
ಕರ್ನಾಟಕ
ಸಾರ್ವಜನಿಕರ ಆತಂಕಕ್ಕೆ ಕಾರಣವಾದ ಮೆಟ್ರೋ ಪಿಲ್ಲರ್ ಬಿರುಕು ವದಂತಿ
ಬೆಂಗಳೂರು,ಡಿ.12-ನಗರದ ಎಂ.ಜಿ.ರಸ್ತೆಯ ಟ್ರಿನಿಟಿ ಸರ್ಕಲ್ ಬಳಿ ಇರುವ ಮೆಟ್ರೋ ಪಿಲ್ಲರ್ವೊಂದರಲ್ಲಿ ಬಿರುಕು ಉಂಟಾಗಿದೆ ಎಂಬ ಸುದ್ದಿ ಪ್ರಯಾಣಿಕರು ಹಾಗೂ ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.
ಟ್ರಿನಿಟಿ ಸರ್ಕಲ್ನಲ್ಲಿರುವ 155 ನಂಬರ್ನ ಪಿಲ್ಲರ್ನಲ್ಲಿ ಬಿರುಕು ಕಾಣಿಸಿಕೊಂಡಿದೆ ಎನ್ನಲಾಗಿದ್ದು, ಆ ಭಾಗದಲ್ಲಿ 45 ಕಿ.ಮೀ ವೇಗದಲ್ಲಿ ಸಂಚರಿಸುವ ರೈಲು 20 ಕಿ.ಮೀ ವೇಗದಲ್ಲಿ ಸಂಚರಿಸುತ್ತಿದೆ.
ಟ್ರಿನಿಟಿ ನಿಲ್ದಾಣದ 155ನೇ ಪಿಲ್ಲರ್ನಲ್ಲಿ ಜೇನು ಗೂಡು ಕಟ್ಟಿತ್ತು ಎಂದು ಬಿಎಂಆರ್ ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಕಚೇರಿ ಸ್ಪಷ್ಟನೆ ನೀಡಿದೆ. ಆದರೆ ಪಿಲ್ಲರ್ ಮೇಲಿನ ಪಯರ್ ಕ್ಯಾಪ್ ಸ್ವಲ್ಪ ಜರುಗಿದೆ. ಈಗ ಪಿಲ್ಲರ್ನ ಎರಡೂ ಬದಿಗೆ ಆಧಾರವಾಗಿ ಕಬ್ಬಿಣದ ಕಂಬ ಅಳವಡಿಸಲಾಗುತ್ತಿದೆ. ಎಂಜಿ ರಸ್ತೆಯಿಂದ ಟ್ರಿನಿಟಿ ನಿಲ್ದಾಣಕ್ಕೆ ರೈಲು ಬರುವಾಗ 10-15 ಕಿ.ಮೀಗೆ ರೈಲಿನ ವೇಗ ಇಳಿಯುತ್ತದೆ (ಸಾಮಾನ್ಯ ವೇಗ 60 ಕಿ.ಮೀ). ಹಲಸೂರು ನಿಲ್ದಾಣದಿಂದ ಬರುವಾಗಲೂ ರೈಲು ವೇಗ ಇಳಿಯುತ್ತದೆ.
ಈ ಬಿರುಕು ಏನು ಎಂದು ಫೋಟೋ ಸಮೇತ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಅಧಿಕಾರಿಗಳ ಗಮನಕ್ಕೆ ಟ್ವಿಟರ್ ಮೂಲಕ ತರಲಾಗಿದ್ದು, ಈ ಬಗ್ಗೆ ನಮ್ಮ ಮೆಟ್ರೋ ಅಧಿಕಾರಿಗಳು ಟ್ವಿಟರ್ ಮೂಲಕವೇ ಸ್ಪಷ್ಟಿಕರಣ ನೀಡಿದ್ದಾರೆ.
ಕಾಂಕ್ರೀಟ್ ಬ್ಲಾಕ್ ಬಳಿ ಜೇನುಗೂಡು ಕಟ್ಟಿದ್ದು ಅದನ್ನು ತೊಲಗಿಸಲು ರಿಪೇರಿ ಕೆಲಸ ಕೈಗೊಂಡಿದ್ದೇವೆ. ಇಲ್ಲಿ ಮೆಟ್ರೊ ರೈಲಿನ ವೇಗವನ್ನು ನಿಯಂತ್ರಿಸಲಾಗಿದೆ. 10 ರಿಂದ 15 ನಿಮಿಷಗಳ ಅವಧಿಯಲ್ಲಿ ರೈಲುಗಳು ಸಂಚರಿಸಲಿವೆ. ಹಾಗಾಗಿ ಮೆಟ್ರೊ ಸೇವೆಯಲ್ಲಿ ಸ್ವಲ್ಪ ವ್ಯತ್ಯಯ ಆಗಬಹುದು. ಪ್ರಯಾಣಿಕರು ಸಹಕರಿಸಬೇಕು ಎಂದು ಟ್ವಿಟ್ ಮೂಲಕ ತಿಳಿಸಿದ್ದಾರೆ.
ರಿಪೇರಿ ಕೆಲಸದ ಕಾರಣ ಏಕಮುಖ ಸಂಚಾರಕ್ಕೆ ಅವಕಾಶ ನೀಡಲಾಗಿತ್ತು. ಬೆಳಿಗ್ಗೆ 10.20ರಿಂದ ರೈಲು ಸಂಚಾರ ಯಥಾಸ್ಥಿತಿಗೆ ಬಂದಿದೆ ಎಂದು ಇನ್ನೊಂದು ಟ್ವಿಟ್ ನಲ್ಲಿ ಮೆಟ್ರೋ ತಿಳಿಸಿದೆ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಪಿಲ್ಲರ್ನಲ್ಲಿ ಬಿರುಕು ಬಿಟ್ಟಿದೆ, ಸ್ಲೈಡರ್ ಜರುಗಿದೆ ಎಂಬ ಸಂಗತಿ ಆತಂಕಕ್ಕೆ ಕಾರಣವಾಗಿತ್ತು.
ಈ ಬಗ್ಗೆ ಮೆಟ್ರೊ ಪತ್ರಿಕಾ ಪ್ರಕಟಣೆಯೊಂದನ್ನೂ ನೀಡಿದ್ದು, ಟ್ರಿನಿಟಿ ಮೆಟ್ರೊ ನಿಲ್ದಾಣದ ಕಾಂಕ್ರೀಡ್ ಬ್ಲಾಕ್ ಬಳಿ ಜೇನುಗೂಡು ಕಟ್ಟಿದೆ. ಹಾಗೆಯೇ ಮೆಂಟೇನೆನ್ಸ್ ತಂಡ ಕಾಂಕ್ರೀಟ್ ನಿರ್ಮಾಣವನ್ನು ನಿಯಮಿತವಾಗಿ ಪರೀಕ್ಷಿಸುತ್ತಿರುತ್ತದೆ. ಹಾನಿಗೊಳಗಾಗಿರುವ ಭಾಗ ತುಂಬಾ ಚಿಕ್ಕದು. ಇದೇನು ಒಟ್ಟಾರೆ ಸುರಕ್ಷತೆಯ ಮೇಲೆ ಪರಿಣಾಮ ಬೀರುವುದಿಲ್ಲ. ಮುಂಜಾಗ್ರತೆ ಕ್ರಮವಾಗಿ ಇಂಜಿನಿಯರು ಇದನ್ನು ಪರಿಶೀಲಿಸುತ್ತಿದ್ದಾರೆ ಎಂದಿದೆ.
ಒಟ್ಟಾರೆ ಮೆಟ್ರೋ ಸಂಚಾರದಲ್ಲಾದ ವ್ಯತ್ಯಯದ ಬಗ್ಗೆ ಪ್ರಯಾಣಿಕರು ಟ್ವಿಟ್ ಮಾಡಿ ತಮ್ಮ ಅಳಲು ತೋಡಿಕೊಂಡಿದ್ದಾರೆ. (ಎಂ.ಎನ್)