಪುರ ಪಟ್ಟಣದ ನಂಜನಗೂಡು ರಸ್ತೆಯಲ್ಲಿರುವ ಅಂಬೇಡ್ಕರ್ ಸಮುದಾಯ ಭವನದಲ್ಲಿ ನಡೆದ ಡಾ.ಬಿ.ಆರ್.ಅಂಬೇಡ್ಕರ್ ಅವರ 63ನೇ ಪರಿನಿರ್ವಾಣ ದಿನಾಚರಣೆ ಹಾಗೂ ಬಿಜೆಪಿ ಮುಖಂಡರು ಮತ್ತು ಬೆಂಬಲಿಗರ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್ಸನ್ನು ಮಣಿಸಲು ವಿ.ಶ್ರೀನಿವಾಸ್ ಪ್ರಸಾದ್ ಅವರೇ ಸೂಕ್ತವೆಂಬ ಅಭಿಪ್ರಾಯ ಬಿಜೆಪಿಯ ಆಕಾಂಕ್ಷಿಗಳಲ್ಲಿದೆ. ಅವರ ಸ್ಪರ್ಧೆಯಿಂದ ಹಿಂದೆ ಸರಿಯುವ ಸ್ಪಷ್ಟಪಡಿಸಿರುವುದರಿಂದ ಪಕ್ಷದ ನಾಯಕರಾದ ಬಿ.ಎಸ್.ಯಡಿಯೂರಪ್ಪ ಅವರ ಸೂಚನೆಯಂತೆ ಈ ಭಾಗದಲ್ಲಿ ಸಂಘಟನೆಗೆ ಪ್ರವಾಸ ಪೂರ್ಣಗೊಳಿಸಿದ್ದೇನೆ ಎಂದರು.

ಐಎಎಸ್‍ನಂತಹ ಉನ್ನತ ಅಧಿಕಾರಿಯಾಗಿ ಈ ಭಾಗದಲ್ಲಿಯೂ ಜನರ ಸೇವೆಯನ್ನು ಮಾಡಿದ್ದರಿಂದ ಮುಂದಿನ ರಾಜಕಾರಣಕ್ಕೆ ಚಾಮರಾಜನಗರ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದೇನೆ. ಬಿಜೆಪಿ ಅಭ್ಯರ್ಥಿಯಾಗಲು ಪ್ರಬಲ ಆಕಾಂಕ್ಷಿಯಾಗಿದ್ದೇನೆಯಾದರೂ ಪಕ್ಷ ಕಣಕ್ಕಿಳಿಸುವ ಅಭ್ಯರ್ಥಿಯ ಗೆಲುವಿಗೆ ದುಡಿಯುತ್ತೇನೆ. ಕೇಂದ್ರ ಮತ್ತು ರಾಜ್ಯ ನಾಯಕರ ಒಲವು ನನಗೆ ಇರುವುದರಿಂದ ಚುನಾವಣೆಗೆ ಅಣಿಯಾಗಲು ಪಕ್ಷದ ನಿಷ್ಠಾವಂತ ಕಾರ್ಯಕರ್ತರು ಹಾಗೂ ಮುಖಂಡರನ್ನು ಭೇಟಿ ಮಾಡಿ ಸಂಘಟನೆಯನ್ನ ಬಲಪಡಿಸುವ ಕೆಲಸವನ್ನು ಮಾಡಿದ್ದೇನೆ ಎಂದು ತಿಳಿಸಿದರು.

ಅದಮ್ಯ ಚೈತನ್ಯಶೀಲರಾದ ಅಂಬೇಡ್ಕರ್ ಅವರು ತುಳಿತಕ್ಕೊಳಗಾದ ಸಮುದಾಯ ಆಳುವ ವರ್ಗವಾಗಬೇಕೆಂಬ ಉದ್ದೇಶದಿಂದ ವಿಶ್ವದಲ್ಲಿಯೇ ಉತ್ತಮವೆನ್ನುವಂತಹ ಸಂವಿಧಾನವನ್ನು ರಚನೆ ಮಾಡಿದರು. ತಮ್ಮಲ್ಲಿದ್ದ ಅಗಾಧವಾದ ಜ್ಞಾನದ ಶಕ್ತಿಯಿಂದ ವಿಶ್ವದ ಗಮನವನ್ನು ಸೆಳೆದರು. ಇಂತಹ ಮಹಾನ್ ನಾಯಕನನ್ನು ಸ್ಮರಣೆ ಮಾಡಿಯೇ ಪ್ರಧಾನಿ ನರೇಂದ್ರ ಮೋದಿ ಸಂಸತ್ ನ್ನು ಪ್ರವೇಶಿಸಿದರು. ಪಂಚರತ್ನಗಳ ಅಭಿವೃದ್ಧಿಗೂ ಯೋಜನೆ ರೂಪಿಸಿ ಘೋಷಣೆ ಮಾಡಿದರು. ಬಿಜೆಪಿ ಅಂಬೇಡ್ಕರ್ ಅವರನ್ನು ಗೌರವಿಸುವ ಕೆಲಸವನ್ನು ಮಾಡಿದ್ದರೆ ಕಾಂಗ್ರೆಸ್ ಚುನಾವಣೆಯಲ್ಲಿ ಅವರನ್ನು ಸೋಲಿಸಿ, ದಲಿತರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ಹಾಗಾಗಿ ನಿಜವಾದ ದಲಿತ ವಿರೋಧಿ ಕಾಂಗ್ರೆಸ್ ಎಂದು ಕೆ.ಶಿವರಾಂ ಆರೋಪಿಸಿದರು.

ಬಿಜೆಪಿ ಕ್ಷೇತ್ರಾಧ್ಯಕ್ಷ ಹೆಚ್.ಎಂ.ಪರಶಿವಮೂರ್ತಿ ಮಾತನಾಡಿ, ಚಾಮರಾಜನಗರದಲ್ಲಿ ಬಿಜೆಪಿ ಬಲಿಷ್ಠವಾಗಿದ್ದು, ಯಾರೇ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ ಗೆಲ್ಲುವುದು ಖಚಿತವಾಗಿದೆ. ಹೈಕಮಾಂಡ್ ಸೂಚಿಸುವ ಅಭ್ಯರ್ಥಿಯನ್ನು ಗೆಲ್ಲಿಸಲು ನಾವೆಲ್ಲರೂ ಸಂಘಟಿತರಾಗಿ ದುಡಿಯೋಣ. ರಾಜ್ಯದಲ್ಲಿ ಕಾಂಗ್ರೆಸ್ ಬೆಂಬಲದಿಂದ ಮುಖ್ಯಮಂತ್ರಿಯಾಗಿರುವ ಹೆಚ್.ಡಿ.ಕುಮಾರಸ್ವಾಮಿ ರೈತರ ಹೆಸರಲ್ಲಿ ನಿತ್ಯವೂ ನಾಟಕವಾಡುತ್ತಿದ್ದಾರೆ. ಕಬ್ಬಿನ ಬಾಕಿ ಹಣವನ್ನು ಕೊಡಿಸದೆ, ಭತ್ತಕ್ಕೆ ಬೆಂಬಲ ಬೆಲೆಯನ್ನೂ ನೀಡದೆ ಹಾಗೂ ಸಾಲವನ್ನೂ ಮನ್ನಾ ಮಾಡದೆ ಭರವಸೆ ಮಾತುಗಳಲ್ಲೇ ಕಾಲವನ್ನು ದೂಡುತ್ತಿದ್ದಾರೆ ಎಂದು ಟೀಕಿಸಿದರು.

ಸೋಸಲೆ ಪಿಎಸಿಸಿಎಸ್ ಅಧ್ಯಕ್ಷ ಎಂ.ಪರಶಿವಮೂರ್ತಿ, ಬಿಜೆಪಿ ಟೌನ್ ಅಧ್ಯಕ್ಷ ಬಿ.ವೀರಭದ್ರಪ್ಪ, ಸ್ಲಂ ಮೋರ್ಚಾದ ಅಧ್ಯಕ್ಷ ಕೆ.ಗಣೇಶ, ಸಾಮಾಜಿಕ ಜಾಲತಾಣ ಸಂಚಾಲಕ ದಯಾನಂದ ಪಟೇಲ್, ಛಲವಾದಿ ಮಹಾಸಭಾ ಜಿಲ್ಲಾಧ್ಯಕ್ಷ ಹಂಸರಾಜು, ತಾಲೂಕು ಅಧ್ಯಕ್ಷ ಕುಮಾರ,  ಮುಖಂಡರಾದ ಕಾರು ಮಲ್ಲಪ್ಪ,  ವಾಟಾಳು ಮಹದೇವಪ್ಪ ಮತ್ತಿತರರು  ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: