ಪ್ರಮುಖ ಸುದ್ದಿ

ಭಾರತೀಯ ಸೇನೆಯ ಹೆಮ್ಮೆಯ ಲೆಫ್ಟಿನೆಂಟ್ ಜನರಲ್ ಕೊಡಗಿನ ಬಿ.ಸಿ.ನಂದ ನಿಧನ

ರಾಜ್ಯ(ಮಡಿಕೇರಿ) ಡಿ.13 :- ಭಾರತೀಯ ಸೇನೆಯ ಹೆಮ್ಮೆಯ ಲೆಫ್ಟಿನೆಂಟ್ ಜನರಲ್ ಕೊಡಗಿನ  ಬಿ.ಸಿ.ನಂದ (87) ಅವರು ನಿಧನ ಹೊಂದಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಮೈಸೂರು ಆಸ್ಪತ್ರೆಗೆ ಕರೆದೊಯ್ಯುವ ಪ್ರಯತ್ನದಲ್ಲಿದ್ದಾಗಲೇ ಬುಧವಾರ ಮಧ್ಯಾಹ್ನ ಇಹಲೋಕ ತ್ಯಜಿಸಿದ್ದಾರೆ.

ಲೆ.ಜ.ಬಿ.ಸಿ.ನಂದ ಅವರ ನಿಧನಕ್ಕೆ ಸೇನಾಧಿಕಾರಿಗಳು, ಮಾಜಿ ಸೈನಿಕರು ಹಾಗೂ ಜನಪ್ರತಿನಿಧಿಗಳು ಸಂತಾಪ ಸೂಚಿಸಿದ್ದಾರೆ. ಮೃತರ ಅಂತ್ಯಕ್ರಿಯೆ ಅಬ್ಬಿಫಾಲ್ಸ್ ರಸ್ತೆಯ ತಮ್ಮ ಸ್ವ-ಗೃಹದ ತೋಟದಲ್ಲಿ ಗುರುವಾರ ನಡೆಯಲಿದೆ. ಸೇನಾ ತುಕುಡಿ, ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಅಂತಿಮ ಸಂಸ್ಕಾರದ ಸಂದರ್ಭ ಗೌರವ ನಮನ ಸಲ್ಲಿಸಲಿದ್ದಾರೆ.

ಬಿ.ಸಿ.ನಂದ ಅವರು ಪತ್ನಿ ಮೇರಿಯಂಡ ಲೀಲಾ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ.

ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ ಅವರ ಸೇನಾ ಕ್ಷೇತ್ರದ ಹೆಜ್ಜೆ ಗುರುತು

ಸರಿ ಸುಮಾರು ನಾಲ್ಕು ದಶಕಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ‘ಲೆಫ್ಟಿನೆಂಟ್ ಜನರಲ್’ ಉನ್ನತ ಹುದ್ದೆಯನ್ನು ಅಲಂಕರಿಸಿದ ಬಿ.ಸಿ.ನಂದ ಭಾರತೀಯ ಭೂಸೇನೆಯ ಉತ್ತರ ವಲಯದ ಮುಖ್ಯಸ್ಥರಾಗಿ ಕರ್ತವ್ಯ ನಿರ್ವಹಿಸಿದವರು.

ತಮ್ಮ ಅದ್ವೀತಿಯ ಸೇವಾ ಅವಧಿಯಲ್ಲಿ ಪರಮ ವಿಶಿಷ್ಟ ಸೇವಾ ಮೆಡಲ್ ಮತ್ತು ಅತೀ ವಿಶಿಷ್ಟ ಸೇವಾ ಮೆಡಲ್ ಪುರಸ್ಕೃತರಾದವರು. ನಿವೃತ್ತಿಯ ನಂತರ ಕೊಡಗು ವನ್ಯ ಜೀವಿ ಸಂಸ್ಥೆಯ ಅಧ್ಯಕ್ಷರಾಗಿ ಹಾಗೂ ಮರ್ಕರ ಡೌನ್ಸ್ ಗಾಲ್ಫ್ ಕ್ಲಬ್‍ನ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದವರು.

ಡೆಹರಾಡೂನ್‍ನಲ್ಲಿ ಬಿ.ಸಿ. ನಂದ ಅವರು ಶಿಕ್ಷಣ ಪಡೆಯುತ್ತಿರುವ ಹಂತದಲ್ಲಿ ಇವರ ಮನೆಯ ಸಮೀಪವೇ ಇದ್ದ ‘ಇಂಡಿಯನ್ ಮಿಲಿಟರಿ ಅಕಾಡೆಮಿ’ ಮತ್ತು ಅಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಪಾಯಿಗಳು ಹಾಗೂ ತಮ್ಮ ಸಮೀಪದ ಬಂಧುವೇ ಆಗಿದ್ದ ಜನರಲ್ ತಿಮ್ಮಯ್ಯ ಅವರ ಸಮವಸ್ತ್ರದೊಂದಿಗಿನ ಶಿಸ್ತುಬದ್ಧ ಜೀವನ ಇವರನ್ನು ಬಹುವಾಗಿ ಆಕರ್ಷಿಸಿತು. ತಾನು ಮುಂದೊಮ್ಮೆ ಈ ಸಮವಸ್ತ್ರ ಧರಿಸಿ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆನ್ನುವ ಪ್ರೇರಣೆಯನ್ನು ನೀಡಿತು.

ರಾಜ್ಯೋತ್ಸವ ಪ್ರಶಸ್ತಿ ಪಡೆದ ಪ್ರಥಮ ಸೇನಾಧಿಕಾರಿ

ಸೇನಾಧಿಕಾರಿಯಾಗಿ ಸಾಧನೆಯ ಹೆಜ್ಜೆ ಗುರುತುಗಳನ್ನು ಅತ್ಯಂತ ಸ್ಪಷ್ಟವಾಗಿ ಮೂಡಿಸಿರುವ ಬಿ.ಸಿ.ನಂದ ಅವರಿಗೆ ಕರ್ನಾಟಕ ರಾಜ್ಯ ಸರ್ಕಾರ ‘ಕರ್ನಾಟಕ ರಾಜ್ಯೋತ್ಸವ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಓರ್ವ ಸೇನಾಧಿಕಾರಿಯಾಗಿ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾದ ಪ್ರಥಮ ಸೇನಾಧಿಕಾರಿ ಬಿ.ಸಿ.ನಂದ ಅವರು ಎನ್ನುವುದು ಹೆಮ್ಮೆಯ ವಿಚಾರ.

ಭಾರತೀಯ ಭೂಸೇನೆಯಲ್ಲಿ ಇಂದಿಗೂ ತಮ್ಮ ಹೆಸರು ಮತ್ತು ಪ್ರಭಾವವನ್ನು ಉಳಿಸಿಕೊಂಡಿದ್ದ ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ ಅವರು ಮಹರ್ ರೆಜಿಮೆಂಟ್‍ನಲ್ಲಿ ಸೇವೆ ಸಲ್ಲಿಸಿದವರು. ಎಲ್ಲಾ ಸಿಪಾಯಿಗಳು ಹಾಗೂ ಸೇನಾಧಿಕಾರಿಗಳು ಅತ್ಯಂತ ಪ್ರೀತಿ, ಗೌರವಗಳಿಂದ ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ ಅವರನ್ನು ಕಾಣುತ್ತಿರುವುದು ಕೊಡಗಿನ ಸೇನಾಧಿಕಾರಿಗಳ ಬಗ್ಗೆ ಮತ್ತು ಕೊಡಗಿನ ಸೇನಾ ಪರಂಪರೆಗೆ ಸಂದ ಬಹುದೊಡ್ಡ ಗೌರವವಾಗಿದೆ.

ಅರಣ್ಯಾಧಿಕಾರಿಯ ಪುತ್ರರಾಗಿ ಜನಿಸಿದರು ಬಿ.ಸಿ.ನಂದ

ಕೊಡಗಿನ ಕೇಂದ್ರ ಸ್ಥಾನವಾದ ಮಡಿಕೇರಿಯಲ್ಲಿ 1931 ರ ಮೇ 12 ರಂದು ಬಿದ್ದಂಡ ಚೆಂಗಪ್ಪ ಮತ್ತು ಬೊಳ್ಳವ್ವ ದಂಪತಿಗಳ ಪುತ್ರನಾಗಿ ಬಿ.ಸಿ.ನಂದ ಜನಿಸಿದರು. ಇವರ ತಂದೆ ಚೆಂಗಪ್ಪ ಅವರು ಆಗಿನ ಅತ್ಯಂತ ಪ್ರಸಿದ್ಧ ಅರಣ್ಯಾಧಿಕಾರಿಯಾಗಿ ಹೆಸರು ಗಳಿಸಿದ್ದವರಾದರೆ, ತಾಯಿ ಬೊಳ್ಳವ್ವ ಅವರು ಸ್ವತಂತ್ರ ಭಾರತದ ಪ್ರಪ್ರಥಮ ಮಹಾದಂಡ ನಾಯಕ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಅವರ ಸಹೋದರಿ ಎನ್ನುವುದು ವಿಶೇಷ.

ಬಿದ್ದಂಡ ಚಂಗಪ್ಪ ನಂದ ಅವರು ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮಡಿಕೆÉೀರಿಯ ಸೈಂಟ್ ಜೋಸೆಫ್ ಕಾನ್ವೆಂಟ್‍ನಲ್ಲಿ ಪಡೆದರು. ಉನ್ನತ ಶಿಕ್ಷಣವನ್ನು ಮದ್ರಾಸಿನಲ್ಲಿ, ಬಳಿಕ ಡೆಹ್ರಾಡೂನ್‍ನಲ್ಲಿ ಪಡೆದುಕೊಂಡು 1949 ರಲ್ಲಿ ಐಎಂಎಗೆ ಸೇರ್ಪಡೆಗೊಂಡರು. ಎರಡು ವರ್ಷಗಳ ಬಳಿಕ 1951ರ ಜ.10 ರಂದು ಭಾರತೀಯ ಸೇನೆಯ ಭಾಗವಾದರು. ಬಾಲ್ಯದ ಕೆಲವು ಅವಧಿಯನ್ನು ಹೊರತು ಪಡಿಸಿದರೆ ಬಿ.ಸಿ.ನಂದ ಅವರು ಕೊಡಗಿನಲ್ಲ್ಲಿದ್ದುದು ಕೇವಲ ಒಂದು ವರ್ಷವಷ್ಟೆ. ನಿವೃತ್ತಿಯಾದ ನಂತರ ಇವರು ಮಡಿಕೇರಿ ಸಮೀಪದ ಅಬ್ಬಿಫಾಲ್ಸ್ ರಸ್ತೆ ಬದಿಯ ನಿಸರ್ಗ ರಮಣೀಯ ತಾಣದ ಮನೆಯಲ್ಲಿ ನೆಮ್ಮದಿಯ ಬದುಕನ್ನು ನಡೆಸುತ್ತಿದ್ದರು.

ಅರಣ್ಯ ಉಳಿದರೆ ದೇಶದ ಸಂಪತ್ತು ಉಳಿಯುತ್ತದೆ

ಪರಿಸರದ ಬಗ್ಗೆಯೂ ಕಾಳಜಿ ವಹಿಸಿದ್ದ ಬಿ.ಸಿ.ನಂದ ಅವರು ಅರಣ್ಯ ಉಳಿದರೆ ಮಾತ್ರ ಈ ದೇಶ ಮತ್ತು ದೇಶದ ಸಂಪತ್ತು ಉಳಿಯಲು ಸಾಧ್ಯವೆಂದು ಅಭಿಪ್ರಾಯಪಡುತ್ತಿದ್ದರು.

ಇಳಿ ವಯಸ್ಸಿನಲ್ಲೂ ದೇಶಾಭಿಮಾನದ ಮಾತುಗಳನ್ನಾಡುತ್ತಿದ್ದರು

ಸ್ವತಂತ್ರ ಭಾರತದ ಉದ್ದೇಶ ಸಾಕಾರಗೊಳ್ಳಬೇಕಾದರೆ ಪ್ರತಿಯೊಬ್ಬರು ದೇಶಾಭಿಮಾನವನ್ನು ಮೈಗೂಡಿಸಿಕೊಳ್ಳಬೇಕು ಮತ್ತು ದೇಶದ ಭವಿಷ್ಯದ ದೃಷ್ಟಿಯಿಂದ ನೂತನ ಚಿಂತನೆಗಳನ್ನು ಯೋಜನೆಗಳನ್ನಾಗಿ ರೂಪಿಸಿ ಅಭಿವೃದ್ಧಿ ಪಡಿಸಬೇಕು. ಕಾನೂನು ಸುವ್ಯವಸ್ಥೆಗೆ ಹೆಚ್ಚಿನ ಒತ್ತು ನೀಡುವ ಮೂಲಕ ಸುರಕ್ಷತಾ ವ್ಯವಸ್ಥೆಗಳನ್ನು ಆಧುನೀಕರಣಗೊಳಿಸಬೇಕೆಂದು ಲೆಫ್ಟಿನೆಂಟ್ ಜನರಲ್ ಬಿ.ಸಿ.ನಂದ ಅವರು ದೇಶಾಭಿಮಾನ ಮೆರೆದಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: