ಕರ್ನಾಟಕಪ್ರಮುಖ ಸುದ್ದಿ

ಲೆಕ್ಕ ಸಿಗದ 37 ಸಾವಿರ ಕೋಟಿ? ಸದನ ಸಮಿತಿ ರಚನೆಗೆ ಸಿ.ಟಿ ರವಿ ಒತ್ತಾಯ

ಬೆಂಗಳೂರು (ಡಿ.8): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಾವಧಿಯಲ್ಲಿ ಮಂಡಿಸಿರುವ ಬಜೆಟ್‍ನಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಸಿಎಜಿ ವರದಿ ಉಲ್ಲೇಖಿಸಿರುವುದರಿಂದ ತಕ್ಷಣವೇ ರಾಜ್ಯ ಸರ್ಕಾರ ಸದನ ಸಮಿತಿ ರಚನೆ ಮಾಡಬೇಕೆಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

ವಿವಿಧ ಇಲಾಖೆಗಳಿಗೆ ನಿಗದಿಯಾಗಿದ್ದ ಸುಮಾರು 37 ಸಾವಿರ ಕೋಟಿ ಹಣ ಖರ್ಚಾಗಿರುವುದಕ್ಕೆ ಲೆಕ್ಕ ಸಿಗುತ್ತಿಲ್ಲ. ಇದರಲ್ಲಿ ಅವ್ಯವಹಾರ ನಡೆದಿರುವ ಸಾಧ್ಯತೆ ಇದೆ ಎಂಬುದು ಸಿಎಜಿ ವರದಿಯಿಂದ ಬಹಿರಂಗಗೊಂಡಿರುವುದರಿಂದ ಸರ್ಕಾರ ಸದನ ಸಮಿತಿ ರಚನೆ ಮಾಡುವಂತೆ ಆಗ್ರಹಿಸಿದರು.

ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ಬಜೆಟ್ ಗಾತ್ರ ಹೆಚ್ಚಾದಂತೆ ವ್ಯತ್ಯಾಸಗಳು ಆಗುತ್ತವೆ ಎಂದು ಸಿದ್ದರಾಮಯ್ಯನವರು ಉಡಾಫೆಯಾಗಿ ಮಾತನಾಡುತ್ತಾರೆ. ಕುಂಬಳಕಾಯಿ ಕಳ್ಳ ಎಂದರೆ ಇವರು ಏಕೆ ಹೆಗಲು ಮುಟ್ಟಿ ನೋಡಿಕೊಳ್ಳಬೇಕು ಎಂದು ಪ್ರಶ್ನಿಸಿದರು. ಜನರ ಹಣದಿಂದಲೇ ಬಜೆಟ್ ಮಂಡನೆಯಾಗುತ್ತದೆ. ಒಂದೊಂದು ಪೈಸೆಗೂ ಕೂಡ ಲೆಕ್ಕ ಇರಬೇಕು. 13 ಬಾರಿ ಬಜೆಟ್ ಮಂಡಿಸಿರುವ, ಸ್ವತಃ ಆರ್ಥಿಕ ತಜ್ಞರೂ ಆಗಿರುವ ಸಿದ್ದರಾಮಯ್ಯನವರು ಲಘುವಾಗಿ ಮಾತನಾಡುವುದನ್ನು ಸಿಎಜಿ ವರದಿಯಲ್ಲಿ ಅಕ್ರಮ ನಡೆದಿದ್ದರೆ ತನಿಖೆಗೆ ಏಕೆ ಹೆದರಬೇಕು ಎಂದು ಹೇಳಿದರು.

ಹಾಸನದಿಂದ ಸ್ಪರ್ಧೆಗೆ ಸಿದ್ಧ: ಹಾಸನ ಲೋಕಸಭಾ ಕ್ಷೇತ್ರದಿಂದ ನೀವು ಸ್ಪರ್ಧಿಸುತ್ತೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ, ಹಾಸನದಿಂದಲೂ ಸ್ಪರ್ಧೆಗೆ ಸಿದ್ಧನಿದ್ದೇನೆ. ಪಕ್ಷ ಹೇಳಿದರೆ ಮಂಡ್ಯದಿಂದಲೂ ಸ್ಪರ್ಧಿಸುತ್ತೇನೆ. ವರಿಷ್ಠರು ಕೊಡುವ ಸೂಚನೆಯನ್ನು ಚಾಚೂ ತಪ್ಪದೆ ಪಾಲಿಸುತ್ತೇನೆ ಎಂದು ಹೇಳಿದರು.

ಬೆಳಗಾವಿ ಅಧಿವೇಶನದಲ್ಲಿ ಸೋಮವಾರ ರೈತರ ಸಮಾವೇಶ ನಡೆಸಲಾಗುವುದು. ಬ್ಯಾಟ್ಸ್‍ಮೆನ್ ಹಿಟ್ ವಿಕೆಟ್ ಮಾಡಿಕೊಂಡರೆ ನಾವು ಅಂಪೈರ್‍ಗಳನ್ನು ದೂರಲು ಸಾಧ್ಯವಿಲ್ಲ. ಏಕೆಂದರೆ ಮುಖ್ಯಮಂತ್ರಿಗಳೇ ವಿವಾದ ಕೇಂದ್ರಬಿಂದುವಾಗಿದ್ದಾರೆ ಎಂದರು. (ಎನ್.ಬಿ)

Leave a Reply

comments

Related Articles

error: