ಮೈಸೂರು

ಹೆಚ್5ಎನ್8 ವೈರಸ್‍ನಿಂದ ಮೃಗಾಲಯದಲ್ಲಿ ಪಕ್ಷಿ ಸತ್ತಿಲ್ಲ : ಮಲ್ಲಿಗೆ ವೀರೇಶ್ ಸ್ಪಷ್ಟನೆ

ಮೈಸೂರು ಮೃಗಾಲಯದ ಪಕ್ಷಿಗಳಲ್ಲಿ ಹೆಚ್5ಎನ್8 ಸೋಂಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಫೆ.2ರವರೆಗೆ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿರುವ ಕ್ರಮವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಬಲಿಸಿದ್ದು, ಸಾಧ್ಯವಾದಷ್ಟು ಬೇಗ ತೆರೆಯಿರಿ ಎಂದು ಸೂಚನೆ ನೀಡಿದ್ದಾರೆ ಎಂದು ಮೃಗಾಲಯ ಪ್ರಾಧಿಕಾರದ ಅಧ್ಯಕ್ಷೆ ಮಲ್ಲಿಗೆ ವೀರೇಶ್ ತಿಳಿಸಿದರು.

ಶನಿವಾರ ಮೃಗಾಲಯದಲ್ಲಿ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಚಾಮರಾಜೇಂದ್ರ ಮೃಗಾಲಯ ವಿಶ್ವದೆಲ್ಲೆಡೆ ಹೆಸರುವಾಸಿಯಾಗಿದ್ದು, ಪ್ರಾಣಿ ಪಕ್ಷಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಿ. ಜತೆಗೆ ಸಾರ್ವಜನಿಕರಿಗೂ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡು ಆದಷ್ಟು ಬೇಗ ಸಾರ್ವಜನಿಕರ ಪ್ರವೇಶಕ್ಕೆ ಮೃಗಾಲಯವನ್ನು ಮುಕ್ತವಾಗಿಸಿ ಎಂದು ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಸಭೆಯಲ್ಲಿ ಸೂಚಿಸಿದ್ದಾರೆ ಎಂದು ಹೇಳಿದರು.

ಯಾವುದೇ ತೊಂದರೆಯಿಲ್ಲ: ಮೃಗಾಲಯದಲ್ಲಿ ಹೆಚ್5ಎನ್8 ವೈರಸ್‍ನಿಂದ ಪಕ್ಷಿ ಸತ್ತಿದೆ ಎಂಬುದು ಸತ್ಯಕ್ಕೆ ದೂರವಾದುದು. ಸತ್ತಿರುವ ಪಕ್ಷಿ ಹೊರಗಿನಿಂದ ಬಂದು ಸತ್ತಿದ್ದಾಗಿದ್ದು ಮರಣೋತ್ತರ ಪರೀಕ್ಷೆಯಲ್ಲಿ ನೆಗೆಟಿವ್ ಫಲಿತಾಂಶ ಬಂದಿದೆ. ಸೋಂಕು ತಡೆಗಟ್ಟಲು ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದ್ದು, ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲೇ ಇದೆ. ಇದರಿಂದ ಪ್ರಾಣಿ-ಪಕ್ಷಿಗಳಿಗಾಗಲಿ, ಸಾರ್ವಜನಿಕರಿಗಾಗಲಿ ಯಾವ ತೊಂದರೆಯೂ ಇಲ್ಲ. ಸೋಂಕು 1 ತಿಂಗಳವರೆಗೂ ಇರುವುದರಿಂದ ಮೃಗಾಲಯವನ್ನು ಬಂದ್ ಮಾಡಲಾಗಿದ್ದು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಹೇಳಿದರು.

ಬಳಿಕ ಮಾತನಾಡಿದ ಪಶು ಆರೋಗ್ಯ ಮತ್ತು ಜೈವಿಕ ಸಂಸ್ಥೆಯ ನಿರ್ದೇಶಕ ಡಾ.ಭೈರೇಗೌಡ, ಹೆಚ್5ಎನ್8 ಸೂಕ್ಷ್ಮ ಕಾಯಿಲೆಯಾಗಿದ್ದು ಅತ್ಯಂತ ಜಾಗರೂಕತೆ ವಹಿಸಬೇಕಾದ ಅಗತ್ಯವಿದೆ. ಸೋಂಕು ಹರಡಿದ ಬಳಿಕ 1ತಿಂಗಳು ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು. ದೆಹಲಿ, ಗ್ವಾಲಿಯರ್, ರೂರ್ಕೆಲಾ ಹಾಗೂ ಒರಿಸ್ಸಾದ ಮೃಗಾಲಯದಲ್ಲಿ ಹೆಚ್5ಎನ್8 ಕಾಣಿಸಿಕೊಂಡಿತ್ತು. ಸೋಂಕು ಹರಡಿದ ಬಳಿಕ ಸತ್ತ ಪ್ರಾಣಿಗಳನ್ನು ಪರೀಕ್ಷೆಗೊಳಪಡಿಸಿ 2 ಬಾರಿ ನೆಗೆಟಿವ್ ಫಲಿತಾಂಶ ಬಂದಾಗ ಮಾತ್ರ ಸಾರ್ವಜನಿಕರಿಗೆ ಪ್ರವೇಶ ಕಲ್ಪಿಸಲು ಸಾಧ್ಯ. ಇದು ಮನುಷ್ಯನಿಗೆ ಹರಡುವ ಸಾಧ್ಯತೆ ಕಡಿಮೆ ಇದ್ದರೂ ಬೇರೆ ಬೇರೆ ವೈರಸ್‍ಗಳು ಸೇರಿ ಪ್ರಾಣಹಾನಿಯೂ ಸಂಭವಿಸುವ ಸಾಧ್ಯತೆಗಳಿರುವುದರಿಂದ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಿರುವುದು ಉತ್ತಮ ಕೆಲಸ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ.ಕೆ.ಸೋಮಶೇಖರ್, ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ಕರಿಕಾಳನ್ ಮತ್ತಿತರರು ಇದ್ದರು.

 

 

Leave a Reply

comments

Related Articles

error: