ಮೈಸೂರು

ಕಾರ್ಯಾಗಾರ ಆಸಕ್ತಿಯ ಜೊತೆ ಜ್ಞಾನ ವೃದ್ಧಿಸಲಿದೆ : ಪ್ರೊ.ಎಸ್.ಆನಂದ

ಮೈಸೂರು ಜಿಲ್ಲಾ ಪದವಿಪೂರ್ವ ಕಾಲೇಜುಗಳ ರಸಾಯನಶಾಸ್ತ್ರ ಉಪನ್ಯಾಸಕರ ವೇದಿಕೆ ವತಿಯಿಂದ ಮಹಾರಾಜ ಪದವಿಪೂರ್ವ ಕಾಲೇಜಿನಲ್ಲಿ ರಸಾಯನಶಾಸ್ತ್ರ ಕಾರ್ಯಾಗಾರ ಮತ್ತು ದ್ವಿತೀಯ ಪಿಯುಸಿ ಪುಸ್ತಕ ಬಿಡುಗಡೆ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಗಿತ್ತು.

ಮಾನಸಗಂಗೋತ್ರಿಯ ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎಸ್.ಆನಂದ  ದ್ವಿತೀಯ ಪಿಯುಸಿ ಪುಸ್ತಕವನ್ನು ಬಿಡುಗಡೆಗೊಳಿಸಿದರು. ಬಳಿಕ ಮಾತನಾಡಿದ ಅವರು, ರಸಾಯನ ಶಾಸ್ತ್ರ ವಿಷಯಕ್ಕೆ ಅಂತ್ಯವೆನ್ನುವುದೇ ಇಲ್ಲ. ಅದು ದಿನದಿಂದ ದಿನಕ್ಕೆ ಬೆಳವಣಿಗೆ ಹೊಂದುತ್ತಿರುತ್ತದೆ. ಅದರಲ್ಲಿ ಹೊಸ ಹೊಸ ಸಂಶೋಧನೆಗಳು ನಡೆಯುತ್ತಿರುತ್ತವೆ. ವಿದ್ಯಾರ್ಥಿಗಳಲ್ಲಿ ಹೆಚ್ಚು ಆಸಕ್ತಿಯೂ ಈ ವಿಷಯದಲ್ಲಿ ಕಂಡು ಬರುತ್ತಿರುವುದು ಸ್ವಾಗತಾರ್ಹ. ರಸಾಯನಶಾಸ್ತ್ರ ಕಲಿಸುವಾಗ ಎಚ್ಚರಿಕೆ ಇರಬೇಕು. ಸ್ವಲ್ಪ ತಪ್ಪಾದರೂ ಸಂಪೂರ್ಣ ವ್ಯತ್ಯಾಸವಾಗಲಿದೆ ಎಂದು ತಿಳಿಸಿದರು.

ವಿಷಯ ಯಾವುದೇ ಇರಲಿ, ಆ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಾಗಾರಗಳನ್ನು ಏರ್ಪಡಿಸಬೇಕು. ಹಾಗಾದಾಗ ಮಕ್ಕಳಿಗೆ ಸಂಪೂರ್ಣ ತಿಳಿಸಿ ಹೇಳಲು ಸಾಧ್ಯವಾಗುತ್ತದೆ. ಕಾರ್ಯಾಗಾರಗಳಿಂದ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಆಸಕ್ತಿಯ ಜೊತೆ, ಹೆಚ್ಚಿನ ಜ್ಞಾನವನ್ನು ವೃದ್ಧಿಸುವುದಕ್ಕೆ ಸಾಧ್ಯವಿದೆ. ಸಿದ್ದಾಂತಕ್ಕಿಂತಲೂ ಪ್ರಯೋಗಕ್ಕೆ ಹೆಚ್ಚಿನ ಪ್ರಾಮುಖ್ಯತೆಯಿದೆ. ಪ್ರಾಯೋಗಿಕವಾಗಿ ಕಲಿತರೆ ಅದು ಯಾವತ್ತಿಗೂ ನಮ್ಮ ಮನಃಪಟಲದಲ್ಲಿ ಉಳಿಯಲಿದೆ ಎಂದರು.

ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಯಪ್ರಕಾಶ್ ಅಧ್ಯಕ್ಷತೆವಹಿಸಿದ್ದರು. ಈ ಸಂದರ್ಭ ಕಾಲೇಜಿನ ಪ್ರಾಂಶುಪಾಲ ಸಿದ್ಧರಾಜು ಟಿ.ಆರ್. ಫಾರೂಕಿಯಾ ಪಿಯು ಕಾಲೇಜಿನ ಅಧ್ಯಕ್ಷ ಎನ್.ಎ.ನಸೀಮುದ್ದೀನ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: