ಮೈಸೂರು

ಬೆಂಗಳೂರು ಲೈಂಗಿಕ ದೌರ್ಜನ್ಯ ಪ್ರಕರಣ ಸಾಮಾಜಿಕ ಅಧಃಪತನ ಸಂಕೇತ: ಡಾ.ಹೆಚ್.ಪಿ.ದೇವಕಿ

ಬೆಂಗಳೂರಿನಲ್ಲಿ ನೂತನ ವರ್ಷದಂದು ಯುವತಿಯರ ಮೇಲೆ ನಡೆದ ದೌರ್ಜನ್ಯ ಪ್ರಕರಣವನ್ನು ಮೈಸೂರಿನ ಪ್ರಾಚ್ಯವಿದ್ಯಾಸಂಶೋಧನಾಲಯ ನಿರ್ದೇಶಕಿ ಪ್ರೊ.ಡಾ.ಹೆಚ್.ಪಿ.ದೇವಕಿ ಅವರು ಖಂಡಿಸಿದ್ದಾರೆ. 21ನೇ ಶತಮಾನದಲ್ಲಿಯೂ ಹೆಣ್ಣಿನ ಮೇಲೆ ನಡೆಯುತ್ತಿರುವ ದೈಹಿಕ ಶೋಷಣೆ ಖಂಡನೀಯ. ವಿದೇಶಗಳಲ್ಲಿ ಮಧ್ಯರಾತ್ರಿ ಸಮಯದಲ್ಲೂ ಯಾವುದೇ ಭಯವಿಲ್ಲದೇ ಏಕಾಂಗಿಯಾಗಿ ನಾನು ಸಂಚರಿಸಿದ ನಿದರ್ಶನಗಳಿವೆ. ಅಲ್ಲಿರುವಂತಹ ಮುಕ್ತವಾತಾವರಣ ನಮ್ಮಲ್ಲಿ ಏಕಿಲ್ಲ? ಎಂದು ಪ್ರಶ್ನಿಸಿದರು.

ಶನಿವಾರ ನಡೆದ “ಬ್ರಹ್ಮನಿಧಿ” ಗ್ರಂಥ ಲೋಕಾರ್ಪಣೆ ಸಮಾರಂಭದ ಪಾಶ್ವದಲ್ಲಿ ಮಾತನಾಡಿದ ಅವರು ‘ಸಿಟಿಟುಡೆ’ ಪ್ರತಿನಿಧಿ ರೇಖಾ ಪ್ರಕಾಶ್ ಅವರೊಂದಿಗೆ ತಮ್ಮ ಅನಿಸಿಕೆ ಹಂಚಿಕೊಂಡರು.

ನೂತನ ವರ್ಷಾಚರಣೆಯಂದು ಯುವತಿ ತೊಟ್ಟ ಉಡುಗೆ ಚಿಕ್ಕದಾಗಿತ್ತು, ಅರೆ ನಗ್ನಾವಸ್ಥೆ ಕಾಮುಕರನ್ನು ಉದ್ರೇಕಿಸಿದೆ ಎನ್ನುವ ಬೇಜವಾಬ್ದಾರಿ ಹೇಳಿಕೆಯನ್ನು ಅವರು ಖಂಡಿಸಿದರು. ನಿನ್ನೆ ಬುರ್ಖಾಧಾರಿ ಮುಸ್ಲಿಂ ಮಹಿಳೆಯ ಮೇಲೆಯೂ ಅತ್ಯಾಚಾರವಾಗಿದೆ. ಆಕೆ ಸಂಪೂರ್ಣವಾಗಿ ಬಟ್ಟೆ ತೊಟ್ಟಿದ್ದಳಲ್ಲ ಎಂದು ಮಾರ್ಮಿಕವಾಗಿ ಪ್ರಶ್ನೆಸಿದ ಅವರು, ಅತ್ಯಾಚಾರ ಮತ್ತು ಹಲ್ಲೆಗಳಿಗೆ ಉಡುಗೆಗಳು ಮುಖ್ಯವಲ್ಲ ಅವರವರ ಯೋಚನಾ ಧಾಟಿ ಮುಖ್ಯವಾಗುತ್ತದೆ. ಒಟ್ಟಿನಲ್ಲಿ ಭಾರತದಲ್ಲಿ ಹೆಣ್ಣಿಗೆ ಭದ್ರತೆ ಕಡಿಮೆಯಾಗುತ್ತಿದೆ. ಕಾಮುಕರಿಂದ ದೈಹಿಕೆ ಹಲ್ಲೆಗಳು ಹಾಗೂ ಶೋಷಣೆ ಹೆಚ್ಚಾಗಿದೆ ಎಂದರು.

ಸಮಾಜದಲ್ಲಿ ಪ್ರತಿಯೊಬ್ಬರೂ ವಿದ್ಯಾವಂತರಾಗಬೇಕು. ಮನೆಯಲ್ಲಿ ಬಾಲ್ಯದಿಂದಲೂ ಉತ್ತಮ ಸಂಸ್ಕಾರ, ಮಾದರಿ ನೀತಿಯನ್ನು ಪೋಷಕರು ತಿಳಿಸಬೇಕು. ಮಹಿಳೆ ಬದುಕಲು ಸೌಹಾರ್ದಯುತ ವಾತಾವರಣ ನಿರ್ಮಾಣವಾಗಬೇಕಾಗಿದೆ. ಹೆಣ್ಣನ್ನು ಕೇವಲ ಭೋಗದ ವಸ್ತುವಾಗಿ ನೋಡುವ ದೃಷ್ಟಿಕೋನ ಸರಿಯಲ್ಲ. ಸಮಾಜದಲ್ಲಿ ಹೆಣ್ಣು-ಗಂಡು ಸಾಮರಸ್ಯದಿಂದ ಬದುಕುವುದನ್ನು ಕಲಿಯಬೇಕು. ಆ ನಿಟ್ಟಿನಲ್ಲಿ ಯುವಜನಾಂಗ ಸಂಯಮ ಬೆಳೆಸಿಕೊಳ್ಳಬೇಕು ಎಂದರು.

ಪ್ರತಿದಿನ ಹೊಸ ವರ್ಷ ಬರುವುದಿಲ್ಲ ವರ್ಷದ 365 ದಿನಗಳಲ್ಲಿ ಕೇವಲ ಒಂದು ದಿನ ಸಂಭ್ರಮ ಆಚರಿಸುವಾಗ ಯುವತಿಯರು ಪಾರ್ಟಿಗೆ ಹೋಗಬೇಡಿ, ವಸ್ತು ಸಂಹಿತೆ ಉಲ್ಲಂಘಿಸಬೇಡಿ ಎನ್ನವುದು ಸರಿಯಲ್ಲ. ಬೇರೆಯವರಿಗೆ ಅತಿಯಾದ ನಿರ್ಬಂಧ ವಿಧಿಸುವ ಮುನ್ನ  ತಮ್ಮ ತಮ್ಮ ಮನಸ್ಸುಗಳನ್ನು ಪರಿವರ್ತನೆ ಮಾಡಿಕೊಳ್ಳುವತ್ತ ಪುರುಷ ಸಮಾಜ ಚಿಂತಿಸಬೇಕು. ಸಮಾಜ ಪರಿವರ್ತನೆಯಾಗಬೇಕು, ಮಹಿಳೆಯನ್ನು ಗೌರವಿಸಬೇಕು ಆಗಲೇ ಭಾರತ ಪ್ರಗತಿಪರ ದೇಶವಾಗುವುದು ಎಂದು ಆಶಿಸಿದರು.

Leave a Reply

comments

Related Articles

error: