ಮೈಸೂರು

ಭಾರತದಿಂದ ಶೇ.50ಕ್ಕಿಂತ ಹೆಚ್ಚು ಔಷಧಿಗಳು ರಫ್ತು: ಅಮರೇಶ್ ತುಂಬಗಿ

ಮೈಸೂರು,ಡಿ.8-ವಿದೇಶಗಳಿಂದ ಔಷಧಿಗಳನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತ ಇಂದು ಶೇ.50 ಕ್ಕಿಂತ ಹೆಚ್ಚು ಗುಣಮಟ್ಟದ ಔಷಧಿಗಳನ್ನು ಬೇರೆ ದೇಶಗಳಿಗೆ ರಫ್ತು ಮಾಡುತ್ತಿದೆ ಎಂದು ರಾಜ್ಯ ಸರ್ಕಾರದ ಔಷಧ ನಿಯಂತ್ರಕ ಅಮರೇಶ್ ತುಂಬಗಿ ಹೇಳಿದರು.

ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿಯ ಜೆಎಸ್‍ಎಸ್ ಔಷಧ ಮಹಾವಿದ್ಯಾಲಯ ಹಾಗೂ ಇಂಡಿಯನ್ ಫಾರ್ಮಸುಟಿಕಲ್ ಅಸೋಸಿಯೇಷನ್ ಸಹಯೋಗದಲ್ಲಿ ಕಾಲೇಜಿನ ರಾಜೇಂದ್ರ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಷ್ಟ್ರೀಯ ಫಾರ್ಮಸಿ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ರಾಜ್ಯದಲ್ಲಿ ಶೇ.67 ಉತ್ಪದನಾ ಘಟಕಗಳಿದ್ದು, 3 ಸಾವಿರದಷ್ಟು ಗುಣಮಟ್ಟದ ಉತ್ಪನ್ನಗಳನ್ನು 195 ದೇಶಗಳಿಗೆ ರಫ್ತು ಮಾಡಲಾಗುತ್ತಿದೆ. ಅನೇಕ ದೇಶಗಳಲ್ಲಿ ದೇಶದ ಆದಾಯದ ಸುಮಾರು ಶೇ.16 ರಷ್ಟನ್ನು ಆರೋಗ್ಯಕ್ಕಾಗಿ ಮೀಸಲಿಡುತ್ತಾರೆ. ಭಾರತವು ಟಿಬಿ ಗುಣಪಡಿಸುವ ಔಷಧಿಗಾಗಿ ದೊಡ್ಡ ಮಟ್ಟದಲ್ಲಿಯೇ ಹಣವನ್ನು ಖರ್ಚು ಮಾಡುತ್ತಿದೆ. ಇದಕ್ಕೂ ಮೊದಲು ಪೊಲೀಯೋ ಔಷಧಿ ಸಂಶೋಧನೆಗೆ ವೆಚ್ಚ ಮಾಡಲಾಗಿತ್ತು. ಹಾಗೆಯೇ ಅದರಲ್ಲಿ ಯಶಸ್ವಿಯಾಗಿದೆ ಎಂದರು.

ಔಷಧಿಗಳಿಲ್ಲದೇ, ಆರೋಗ್ಯವಿಲ್ಲ. ಹಾಗಾಗೀ ಗುಣಮಟ್ಟದ ಔಷಧಿಗಳ ಉತ್ಪಾದನೆ ಹಾಗೂ ವಿತರಣೆಯಲ್ಲಿ ಔಷಧಕಾರರ ಪಾತ್ರ ಮಹತ್ವದ್ದಾಗಿದೆ. ದೇಶದಲ್ಲಿ ಫಾರ್ಮಾಸಿಸ್ಟ್ ಸಂಬಂಧಿಸಿದಂತೆ ಸಂಶೋಧನೆಗಳು ಅಗತ್ಯವಾಗಿದ್ದು, ಆ ನಿಟ್ಟಿನಲ್ಲಿ ವಿವಿಗಳು ಗಮನಹರಿಸಬೇಕಿದೆ. ಇದರಿಂದ ದೇಶವು ಜಾಗತೀಕರಣದಲ್ಲಿ ಗುರುತಿಸಿಕೊಳ್ಳಲು ಸಂಶೋಧನೆಗಳು ಸಹಾಯಕವಾಗಲಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲೆಯ ವಿವಿಧೆಡೆ ಔಷಧ ವಿಜ್ಞಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಡಾ.ಎಂ.ರಮೇಶ್, ಸುರೇಶ್ಮ ಮಂಜುನಾಥ್, ಅಮಲುಲ್ ಖಾನ್ ಅವರಿಗೆ `ಔಷಧ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಜೆಎಸ್‍ಎಸ್ ಉನ್ನತ ಶಿಕ್ಷಣ ಮತ್ತು ಸಂಶೋಧನಾ ಅಕಾಡೆಮಿ ಕುಲಪತಿ ಡಾ.ಬಿ.ಸುರೇಶ್, ಫಾರೂಕಿಯಾ ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ.ಸಲಾವುದ್ದೀನ್, ಜೆಎಸ್‍ಎಸ್ ಔಷಧ ವಿಜ್ಞಾನ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಟಿ.ಎಂ.ಪ್ರಮೋದ್‍ಕುಮಾರ್, ಇಂಡಿಯನ್ ಫಾರ್ಮಸ್ಯುಟಿಕಲ್ ಅಸೋಸಿಯೇಷನ್ ಕಾರ್ಯದರ್ಶಿ ಡಾ.ಚಂದನ್.ಆರ್.ಎಸ್, ಔಷಧ ವಿಜ್ಞಾನ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಕೆ.ಕೃಷ್ಣ, ಸಹಾಯಕ ಪ್ರಾಧ್ಯಾಪಕ ಮಹೇಂದ್ರನ್, ಪ್ರಾಧ್ಯಾಪಕ ಜಿ.ವಿ.ಪೂಜಾರ್ ಉಪಸ್ಥಿತರಿದ್ದರು. (ಎಚ್.ಎನ್, ಎಂ.ಎನ್)

Leave a Reply

comments

Related Articles

error: