ಪ್ರಮುಖ ಸುದ್ದಿ

ಸಮಾಜದ ಸ್ವಾಸ್ಥ್ಯ ಕಾಪಾಡುವ ಶಕ್ತಿ ಸಂಗೀತಕ್ಕಿದೆ : ಪ್ರೊ. ಮಲೆಯೂರು ಗುರುಸ್ವಾಮಿ

ರಾಜ್ಯ(ಚಾಮರಾಜನಗರ)ಡಿ.12;- ಮನುಷ್ಯನ ಆರೋಗ್ಯವನ್ನು ವೃದ್ಧಿಸುವ , ಸಮಾಜದ ಸ್ವಾಸ್ಥ್ಯ ಕಾಪಾಡುವ ಶಕ್ತಿ ಸಂಗೀತಕ್ಕಿದೆ. ಮಾನವೀಯ ಗುಣವಿರದ ಕಲಾವಿದ ಕಲಾವಿದನಲ್ಲ ಎಂದು ಸಂಸ್ಕೃತಿ ಚಿಂತಕ ಪ್ರೊ. ಮಲೆಯೂರು ಗುರುಸ್ವಾಮಿ ತಿಳಿಸಿದರು.

ರಂಗತರಂಗ ಟ್ರಸ್ಟ್ ಮೈಸೂರಿನ ಡಾ.ಶಿವರಾತ್ರಿ ರಾಜೇಂದ್ರ ಭವನದಲ್ಲಿ ನಡೆಸಿದ 20ನೇ ರಾಜ್ಯ ಮಟ್ಟದ ಭಾವಗೀತೆ ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇಂದಿನ ದಿನಗಳು ಅಜೆಂಡಾದೊಂದಿಗೆ ಜೀವಿಸುವ ದಿನಮಾನಗಳಾಗಿದೆ. ಯಾವುದೆ ಕಾರ್ಯಕ್ರಮಗಳಿಗೆ ಹೋಗಬೇಕೆಂದರೆ ಅದರಿಂದ ನನಗೆ ಏನು ಲಾಭ? ಎಷ್ಟು ಲಾಭ? ಎಂಬ ಲೆಕ್ಕಾಚಾರ ಇರುತ್ತದೆ. ಅಷ್ಟೆ ಅಲ್ಲ ಶವ ಸಂಸ್ಕಾರಕ್ಕೆ, ಸಂತಾಪ ಸಭೆಗೆ ಹೋಗಬೇಕಾದರೂ ಜಾತಿ ಲೆಕ್ಕಾಚಾರ, ರಾಜಕೀಯ ಲೆಕ್ಕಾಚಾರ ಹಾಕುವ ಪರಿಸ್ಥಿತಿ ನಿರ್ಮಿತವಾಗಿದೆ. ಸಂಸ್ಕೃತಿ ಅರಿವಿಲ್ಲದವರು ಸಂಸ್ಕೃತಿ ಕಟ್ಟುವ, ಸಮಸಮಾಜದ ಪರಿಕಲ್ಪನೆಯೇ ಇಲ್ಲದವರು ಸಮಾಜ ಸೇವಕರು ಎಂದು ಹೇಳಿಕೊಳ್ಳುವ ಉಸಿರುಗಟ್ಟಿದ ವಾತಾವರಣದಲ್ಲಿ ಜೀವಿಸಿದ್ದೇವೆ. ಇಂತಹ ಸಂದರ್ಭದಲ್ಲಿ ಕಲಾವಿದರ ಮೇಲೆ ಗುರುತರವಾದ ಜವಾಬ್ದಾರಿಯಿದ್ದು ಹೊಣೆಗಾರಿಕೆಯಿಂದ ನಿರ್ವಹಿಸಬೇಕು ಎಂದರು.

ಬಹುಮಾನ ವಿತರಿಸಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಹನೂರು ಚನ್ನಪ್ಪ ಮಾತನಾಡಿ ಪರಿಶ್ರಮವಿಲ್ಲದೆ ಕಲಾವಿದನಾಗಲಾರ. ಪ್ರತಿಯೊಬ್ಬ ಕಲಾವಿದನಿಗೆ ಸ್ಪಷ್ಟ ಗುರಿಯಿರಬೇಕು. ನಿರಂತರ ಪರಿಶ್ರಮದ ಮೂಲಕ ಸಾಧನೆಗೈಯ್ಯಬೇಕು. ರಂಗತರಂಗ ಈ ಭಾಗದ ಸಾಂಸ್ಕೃತಿಕ ಮಾದರಿ ಸಂಸ್ಥೆಯಾಗಿದ್ದು ಸತತ 27 ವರ್ಷಗಳ ಸಾಂಸ್ಕೃತಿಕ ಚರಿತ್ರೆಯೊಳಗೆ ದಾಖಲಾರ್ಹ ಸಂಸ್ಥೆಯಾಗಿದೆ ಎಂದರು.

ಪ್ರಮತಿ ವಿದ್ಯಾಸಂಸ್ಥೆಯ ಗೌರವ ಕಾರ್ಯದರ್ಶಿ ಹೆಚ್.ವಿ. ರಾಜೀವ್ ಮಾತನಾಡಿ ಚಾಮರಾಜನಗರ ಜಿಲ್ಲೆಯ ಸಂಸ್ಕೃತಿ ಮತ್ತು ಪರಂಪರೆಯನ್ನು ಎಲ್ಲೆಡೆ ಪಸರಿಸುವ ಕೆಲಸ ಮಾಡುತ್ತಿರುವ ರಂಗತರಂಗ ಟ್ರಸ್ಟ್ ಎಲ್ಲರಿಂದ ಪ್ರಶಂಸೆಗೆ ಒಳಪಟ್ಟಿದೆ ಎಂದರು.

ಟ್ರಸ್ಟ್‍ನ ಅಧ್ಯಕ್ಷ ಸೋಮಸೇಖರ ಬಿಸಲ್ವಾಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅಂಬಳೆ ಸಿದ್ದರಾಜು, ಸೋಮಸುಂದರ್, ಎಸ್.ಜಿ. ಮಹಾಲಿಂಗಗಿರ್ಗಿ, ಯಡಿಯೂರು ಮಹದೇವ, ಪುಷ್ಪಾ ಸೋಮಸುಂದರ್, ಧನಲಕ್ಷ್ಮಿ, ಕಲೆನಟರಾಜು, ಕವಿತ ಕಾಮತ್, ಕೆ.ಅನಂದಕುಮಾರ್, ಮಿಮಿಕ್ರಿ ಮಲ್ಲಣ್ಣ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: