ಮೈಸೂರು

ಪತ್ರಕರ್ತನ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣ: ಕ್ರಮಕ್ಕೆ ಒತ್ತಾಯ

ಬೈಲಕುಪ್ಪೆ: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯ ಬಿ.ಆರ್. ಗಣೇಶ್ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣ ದಾಖಲಿಸಿರುವುದನ್ನು ಖಂಡಿಸಿ ಹಾಗೂ ದೂರು ನೀಡಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕೆಂದು ಒತ್ತಾಯಿಸಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಶುಕ್ರವಾರ ತಹಶೀಲ್ದಾರ್ ಹೆಚ್.ಆರ್. ರಂಗರಾಜುರವರಿಗೆ ಮನವಿ ಪತ್ರ ಸಲ್ಲಿಸಿದರು.

ಪಿರಿಯಾಪಟ್ಟಣ ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಖಜಾಂಚಿ ಹಾಗೂ ಪ್ರಜಾವಾಣಿ ದಿನಪತ್ರಿಕೆಯಲ್ಲಿ ವರದಿಗಾರರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಬಿ.ಆರ್.ಗಣೇಶ ಅವರ ವಿರುದ್ಧ ತಾಲ್ಲೂಕಿನ ಕಂಠಾಪುರ ಗ್ರಾಮದ ದಾಸ್‌ಪ್ರಕಾಶ್ ರವರ ಮಗ ಅರುಣ್/ಅರುಣ್ ಹಿಂದೂಸ್ಥಾನ್ ಎಂಬಾತ ಪಿರಿಯಾಪಟ್ಟಣದ ಪೊಲೀಸ್ ಠಾಣೆಯಲ್ಲಿ ಜ.1 ರಂದು ಜಾತಿ ನಿಂದನೆ ಪ್ರಕರಣ ದಾಖಲಿಸಿದ್ದು, ಇದು ಸತ್ಯಕ್ಕೆ ದೂರವಾದ ಹಾಗೂ ದುರುದ್ದೇಶದಿಂದ ಕೂಡಿದ ವಿಚಾರವಾಗಿದೆ.

ಅರುಣ್/ಅರುಣ್ ಹಿಂದೂಸ್ಥಾನ್ ಸುಳ್ಳು ಜಾತಿನಿಂದನೆ ದೂರು ದಾಖಲಿಸುವುದನ್ನು ಹವ್ಯಾಸ ಮಾಡಿಕೊಂಡಿದ್ದು ಈ ಹಿಂದೆಯೂ ಕೂಡ ವಿಜಯ ಕರ್ನಾಟಕ ದಿನಪತ್ರಿಕೆಯ ಮೈಸೂರು ಸ್ಥಾನಿಕ ಸಂಪಾದಕರಾದ ಅರವಿಂದ ನಾವಡಾ, ತಾಲೂಕಿನ ಕಂಠಾಪುರ ನಿವಾಸಿ ಸಹನಾ ಆರ್ಯ, ಬೆಕ್ಕರೆ ನಿವಾಸಿ ಸತೀಶ್ ಆರಾಧ್ಯ ಮುಂತಾದವರ ವಿರುದ್ಧ ಸುಳ್ಳು ಜಾತಿ ನಿಂದನೆ ಪ್ರಕರಣಗಳನ್ನು ದಾಖಲಿಸಲು ಮುಂದಾಗಿದ್ದ ಉದಾಹರಣೆಗಳಿವೆ.

2016 ರ ನವೆಂಬರ್ 5ರಂದು ಪಟ್ಟಣದ ತಾಲೂಕು ಕಚೇರಿಯ ಮುಂಭಾಗ ಪೊಲೀಸರ ಅನುಮತಿ ಪಡೆಯದೇ ಕಾನೂನು ಬಾಹಿರವಾಗಿ ಬಿ.ಆರ್.ಗಣೇಶ ಹಾಗೂ ಸಹನಾ ಆರ್ಯ ಅವರ ವಿರುದ್ಧ ಅವಹೇಳನಕಾರಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಧರಣಿ ನಡೆಸಿದ್ದಾರೆ. ಈ ಎಲ್ಲಾ ಘಟನೆಗಳ ಕುರಿತಂತೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘವು ಅರುಣ್/ಅರುಣ್ ಹಿಂದೂಸ್ಥಾನ್‌ರ ವರ್ತನೆಯನ್ನು ಖಂಡಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ಬಾವಲಾಳು ಸ್ವಾಮಿ, ಕಾರ್ಯದರ್ಶಿ ಪಿ.ಎನ್.ಸುಬ್ರಮಣ್ಯ, ನಿರ್ದೇಶಕರಾದ ಸಿ.ಎನ್.ವಿಜಯ್, ಬಿ.ಆರ್.ರಾಜೇಶ್, ಇಂತಿಯಾಜ್ ಅಹಮದ್, ಸಿ.ಜೆ.ಪುನೀತ್. ಪಿ.ಎನ್.ದೇವೇಗೌಡ, ದೇವಣ್ಣ, ಟಿ.ಜೆ.ಆನಂದ್ ಮತ್ತಿತತರು ಹಾಜರಿದ್ದರು.

Leave a Reply

comments

Related Articles

error: