ಪ್ರಮುಖ ಸುದ್ದಿ

ಹಾಡುಹಗಲೇ ವೈದ್ಯರ ಮನೆಗೆ ಕನ್ನ : 50ಸಾವಿರ ರೂ.ದೋಚಿ ಪರಾರಿ

ರಾಜ್ಯ(ಮಂಡ್ಯ)ಡಿ.10:- ಕೆ.ಆರ್.ಪೇಟೆ ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಎದುರು ಇರುವ ಕಟ್ಟಡದಲ್ಲಿ ಹಾಡು ಹಗಲೇ ವೈದ್ಯರ ಮನೆಗೆ ಕನ್ನ ಹಾಕಿರುವ ಕಳ್ಳರು ಬೀರುವಿನಲ್ಲಿದ್ದ 50ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ.

ಸಿಂಧುಘಟ್ಟ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯಾಧಿಕಾರಿಯಾಗಿರುವ ಡಾ.ಹರ್ಷ ಅವರ ಮನೆಯಲ್ಲಿ ಮೊನ್ನೆ ಮಧ್ಯಾಹ್ನ ಸುಮಾರು 4.30ರ ವೇಳೆ ಕಳ್ಳತನ ನಡೆದಿದೆ.  ಡಾ.ಹರ್ಷ ದಂಪತಿಗಳು ಪ್ರವಾಸಕ್ಕೆ ಹೋಗುವ ಉದ್ದೇಶಕ್ಕಾಗಿ ಮನೆಯ ಬೀರುವಿನಲ್ಲಿ ಹಣವಿಟ್ಟು ಕರ್ತವ್ಯಕ್ಕೆ ಹೋಗಿದ್ದರು. ಈ ಸಮಯವನ್ನು ಗಮನಿಸಿರುವ ಕಳ್ಳರು ಮಹಡಿಯ ಮೇಲಿರುವ ಮನೆಯ ರೂಮಿನ ಬಾಗಿಲು ಮುರಿದು, ಬೀರುವನ್ನು ಒಡೆದು ಅದರೊಳಗಿದ್ದ 50ಸಾವಿರ ನಗದು ದೋಚಿ ಪರಾರಿಯಾಗಿದ್ದಾರೆ. ಸೋಜಿಗವೆಂದರೆ ಕೆಳ ಅಂತಸ್ತಿನಲ್ಲಿ ಮೆಡಿಕಲ್ ಶಾಪ್ ಇದ್ದರೂ ಸಹ ಮೇಲಿನ ಮನೆಯಲ್ಲಿ ಕಳ್ಳತನ ಮಾಡಿದ್ದಾರೆ.  ಈ ಕಳ್ಳರು ನಾಗರೀಕರು ಹಗಲಿನ ವೇಳೆಯಲ್ಲಿ ಮನೆ ಬಿಟ್ಟು ಹೊರ ಹೋಗಲು ಹೆದರುವಂತೆ ಮಾಡಿದ್ದಾರೆ.  ಕಳೆದ ವಾರದ ಹಿಂದಷ್ಟೆ ಬಸವೇಶ್ವರ ನಗರದಲ್ಲಿರುವ ಪಿ.ಎಲ್.ಡಿ. ಬ್ಯಾಂಕ್ ಅಧ್ಯಕ್ಷ ಕೆ.ಬಿ.ರವಿಕುಮಾರ್ ಅವರ ಮನೆಯಲ್ಲಿ ಹಾಡು ಹಗಲೇ ಸುಮಾರು 10ಲಕ್ಷ ರೂ ಮೌಲ್ಯದ ನಗನಾಣ್ಯ ದೋಚಿಲಾಗಿತ್ತು.  ಒಟ್ಟಾರೆ ಪಟ್ಟಣದಲ್ಲಿ ಈ ಹಿಂದೆ ರಾತ್ರಿ ವೇಳೆ ಮನೆ ಕಳ್ಳತನ ನಡೆಯುತ್ತಿದ್ದವು ಆದರೆ ಈಗ ಹಾಡಹಗಲೇ ಮನೆಗಳ್ಳತನ ನಡೆಯುತ್ತಿರುವುದು ನಾಗರೀಕರಲ್ಲಿ ತೀವ್ರ ಆತಂಕದ ವಿಚಾರವಾಗಿದೆ. ಈಗಲಾದರೂ ಪೊಲೀಸರು ಪಟ್ಟಣದ ಪ್ರಮುಖ ವೃತ್ತಗಳು ಹಾಗೂ ಪ್ರಮುಖ ರಸ್ತೆಗಳಲ್ಲಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸುವ ಮೂಲಕ ಮನೆ ಕಳ್ಳತನಗಳನ್ನು ತಪ್ಪಿಸಬೇಕು ಎಂದು ನಾಗರೀಕರು ಪೊಲೀಸ್ ಅಧಿಕಾರಿಗಳನ್ನು ಒತ್ತಾಯ ಮಾಡಿದ್ದಾರೆ.

ಘಟನೆ ಕುರಿತು ಪಟ್ಟಣ ಪೊಲೀಸ್ ಠಾಣೆಗೆ ಡಾ.ಹರ್ಷ ಅವರು ದೂರು ನೀಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: