ಕರ್ನಾಟಕಪ್ರಮುಖ ಸುದ್ದಿ

ಕೊನೆಭಾಗದ ರೈತರಿಗೆ ನೀರು ವಿತರಣೆ ಸಮಸ್ಯೆ: ಪಕ್ಷಾತೀತ ಚರ್ಚೆ, ಸಹಕಾರದಿಂದ ಪರಿಹಾರ ಸಾಧ್ಯ

ಬೆಳಗಾವಿ (ಡಿ.12): ರಾಜ್ಯದ ಕೃಷ್ಣಾ ಹಾಗೂ ಕಾವೇರಿ ಕೊಳ್ಳದ ಎಲ್ಲಾ ಜಲಾಶಯಗಳ ನಾಲೆಗಳ ಕೊನೆಯ ಭಾಗದ ರೈತರು ನೀರು ತಲುಪದೇ ಸಮಸ್ಯೆ ಎದುರಿಸುತ್ತಿದ್ದಾರೆ. ಅಚ್ಚುಕಟ್ಟು ಪ್ರದೇಶದಲ್ಲಿ ಪಂಪ್‍ಸೆಟ್‍ಗಳ ಮೂಲಕ ಅಕ್ರಮವಾಗಿ ನೀರು ಪಡೆಯುವದು ಇದಕ್ಕೆ ಪ್ರಮುಖ ಕಾರಣವಾಗಿದೆ. ಪಕ್ಷಾತೀತವಾಗಿ ಎಲ್ಲಾ ರಾಜಕೀಯ ಪಕ್ಷಗಳ ಚರ್ಚೆ ಮತ್ತು ಸಹಕಾರದಿಂದ ಇದಕ್ಕೆ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂದು ಜಲಸಂಪನ್ಮೂಲ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಿ. ಕೆ. ಶಿವಕುಮಾರ್ ಹೇಳಿದರು.

ಮಂಗಳವಾರ ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ಮಂಡ್ಯ ಜಿಲ್ಲೆಯ ಮದ್ದೂರು ಮತ್ತು ಮಳವಳ್ಳಿ ತಾಲ್ಲೂಕಿನ ಶಿಂಷಾ ನದಿಯಿಂದ ನಾಲೆಯ ಕೊನೆಯ ಭಾಗಕ್ಕೆ ನೀರುಣಿಸಲು 13 ಏತ ನೀರಾವರಿ ಯೋಜನೆಗಳನ್ನು ಮಂಜೂರು ಮಾಡಲಾಗಿದೆ. ಇವುಗಳಲ್ಲಿ ಹೆಮ್ಮನಹಳ್ಳಿ, ಕಬ್ಬಾರೆ, ಬಾಣೋಜಿಪಂತ್ ಏತ ನೀರಾವರಿ ಯೋಜನೆಗಳು ಪೂರ್ಣಗೊಂಡಿವೆ. ಒಟ್ಟು 745.82 ಲಕ್ಷ ರೂ. ಯೋಜನಾ ವೆಚ್ಚದಲ್ಲಿ 695 ಲಕ್ಷ ರೂ. ವೆಚ್ಚವಾಗಿದೆ.

ಆಲಮಟ್ಟಿ, ತುಂಗಭದ್ರಾ ಸೇರಿದಂತೆ ಎಲ್ಲ ಜಲಾಶಯಗಳ ನಾಲೆಯ ಕೊನೆಯ ಭಾಗದ ರೈತರಿಗೆ ನೀರು ತಲುಪಿಸಲು ಸಮಸ್ಯೆಗಳು ಇವೆ. ಏಕಬೆಳೆ ಕೃಷಿ ಪದ್ಧತಿಯಿಂದಲೂ ಮಾರಕವಾಗುತ್ತಿದೆ. ಇದಕ್ಕೆ ಪರಿಹಾರ ಕಂಡುಕೊಳ್ಳಲು ರಾಜ್ಯದ ಎಲ್ಲಾ ಮಾಜಿ ಮುಖ್ಯಮಂತ್ರಿಗಳ ಮತ್ತು ಮಾಜಿ ನೀರಾವರಿ ಮಂತ್ರಿಗಳ ಸಭೆ ಆಯೋಜಿಸಿ ಸಲಹೆ ಪಡೆಯಲಾಗಿದೆ. ಪಕ್ಷಾತೀತ ಸಹಕಾರ ಮುಖ್ಯವಾಗಿದೆ ಎಂದರು. (ಎನ್.ಬಿ)

Leave a Reply

comments

Related Articles

error: