ಪ್ರಮುಖ ಸುದ್ದಿ

ಬಿಜೆಪಿ ದುರಾಡಳಿತಕ್ಕೆ ಜನತೆ ತಕ್ಕ ಉತ್ತರ,ಮೋದಿ ಮನೆಗೆ ಕಳುಹಿಸಲು ದಿನಗಣನೆ: ಡಿ. ಬಸವರಾಜ್

ರಾಜ್ಯ(ದಾವಣಗೆರೆ)ಡಿ.12:- ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕಳೆದ ನಾಲ್ಕೂವರೆ ವರ್ಷಗಳ ದುರಾಡಳಿತಕ್ಕೆ ಪಂಚರಾಜ್ಯಗಳ ಚುನಾವಣೆಗಳಲ್ಲಿ ಜನತೆ ತಕ್ಕ ಉತ್ತರ ನೀಡಿದ್ದಾರೆ. ಪ್ರಧಾನಿ ಮೋದಿಯವರನ್ನು ಮನೆಗೆ ಕಳುಹಿಸಲು ದಿನಗಣನೆ ಪ್ರಾರಂಭವಾಗಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಹಾಗೂ ಕರ್ನಾಟಕ ರೇಷ್ಮೆ ಉದ್ಯಮಿಗಳ ನಿಗಮದ ಮಾಜಿ ಅಧ್ಯಕ್ಷರಾದ ಡಿ. ಬಸವರಾಜ್ ಪಂಚರಾಜ್ಯದ ತೀರ್ಪಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ಬಿಜೆಪಿ ಮತ್ತು ಮೋದಿ ವಿರುದ್ಧ ಜನತೆ ಜನಾದೇಶ ನೀಡಿದ್ದಾರೆ. ಮುಂದಿನ ದಿನಗಳ ಬಿಜೆಪಿ ತನ್ನ ಅಸ್ತಿತ್ವಕ್ಕೆ ಪರದಾಡಬೇಕಾಗಿದೆ ಎಂದು ಭವಿಷ್ಯ ನುಡಿದಿದ್ದಾರೆ. ಕಾಂಗ್ರೆಸ್ ಮುಕ್ತ ಮಾಡಲು ಹೊರಟ್ಟಿದ್ದ ಮೋದಿ ಮತ್ತು ಅಮಿತ್ ಷಾಗೆ ಈ ಫಲಿತಾಂಶ ನೋಡಿದರೆ ನೂರಕ್ಕೆ ನೂರು ಮೋದಿ ಮುಕ್ತಭಾರತ ಶೀಘ್ರ ಉದಯಿಸಲಿದೆ ಎಂದು ಡಿ. ಬಸವರಾಜ್ ಅಭಿಪ್ರಾಯ ಪಟ್ಟಿದ್ದಾರೆ.

ಮೋದಿ ಆಡಳಿತದಲ್ಲಿ ಭಾರೀ ಪೊಳ್ಳು ಭಾಷಣ, ವಿದೇಶಿ ಪ್ರವಾಸ, ನೋಟು ರದ್ಧತಿ, ಅವೈಜ್ಞಾನಿಕ ಜಿ.ಎಸ್.ಟಿ. ಜಾರಿ ಅಗತ್ಯ ವಸ್ತುಗಳ ಬೆಲೆ ಏರಿಕೆ, ಅಡುಗೆ ಅನಿಲ, ಡೀಸೆಲ್, ಪೆಟ್ರೋಲ್ ಬೆಲೆ ಏರಿಕೆಯಿಂದ ಜನ ರೋಸಿ ಹೋಗಿದ್ದರು. ರೆಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ಹಾಗೂ ಉದ್ದಿಮೆದಾರರ ಪರಲಾಭಿ ಮಾಡಿದ ಮೋದಿ ರೈತರ ವಿರೋಧಿ ನೀತಿಯಿಂದಾಗಿ ಜನ ಮೋದಿ ವಿರುದ್ಧ ಮತ ಚಲಾಯಿಸಿದ್ದಾರೆಂದು ಡಿ. ಬಸವರಾಜ್ ತಿಳಿಸಿದ್ದಾರೆ.

ಪಂಚರಾಜ್ಯಗಳ ಚುನಾವಣೆ ಸಂದರ್ಭದಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಯವರನ್ನು ವಿಧವೆ ಎಂದು ಟೀಕಿಸಿದ್ದು ರಾಹುಲ್‍ಗಾಂಧಿಯವರ ವಿರುದ್ಧ ಲಘುವಾಗಿ ಮಾತನಾಡಿದ್ದನ್ನು ದೇಶದ ಜನ ಸಹಿಸುವುದಿಲ್ಲವೆಂದು ರುಜುವಾತು ಮಾಡಿದ್ದಾರೆ. ಪಂಚರಾಜ್ಯಗಳ ಫಲಿತಾಂಶ ಮುಂದಿನ 2019ರ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಆಗಲಿದೆ ಎಂದು  ಡಿ. ಬಸವರಾಜ್ ತಿಳಿಸಿದ್ದಾರೆ. ಎ.ಐ.ಸಿ.ಸಿ. ಅಧ್ಯಕ್ಷರಾಗಿ ಒಂದು ವರ್ಷ ಪೂರೈಸಿರುವ  ರಾಹುಲ್‍ಗಾಂಧಿಯವರಿಗೆ ಕಾಂಗ್ರೆಸ್ ಕಾರ್ಯಕರ್ತರು ಈ ಗೆಲವು ಸಮರ್ಪಿಸಿದ್ದಾರೆ. (ಎಸ್.ಎಚ್)

Leave a Reply

comments

Related Articles

error: