ಪ್ರಮುಖ ಸುದ್ದಿ

ಕಟ್ಟಡ ಕಾಮಗಾರಿ ಸಾಮಾಗ್ರಿಗಳ ಚೋರನ ಬಂಧನ

ರಾಜ್ಯ(ಮಡಿಕೇರಿ) ಡಿ.11 :- ನಗರದ ಮುನೀಶ್ವರ ದೇವಾಲಯದಲ್ಲಿ ಕಟ್ಟಡ ಸಾಮಾಗ್ರಿಗಳನ್ನು ಕಳವು ಮಾಡಿದ ಆರೋಪಿಯನ್ನು ದೇವಾಲಯ ಸಮಿತಿ ಪದಾಧಿಕಾರಿಗಳು ಪತ್ತೆಹಚ್ಚಿ ಪೊಲೀಸರಿಗೆ ಒಪ್ಪಿಸಿದ ಪ್ರಕರಣ ನಡೆದಿದೆ. ಪುಟಾಣಿ ನಗರ ನಿವಾಸಿ ಮನೋಜ್(45) ಎಂಬಾತನೇ ಬಂಧಿತ ಆರೋಪಿಯಾಗಿದ್ದು, ನಗರ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ನಗರದ ಸುದರ್ಶನ ಅತಿಥಿ ಗೃಹದ ಬಳಿಯಿರುವ ಶ್ರೀಮುನೀಶ್ವರ ದೇವಾಲಯ ಆವರಣದಲ್ಲಿ ಸಮುದಾಯ ಭವನದ ಶೌಚಾಲಯ ಮತ್ತು ಸ್ನಾನಗೃಹದ ಕಟ್ಟಡ ಕಾಮಗಾರಿಗೆ ನಗರಸಭೆ 10 ಲಕ್ಷ ರೂ.ಅನುದಾನ ನೀಡಿತ್ತು. ಅದರಂತೆ ಕಳೆದ 1 ವಾರಗಳಿಂದ ಕಟ್ಟಡ ಕಾಮಗಾರಿ ಆರಂಭಿಸಲಾಗಿತ್ತು. ನಿನ್ನೆ ದಿನ ಕಟ್ಟಡ ಕಾಮಗಾರಿಗೆಂದು ಕುಶಾಲನಗರದಿಂದ 3 ಬಂಡಲ್ ಕಬ್ಬಿಣದ ಸಲಾಖೆಗಳನ್ನು ತಂದು ದೇವಾಲಯದ ಆವರಣದಲ್ಲಿ ಹಾಕಲಾಗಿತ್ತು. ಮಾತ್ರವಲ್ಲದೇ, ಸ್ಥಳದಲ್ಲಿ 12 ಚೀಲ ಸಿಮೆಂಟ್ ಮತ್ತು 5 ಕೆ.ಜಿ. ಬೈಂಡಿಂಗ್ ವೈರ್‍ಗಳನ್ನು ಕೂಡ ಇಡಲಾಗಿತ್ತು. ಆದರೆ ಮಂಗಳವಾರ ಬೆಳಿಗ್ಗೆ 9.30 ಗಂಟೆಗೆ ಕಾಮಗಾರಿ ಸ್ಥಳಕ್ಕೆ ಬಂದ ಕಾರ್ಮಿಕರು ಕಬ್ಬಿಣದ ರಾಡ್‍ಗಳು ಮತ್ತು ಸಿಮೆಂಟ್ ಚೀಲಗಳು ನಾಪತ್ತೆಯಾದ ಬಗ್ಗೆ ದೇವಾಲಯ ಸಮಿತಿಯ ಸದಸ್ಯರ ಗಮನಕ್ಕೆ ತಂದಿದ್ದಾರೆ.

ತಕ್ಷಣವೇ ಕಾರ್ಯೋನ್ಮುಖರಾದ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಹಾಗೂ ಮುನೀಶ್ವರ ದೇವಾಲಯ ಸಮಿತಿ ಸದಸ್ಯ ಉಣ್ಣಿಕೃಷ್ಣ, ನಿವೃತ್ತ ಪೊಲೀಸ್ ಸಿಬ್ಬಂದಿ ಕಾವೇರಪ್ಪ, ಗುತ್ತಿಗೆದಾರರಾದ ಜಯ, ರಾಜೇಂದ್ರ ಮತ್ತು ಚಾಲ್ಸ್ ಎಂಬವರು ಕಳ್ಳತನ ಪ್ರಕರಣ ಪ್ತತೆ ಹಚ್ಚಲು ಮುಂದಾಗಿದ್ದಾರೆ. ದೇವಾಲಯದ ಪಕ್ಕದ ಮನೆಯೊಂದರ ಸಿ.ಸಿ. ಕ್ಯಾಮರ ಪರಿಶೀಲಿಸಿದ ಸಂದರ್ಭ ಆಟೋ ರಿಕ್ಷಾವೊಂದರಲ್ಲಿ ಕಬ್ಬಿಣದ ರಾಡ್‍ಗಳು ಮತ್ತು ಸಿಮೆಂಟ್ ಚೀಲಗಳನ್ನು ಕದ್ದೊಯ್ಯುತ್ತಿರುವ ದೃಶ್ಯ ಸೆರೆಯಾಗಿದೆ. ಈ ಕುರಿತು ಮಡಿಕೇರಿ ನಗರ ಪೊಲೀಸ್‍ರಿಗೆ ಮಾಹಿತಿ ನೀಡಿದ ದೇವಾಲಯ ಸಮಿತಿ ಸದಸ್ಯರು ಆಟೋ ರಿಕ್ಷಾದ ಪತ್ತೆಗೂ ಮುಂದಾಗಿದ್ದಾರೆ.

ಸಿ.ಸಿ. ಕ್ಯಾಮರಾದಲ್ಲಿ ಸೆರೆಯಾದ ಆಟೋ ರಿಕ್ಷಾವನ್ನು ಗುರುತಿಸಿದ ದೇವಾಲಯ ಸಮಿತಿ ಪದಾಧಿಕಾರಿಗಳು ಅದೇ ಆಟೋ ರಿಕ್ಷಾದಲ್ಲಿ ಕಾಮಗಾರಿ ನಡೆಸುವ ಗುತ್ತಿಗೆದಾರರನ್ನು ಕೂಡ ಸ್ಥಳಕ್ಕೆ ಬರ ಹೇಳಿದ್ದಾರೆ. ಸ್ಥಳದಲ್ಲಿ ಮಫ್ತಿಯಲ್ಲಿದ್ದ ಪೊಲೀಸರಿಗೆ ಆರೋಪಿ ಮನೋಜ್‍ನನ್ನು ಹಿಡಿದು ಕೊಡುವಲ್ಲಿ ದೇವಾಲಯ ಸಮಿತಿ ಪದಾಧಿಕಾರಿಗಳು ಯಶಸ್ವಿಯಾಗಿದ್ದಾರೆ. ಆತನನ್ನು ವಿಚಾರಣೆ ನಡೆಸಿದ ಬಳಿಕ ಮನೆಯಲ್ಲಿಟ್ಟ 12 ಚೀಲ ಸಿಮೆಂಟ್,  5 ಕೆ.ಜಿ. ಬೈಂಡಿಂಗ್ ವೈರ್ ಮತ್ತು ಸುದರ್ಶನ ಅತಿಥಿ ಗೃಹದ ಹಿಂಭಾಗದ ಕಾಡಿನೊಳಗೆ ಅವಿತಿಟ್ಟಿದ್ದ 3 ಬಂಡಲ್ ಕಬ್ಬಿಣದ ರಾಡ್‍ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಆರೋಪಿಯನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: