ಪ್ರಮುಖ ಸುದ್ದಿ

ಅವಳಿ ನಗರದಲ್ಲಿ ಅಪರಾಧ ಗಣನೀಯ ಇಳಿಮುಖ: ಕಮೀಷನರ್ ಎಂ.ಎನ್‌.ನಾಗರಾಜ್‌

ರಾಜ್ಯ(ಹುಬ್ಬಳ್ಳಿ)ಡಿ.11:-  ಸುಧಾರಿತ ಹೊಸ ಬೀಟ್‌ ವ್ಯವಸ್ಥೆ, ತಂತ್ರಜ್ಞಾನ ಬಳಕೆ, ಜನರ ಸಹಕಾರದೊಂದಿಗೆ ಹುಬ್ಬಳ್ಳಿ-ಧಾರವಾಡ ಕಮಿಷ್ನರೇಟ್‌ ವ್ಯಾಪ್ತಿಯಲ್ಲಿ ಅಪರಾಧಗಳ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿದೆ ಎಂದು ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ್‌ ಹೇಳಿದರು.

ನಗರದಲ್ಲಿ  ಸುದ್ದಿಗೋಷ್ಠಿಯಲ್ಲಿ ಈ ಮಾಹಿತಿ ನೀಡಿದ ಅವರು, 2016- 2017 ರಲ್ಲಿ ಪ್ರಕರಣಗಳ ಸಂಖ್ಯೆ ಅವಲೋಕಿಸಿದರೆ, 2018ರಲ್ಲಿ ಗಣನೀಯವಾಗಿ ಅಪರಾಧ ಕೃತ್ಯಗಳ ಸಂಖ್ಯೆ ಕಡಿಮೆಯಾಗಿದೆ. ಅಲ್ಲದೆ, ಅವುಗಳಿಗೆ ಹೋಲಿಕೆ ಮಾಡಿದರೆ ಪೊಲೀಸರು ಕ್ರೀಯಾಶೀಲರಾಗಿ ಕಾರ್ಯ ನಿರ್ವಹಿಸಿದ್ದರ ಪರಿಣಾಮ ಪ್ರಕರಣಗಳ ಪತ್ತೆಯೂ ಹೆಚ್ಚಾಗಿದೆ ಎಂದು ತಿಳಿಸಿದರು.

ಅಪರಾಧ ಸಂಖ್ಯೆ ಕಡಿತ ಮತ್ತು ಪತ್ತೆಗಾಗಿ ಹು-ಧಾ ಮಹಾನಗರದಲ್ಲಿ 1 ಕಂಮಾಂಡೋ ವಾಹನ, 3 ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ ಸಿಸ್ಟಂ, 72 ಎಚ್‌ಡಿ ಟ್ರಾಫಿಕ್‌ ಕ್ಯಾಮೆರಾ, 35 ರಾತ್ರಿ ಹೊತ್ತಲಿಯೂ ಕಾರ್ಯ ನಿರ್ವಹಿಸುವ ಕ್ಯಾಮೆರಾ, 49 ಟ್ರಾಫಿಕ್‌ ಕ್ಯಾಮೆರಾ, 89 ಕಾನೂನು ಮತ್ತು ಸುವ್ಯವಸ್ಥೆ ಕ್ಯಾಮೆರಾ, ದಾನಿಗಳಿಂದ 70 ಕ್ಯಾಮೆರಾ ಅಳವಡಿಸಲಾಗಿದೆ ಎಂದರು.

ಪ್ರಸ್ತುತ ಸುಧಾರಿತ ಹೊಸ ಬೀಟ್‌ಗಳ ಸಂಖ್ಯೆಯನ್ನು 1020ಕ್ಕೆ ಏರಿಕೆ ಮಾಡಲಾಗಿದೆ. ಅಲ್ಲದೆ ಅವುಗಳ ಮೇಲೆ ಆಯಾ ಠಾಣೆ ಇನ್ಸಸ್ಪೆಕ್ಟರ್‌ ಹಾಗೂ ಎಸಿಪಿ, ಡಿಸಿಪಿಗಳು ನಿಗಾವಹಿಸಲಿದ್ದಾರೆ. ಈಗಾಗಲೇ ಬೀಟ್‌ ವ್ಯವಸ್ಥೆಯಲ್ಲಿ 44,091 ಸದಸ್ಯರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಅಲ್ಲದೆ, ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಎಸಿಪಿ, ಡಿಸಿಪಿಗಳು ಮತ್ತು ತಾವು ಬೀಟ್‌ ವ್ಯಾಪ್ತಿಯ ಮನೆ-ಮನೆಗೆ ತೆರಳಿ ಜಾಗೃತಿ ಮೂಡಿಸಲು ಕ್ರಮಕೈಗೊಳ್ಳಲಾಗಿದೆ. ಈ ಮೂಲಕ ಸಾರ್ವಜನಿಕರಲ್ಲಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆ ರೂಪಿಸಲು ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು. ಅದರಲ್ಲೂ ಗಾಂಜಾ, ಅಫೀಮು ಸೇರಿದಂತೆ ಮಾದಕ ವಸ್ತುಗಳ ಮಾರಾಟ ಮತ್ತು ಬಳಕೆ ಹೆಚ್ಚಾಗಿರುವ ದೂರು ಬಂದ ಹಿನ್ನೆಲೆಯಲ್ಲಿ 2018ರಲ್ಲಿ ವಿಶೇಷ ಕಾರ್ಯಾಚರಣೆ ನಡೆಸಿ 21 ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ. ಈ ಮೂಲಕ ಇದಕ್ಕೆ ಕಡಿವಾಣ ಹಾಕಲು ಕ್ರಮಕೈಗೊಳ್ಳಲಾಗಿದೆ. ಇನ್ನು ಎಸ್ಸಿ-ಎಸ್ಟಿ ಮತ್ತು 96ಕೆಪಿ ಆ್ಯಕ್ಟ್ ಬಳಕೆಯನ್ನು ಸಿಬ್ಬಂದಿ ಮತ್ತು ಸಾರ್ವಜನಿಕರು ಬಳಕೆ ಮಾಡುವ ಮೂಲಕ ನ್ಯಾಯ ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಹು-ಧಾ ಮಹಾನಗರ ವ್ಯಾಪ್ತಿಯಲ್ಲಿ ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡ ಬಗ್ಗೆ 2016ರಲ್ಲಿ 651 ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ 327 ಪ್ರಕರಣ ಪತ್ತೆಯಾಗಿದ್ದು, ಶೇ.73 ವಸೂಲಿ ಮಾಡಿ 4.99 ಕೋಟಿ ರೂ. ದೂರುದಾರರಿಗೆ ವಾಪಸ್‌ ನೀಡಲಾಗಿದೆ. 2017ರಲ್ಲಿ 680 ಪ್ರಕರಣಗಳ ಪೈಕಿ 320 ಪ್ರಕರಣಗಳು ಪತ್ತೆಯಾಗಿದ್ದು, ಶೇ. 45 ವಸೂಲಿ ಮಾಡಿ 1.83 ಕೋಟಿ ರೂ. ದೂರುದಾರರಿಗೆ ವಾಪಸ್‌ ಮಾಡಲಾಗಿದೆ. ಇನ್ನು 2018ರಲ್ಲಿ ಕೇವಲ 373 ಪ್ರಕರಣಗಳು ದಾಖಲಾಗಿದ್ದು, 148 ಪ್ರಕರಣಗಳು ಪತ್ತೆಯಾಗಿದ್ದು, ಶೇ.59 ವಸೂಲಿ ಮಾಡಿ 1.03 ಕೋಟಿ ರೂ. ವಾಪಸ್‌ ನೀಡಲಾಗಿದೆ ಎಂದು ತಿಳಿಸಿದರು.

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ರುದ್ರಪ್ಪ ಲಮಾಣಿ, ಎಂ.ವಿ. ನಾಗನೂರ, ಶ್ರೀಕಾಂತ ಕಟ್ಟಿಮನಿ, ಪಿಐಗಳಾದ ಶಿವಪ್ರಕಾಶ ನಾಯ್ಕ, ಶ್ರೀಪಾದ ಜಲ್ದೆ, ಜಾಕ್ಸನ್‌ ಡಿಸೋಜಾ, ಮಾರುತಿ ಗುಳ್ಳಾರಿ, ಶ್ರೀಕಾಂತ ತೋಟಗಿ, ವಿನೋದ ಮುಕ್ತೇದಾರ, ಡಿ.ಸಂತೋಷಕುಮಾರ್‌, ಸುರೇಶ ಕುಂಬಾರ ಸೇರಿದಂತೆ ಇತರರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: