ಪ್ರಮುಖ ಸುದ್ದಿ

ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿಯಿಂದ ಪ್ರತಿಭಟನೆ

ರಾಜ್ಯ(ಮಡಿಕೇರಿ) ಡಿ.13 : – ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರಕಾರ ಹಾಗೂ ಜಿಲ್ಲಾಡಳಿತ ತಳೆದಿರುವ ವಿಳಂಬ ಧೋರಣೆಯನ್ನು ವಿರೋಧಿಸಿ ಡಿ.14ರಂದು ಮಡಿಕೇರಿಯಲ್ಲಿ ಸಂತ್ರಸ್ತರ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಪ್ರಕೃತಿ ವಿಕೋಪ ಪರಿಹಾರ ಹೋರಾಟ ಸಮಿತಿ ಘೋಷಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ಎಂ.ಬಿ.ದೇವಯ್ಯ ಅವರು, ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದ ಕುಟುಂಬಗಳಿಗೆ ವಸತಿ ಸೌಲಭ್ಯ ಕಲ್ಪಿಸುವುದರೊಂದಿಗೆ ಇತರ ಪರಿಹಾರ ಕಾರ್ಯಕ್ರಮಗಳನ್ನೂ ರೂಪಿಸಬೇಕೆಂದು ಸಮಿತಿ ಒತ್ತಾಯಿಸುತ್ತಲೇ ಬಂದಿದ್ದು, ಈ ಸಂಬಂಧವಾಗಿ ಜಿಲ್ಲಾಡಳಿತ, ಸರಕಾರ ಹಾಗೂ ಸ್ವತಃ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಪ್ರಕೃತಿ ವಿಕೋಪ ಸಂಭವಿಸಿ ನಾಲ್ಕು ತಿಂಗಳುಗಳಾಗುತ್ತಿದ್ದರೂ, ಸರಕಾರ ಮನೆ ನಿವೇಶನಕ್ಕೆ ಜಾಗ ಗುರುತಿಸುವುದು, ಮನೆ ನಿರ್ಮಿಸಿಕೊಡುವುದನ್ನು ಬಿಟ್ಟು ಇತರ ಯಾವುದೇ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಂಡಿಲ್ಲ ಎಂದು ಆರೋಪಿಸಿದರು.

ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳ ನದಿಗಳಲ್ಲಿ ಹಾಗೂ ಜಮೀನುಗಳಲ್ಲಿ ತುಂಬಿರುವ ಹೂಳೆತ್ತುವುದು, ಸಂತ್ರಸ್ತರಾದವರ ಮನೆಗಳಿಗೆ ರಸ್ತೆ ನಿರ್ಮಿಸುವುದು, ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವ್ಯವಸ್ಥೆ ಮಾಡುವುದು ಸೇರಿದಂತೆ ಆದ್ಯತೆಯ ಕಾರ್ಯಕ್ರಮಗಳ ಬಗ್ಗೆ ಸರಕಾರ ಇಂದಿಗೂ ನಿರ್ಲಕ್ಷ್ಯ ವಹಿಸಿದೆ ಎಂದು ದೂರಿದ ಅವರು, ನದಿಗಳಲ್ಲಿ ಹೂಳು ತುಂಬಿರುವ ವಿಚಾರಕ್ಕೆ ಸರಕಾರದ ಗಮನಕ್ಕೇ ಬಂದಿಲ್ಲ ಎಂಬ ಹೇಳಿಕೆಯನ್ನು ಜಲಸಂಪನ್ಮೂಲ ಸಚಿವರು ಸದನದಲ್ಲಿ ನೀಡಿರುವುದನ್ನು ಗಮನಿಸಿದರೆ ನಾಗರಿಕ ಸಮಾಜದಲ್ಲಿ ಜವಾಬ್ದಾರಿಯುತ ಸರಕಾರಗಳು ನಡೆದುಕೊಳ್ಳುವ ರೀತಿ ಯಾವ ಮಟ್ಟದಲ್ಲಿದೆ ಎಂಬುದು ಅರಿವಾಗುತ್ತಿದೆ ಎಂದು ಟೀಕಿಸಿದರು.

ಮುಂದಿನ ಏಪ್ರಿಲ್-ಮೇ ತಿಂಗಳುಗಳಲ್ಲಿ 3-4 ಮಳೆಯಾದರೆ ಪ್ರಕೃತಿ ವಿಕೋಪ ಸಂಭವಿಸಿದ ಪ್ರದೇಶಗಳಲ್ಲಿ ಪ್ರಸಕ್ತ ಉಳಿದುಕೊಂಡಿರುವ ಗ್ರಾಮಸ್ಥರು ಗ್ರಾಮವನ್ನೇ ತೊರೆಯಬೇಕಾದ ಪರಿಸ್ಥಿತಿ ಇದೆ ಎಂದು ದೇವಯ್ಯ ಆತಂಕ ವ್ಯಕ್ತಪಡಿಸಿದರು.

ಮನೆ ನಿರ್ಮಾಣದ ಗುತ್ತಿಗೆಯನ್ನೂ ಕೇವಲ ಒಂದು ಸಂಸ್ಥೆಗೆ ನೀಡಲಾಗಿದ್ದು, ಈ ಸಂಸ್ಥೆ ತಿಂಗಳಿಗೆ 55 ಮನೆಗಳನ್ನು ನಿರ್ಮಿಸಲಿರುವುದಾಗಿ ಹೇಳಿಕೊಂಡಿದೆ. ಆದರೆ ಸರಕಾರ ಗುರುತಿಸಿರುವ ಸುಮಾರು 840 ಸಂತ್ರಸ್ತ ಕುಟುಂಬಗಳಿಗೆ ಮನೆ ನಿರ್ಮಿಸಿಕೊಡಲು ಸರಿಸುಮಾರು 8 ತಿಂಗಳುಗಳೇ ಬೇಕಾಗಲಿದೆ. ಈ ನಡುವೆ ಡಿ.30ರೊಳಗೆ ಪರಿಹಾರ ಕೇಂದ್ರದಲ್ಲಿರುವವರು ಖಾಲಿ ಮಾಡಬೇಕು ಎಂದು ಜಿಲ್ಲಾಡಳಿತ ಹೇಳಿದ್ದು, ಈ ಸಂತ್ರಸ್ತರಿಗೆ ಮಾಸಿಕ 10 ಸಾವಿರ ರೂ.ಗಳನ್ನು ನೀಡುವುದಾಗಿ ಹೇಳಿದೆ. ಆದರೆ ಅಷ್ಟು ಕುಟುಂಬಗಳಿಗೆ ಬಾಡಿಗೆ ಮನೆ ದೊರಕುವುದು ಕಷ್ಟ ಸಾಧ್ಯವಾಗಿದ್ದು, ಒಂದು ಲೆಕ್ಕದಲ್ಲಿ ಸರಕಾರವೇ ಸಂತ್ರಸ್ತರನ್ನು ಬೀದಿಗೆ ಎಸೆಯುವ ಕೆಲಸ ಮಾಡುತ್ತಿದೆ ಎಂದು ದೇವಯ್ಯ ಆರೋಪಿಸಿದರು. ಕೇವಲ ಒಂದು ಸಂಸ್ಥೆಗೆ ನೀಡಿರುವ ಮನೆ ನಿರ್ಮಾಣದ ಗುತ್ತಿಗೆಯನ್ನು ಇನ್ನೂ 3-4 ಸಂಸ್ಥೆಗಳಿಗೆ ಅಥವಾ ಗುತ್ತಿಗೆದಾರರಿಗೆ ನೀಡುವ ಮೂಲಕ ಶೀಘ್ರ 840 ಮನೆಗಳ ನಿರ್ಮಾಣಕ್ಕೆ ಮುಂದಾಗಬೇಕೆಂದು ಅವರು ಒತ್ತಾಯಿಸಿದರು.

ಪ್ರಕೃತಿ ವಿಕೋಪದಲ್ಲಿ ಸಂತ್ರಸ್ತರಾದವರ ಕಣ್ಣೀರು ಒರೆಸುವ ಕೆಲಸ ಸರಕಾರದಿಂದ ಸಮರೋಪಾದಿಯಲ್ಲಿ ನಡೆಯಬೇಕಾಗಿತ್ತು. ಆದರೆ ಅದು ಆಗುತ್ತಿಲ್ಲ. ಈ ಕುರಿತು ಸದನದಲ್ಲಿ ಗಂಭೀರವಾದ ಚರ್ಚೆಯಾಗಬೇಕಿತ್ತು. ಕೊಡಗಿನ ಜನಪ್ರತಿನಿಧಿಗಳು ಅವರ ಕೆಲಸ ಮಾಡುತ್ತಾರೋ ಬಿಡುತ್ತಾರೋ ಗೊತ್ತಿಲ್ಲ, ಆದರೆ ಸಂತ್ರಸ್ತರಾಗಿರುವ ನಾವುಗಳು ನಮ್ಮ ಬದುಕು ಕಟ್ಟಿಕೊಳ್ಳುವುದಕ್ಕೆ ಸರಕಾರದ ಗಮನಸೆಳೆಯುವುದು ಅನಿವಾರ್ಯವಾಗಿದೆ. ಈ ಹಿನ್ನೆಲೆಯಲ್ಲಿ ಡಿ.14ರಂದು ಮಡಿಕೇರಿಯಲ್ಲಿ ಸಂತ್ರಸ್ತರು ಬೃಹತ್ ಧರಣಿ ಸತ್ಯಾಗ್ರಹ ನಡೆಸುತ್ತಿರುವುದಾಗಿ ಹೇಳಿದರು.

ಸಮಿತಿಯ ಗೌರವಾಧ್ಯಕ್ಷ ರವಿಕುಶಾಲಪ್ಪ ಅವರು ಮಾತನಾಡಿ,   ಪ್ರಸಕ್ತ ಎರಡು ಮುಕ್ಕಾಲು ಸೆಂಟ್ ಜಾಗದಲ್ಲಿ ಮನೆ ನಿರ್ಮಿಸಿಕೊಡುವ ಸರಕಾರದ ಈಗಿನ ನಿರ್ಧಾರವನ್ನು ಮರುಪರಿಶೀಲಿಸುವ ಅಗತ್ಯವಿದೆ. ನದಿಗಳಲ್ಲಿನ ಹೂಳು ಎತ್ತದಲ್ಲಿ ಮೇ-ಜೂನ್ ತಿಂಗಳಲ್ಲಿ ಸಂತ್ರಸ್ತರು ಊರು ಖಾಲಿ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಲಿದ್ದು,  ಸರಕಾರ ನಡೆಸುವಷ್ಟು ಸಾಮಥ್ರ್ಯ ಇರುವ ಸಚಿವರು ತಮ್ಮ ಇಲಾಖೆಗೆ ಸಂಬಂಧಿಸಿದ ವಿಷಯವನ್ನೇ ಗಂಭೀರವಾಗಿ ಪರಿಗಣಿಸದಿರುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಆರೋಪಿಸಿದರು. ಅಧಿಕಾರಿಗಳು ಮಾಹಿತಿ ನೀಡಿಲ್ಲವೆಂದಾದಲ್ಲಿ ಸಚಿವರೇ ಕೊಡಗಿಗೆ ಆಗಮಿಸಿ ಇಲ್ಲಿನ ಪರಿಸ್ಥಿತಿಯ ಅವಲೋಕನ ಮಾಡಬೇಕಿತ್ತು ಎಂದು ಹೇಳಿದರು.

ಪರಿಹಾರ ಕೇಂದ್ರವನ್ನು ತೆರವು ಮಾಡುವಂತೆ ಸಂತ್ರಸ್ತರಿಗೆ ಜಿಲ್ಲಾಡಳಿತ ಹೇಳಿದೆ. ಆದರೆ ಇಂತಿಷ್ಟು ದಿನದಲ್ಲಿ ಮನೆ ನಿರ್ಮಿಸಿಕೊಡುವುದಾಗಿ ಜಿಲ್ಲಾಡಳಿತವಾಗಲಿ, ಸರಕಾರವಾಗಲಿ ಸಂತ್ರಸ್ತರಿಗೆ ಭರವಸೆ ನೀಡಿಲ್ಲ. ಸಂತ್ರಸ್ತರಿಗೆ ಮಾಸಿಕ 10 ಸಾವಿರ ರೂ.ಗಳನ್ನು ನೀಡಿದಲ್ಲಿ ಅವರುಗಳು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.

ಸಮಿತಿಯ ಪ್ರಮುಖ ಬಾಲಚಂದ್ರ ಕಳಗಿ ಮಾತನಾಡಿ ಸಂಪಾಜೆ ಹೋಬಳಿಯಲ್ಲಿ ಮನೆ ಕಳೆದುಕೊಂಡಿರುವ ಸುಮಾರು 40-50 ಕುಟುಂಬಗಳಿಗೆ ಇದುವರೆಗೆ ಸರಕಾರದ ವತಿಯಿಂದ 3800ರೂ.ಗಳ ಪರಿಹಾರ ಹೊರತಾಗಿ ಇತರ ಯಾವುದೇ ಸೌಲಭ್ಯಗಳು ದೊರಕಿಲ್ಲ. ಪ್ರಾಥಮಿಕವಾಗಿ ಸಿದ್ಧಪಡಿಸಿದ ಪಟ್ಟಿಯಲ್ಲಿ ಹೆಸರು ಇದ್ದ ಈ ಕುಟುಂಬಗಳನ್ನು ಜಾಗಕ್ಕೆ ಸಂಬಂಧಿಸಿದ ದಾಖಲೆಗಳಿಲ್ಲ ಎಂಬ ಕಾರಣಕ್ಕೆ ಎರಡನೇ ಪಟ್ಟಿಯಲ್ಲಿ ಕೈಬಿಡಲಾಗಿದೆ. ಆದರೆ ಆ ಕುಟುಂಬಗಳು ಹಲವಾರು ವರ್ಷಗಳಿಂದ ಪಂಚಾಯಿತಿಗಳಿಗೆ ಕಂದಾಯ ಪಾವತಿಸಿಕೊಂಡು ಬಂದಿದ್ದು, ಆ ಪಂಚಾಯಿತಿಗಳಲ್ಲೇ ದಾಖಲೆಗಳು ಲಭ್ಯವಿದೆ. ಆದರೂ ಸಂತ್ರಸ್ತರನ್ನು ಬೀದಿ ಪಾಲು ಮಾಡುವ ಕಾರ್ಯ ಕಂದಾಯ ಇಲಾಖೆಯಿಂದ ನಡೆಯುತ್ತಿದೆ ಎಂದು ಆರೋಪಿಸಿದರು.

ಸಂಪಾಜೆ ಭಾಗದಲ್ಲಿರುವ ಸಂತ್ರಸ್ತರಿಗೆ ದೂರದ ಮಡಿಕೇರಿ, ಗಾಳಿಬೀಡು, ಮದೆನಾಡು ಭಾಗದಲ್ಲಿ ಮನೆ ನಿರ್ಮಿಸಿಕೊಟ್ಟಲ್ಲಿ ಅವರ ಬದುಕು ಅತಂತ್ರವಾಗಲಿದೆ. ಅದರ ಬದಲು ಸಂಪಾಜೆ ಪಂಚಾಯಿತಿ ವ್ಯಾಪ್ತಿಯಲ್ಲೇ ಇರುವ ಸರಕಾರಿ ಜಾಗವನ್ನು ಗುರುತಿಸಿ ಅಲ್ಲಿ ಅವರಿಗೆ ಮನೆ ನಿರ್ಮಿಸಿಕೊಡುವಂತಾಗಬೇಕು ಎಂದು ಆಗ್ರಹಿಸಿದರು.

ಇತ್ತೀಚಿನ ದಿನಗಳಲ್ಲಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ನಡುವೆ ಸಮನ್ವಯತೆಯ ಕೊರತೆ ಎದ್ದು ಕಾಣುತ್ತಿದ್ದು, ಅಧಿಕಾರಿಗಳು ತಾವು ಮಾತ್ರ ಎಲ್ಲಾ ಪರಿಹಾರ ಕಾರ್ಯಗಳನ್ನು ಮಾಡಬಹುದೆಂಬ ಭ್ರಮೆಯಲ್ಲಿದ್ದಾರೆ. ಆದರೆ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದಿದ್ದಲ್ಲಿ ಅವರಿಗೆ ಸಮಸ್ಯೆಯಾಗಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಶಾಸಕರುಗಳು, ಜಿಲ್ಲಾಧಿಕಾರಿಗಳು, ಸಂತ್ರಸ್ತರ ಸಮಿತಿಯ ಪದಾಧಿಕಾರಿಗಳು ಒಂದೇ ವೇದಿಕೆಯಲ್ಲಿ ಕುಳಿತು ಚರ್ಚಿಸಿದಲ್ಲಿ ಪರಿಹಾರ ಕಾಮಗಾರಿಗಳ ಕುರಿತಾದ ಸಮಸ್ಯೆಗಳು ಇತ್ಯರ್ಥವಾಗಲಿವೆ. ಇಲ್ಲವಾದಲ್ಲಿ ಮತ್ತಷ್ಟು ಗೊಂದಲಗಳು ಸೃಷ್ಟಿಯಾಗಲಿವೆ ಎಂದು ಬಾಲಚಂದ್ರ ಕಳಗಿ ಅಭಿಪ್ರಾಯಪಟ್ಟರು.

ಡಿ.14 ಪ್ರತಿಭಟನೆಯ ಬಳಿಕವೂ ಸಂತ್ರಸ್ತರ ಪರಿಹಾರ ಕಾರ್ಯಗಳು ಚುರುಕುಗೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಂತ್ರಸ್ತರೆಲ್ಲರೂ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಿರುವುದಾಗಿ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಕಾರ್ಯದರ್ಶಿ ಕುಂಬುಗೌಡನ ಪ್ರಸನ್ನ ಹಾಗೂ  ಅರವಿಂದ್ ಸುರೇಂದ್ರ ಉಪಸ್ಥಿತರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: