ಮೈಸೂರು

ನಗರದ ಪ್ರಮುಖ ವೃತ್ತಗಳ ಪ್ರತಿಮೆಗಳಲ್ಲಿನ ಧೂಳು ಸ್ವಚ್ಛ ಭಾರತ ಅಭಿಯಾನದ ಕಾರ್ಯಕರ್ತರಿಗೆ ಕಂಡಿಲ್ಲವೇ?

ಮೈಸೂರು, ಡಿ.11:- ನಗರದ ಪ್ರಮುಖ ವೃತ್ತಗಳಲ್ಲಿರುವ ಪ್ರತಿಮೆಗಳಲ್ಲಿ ಧೂಳೂ ತುಂಬಿಕೊಂಡಿದ್ದು, ಊರೆಲ್ಲ ಶುಚಿಗೊಳಿಸುವ ಸ್ವಚ್ಛ ಭಾರತ ಅಭಿಯಾನದ ಕಾರ್ಯಕರ್ತರಿಗೆ ಇದು ಕಣ್ಣಿಗೆ ಬಿದ್ದಿಲ್ಲದಿರುವುದು ವಿಪರ್ಯಾಸ ಎಂದಿದ್ದಾರೆ ಹಿರಿಯ ಚಿಂತಕ, ವಿಮರ್ಶಕ ಸಿ.ವಿ.ಶ್ರೀನಿವಾಸ ರಾವ್.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು  ಮೈಸೂರು ನಗರವು ಎರಡು ಬಾರಿ ಸ್ವಚ್ಛ ನಗರಿ ಪಟ್ಟ ಅಲಂಕರಿಸಿಕೊಂಡಿದೆ. ದಕ್ಷಿಣ ಭಾರತದ ಕಾಶ್ಮೀರ ಎಂದು ಕರೆಯಲ್ಪಟ್ಟಿದೆ. ರಾಜಮಹಾರಾಜರುಗಳು ಆಳಿ ರಾರಾಜಿಸಿದ, ಪಾರಂಪರಿಕ ಅರಮನೆಗಳ, ಸರೋವರಗಳ, ಉದ್ಯಾನವನಗಳ, ದೇವಾಲಯಗಳ ಹೆಮ್ಮೆಯ ಕರುನಾಡ ನೆಲೆನಾಡು ಮತ್ತು ಸುಂದರ ಬೀಡು, ಅಲ್ಲದೇ ಎಲ್ಲರೂ ನೋಡಲೇ ಬೇಕಾದ ಪ್ರವಾಸಿ ತಾಣ ಎಂದು ಜಗತ್ಪ್ರಸಿದ್ಧವಾಗಿದೆ. ಆದರೆ ಒಂದು ಕಪ್ಪು ಚುಕ್ಕಿ ಎಂಬಂತೆ ನಗರದ ಬಹುತೇಕ ಪ್ರಮುಖ ವೃತ್ತದ ಪ್ರತಿಮೆಗಳಲ್ಲಿ ಧೂಳು ತುಂಬಿಕೊಂಡಿದೆ. ಕೇವಲ ದಸರಾ ಅಥವಾ ಇನ್ನಿತರ ಮಹೋತ್ಸವಗಳಲ್ಲಿ ಮಾತ್ರ ಈ ಪ್ರತಿಮೆಗಳು ಸ್ವಚ್ಛವಾಗಿರುತ್ತವೆ. ನಗರಕ್ಕೆ ದಿನನಿತ್ಯ ನೂರಾರು ಪ್ರವಾಸಿಗರು ಆಗಮಿಸುತ್ತಾರೆ. ಎಲ್ಲಾ ಕಡೆ ಭೇಟಿ ನೀಡಿ ಕಡೆಗೆ ಈ ವೃತ್ತದ ಪ್ರತಿಮೆಯ ಕಡೆ ಕಣ್ಣಾಡಿಸಿದರೆ ಅವರಲ್ಲಿ ಎಂತಹ ಭಾವನೆ ಮೂಡಬಹುದು ಎಂದು ಪ್ರಶ್ನಿಸಿದ್ದಾರೆ.

ವೃತ್ತಗಳಲ್ಲಿ ಪ್ರತಿಮೆಗಳನ್ನು ಸ್ಥಾಪಿಸುವುದು ಮುಖ್ಯವಲ್ಲ. ಅವುಗಳನ್ನು ಕಾಪಾಡುವುದು ಅಷ್ಟೇ ಮುಖ್ಯ. ಆಗಿಂದಾಗ್ಗೆ ಆ ಪ್ರತಿಮೆಗಳನ್ನು ಸ್ವಚ್ಛಗೊಳಿಸಬೇಕು. ಆಗ ಆ ವೃತ್ತದ ಅಂದಕ್ಕೆ ಮತ್ತಷ್ಟು ಕಳೆ ಬರುವುದಲ್ಲದೇ ಸೌಂದರ್ಯ ಹೆಚ್ಚಿಸುತ್ತದೆ ಎಂದು ತಿಳಿಸಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: