ಮೈಸೂರು

ಕಲೆ, ಸಂಸ್ಕೃತಿಯನ್ನು ಕಲಿತ ಮಕ್ಕಳು ಹೆಚ್ಚು ಹೆಚ್ಚು ಬುದ್ಧಿವಂತರಾಗುತ್ತಾರೆ : ಡಾ.ಶೀಲಾ ಶ್ರೀಧರ್

ಮೈಸೂರು,ಡಿ.13:-ಕಲೆ, ಸಂಸ್ಕೃತಿಯನ್ನು ಕಲಿತ ಮಕ್ಕಳು ಹೆಚ್ಚು ಹೆಚ್ಚು ಬುದ್ಧಿವಂತರಾಗುತ್ತಾರೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಲಲಿತಕಲಾ ಕಾಲೇಜಿನ ನೃತ್ಯ ವಿಭಾಗದ ಮುಖ್ಯಸ್ಥರಾದ ಡಾ.ಶೀಲಾ ಶ್ರೀಧರ್ ತಿಳಿಸಿದರು.

ಅವರಿಂದು ಜೆ.ಪಿ.ನಗರದಲ್ಲಿರುವ ಜೆಎಸ್ ಎಸ್ ಪಬ್ಲಿಕ್ ಶಾಲೆಯಲ್ಲಿ ‘ಮಾನಸಧಾರಾ ಉತ್ಸವ’ ಅಂತರ್ ಪ್ರೌಢಶಾಲಾ ಶಾಸ್ತ್ರೀಯ ನೃತ್ಯ ಹಾಗೂ ಚರ್ಚಾ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಕೃತಿ, ಸಂಸ್ಕಾರವನ್ನು ಬೆಳೆಸುವಲ್ಲಿ ಶಿಕ್ಷಣ ಪ್ರಮುಖ ಪಾತ್ರವನ್ನು ವಹಿಸುತ್ತದೆ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ. ಯಾವುದೇ ಇಂಗ್ಲಿಷ್, ಸೈನ್ಸ್ ಕೇಳಿ ಮಕ್ಕಳು ಬೆಳೆಯಲ್ಲ. ಶೇಕ್ಸ್ ಪಿಯರ್ ನ ಟ್ರಾಜಿಡಿ ಕಥೆಗಳನ್ನು ಕೇಳಿ ಬೆಳೆಯಲ್ಲ. ಹುಟ್ಟಿನಿಂದ ಜೀವನ ಪ್ರಾರಂಭವಾಗುವವರೆಗೂ ರಾಮಾಯಣ, ಮಹಾಭಾರತ, ಪುರಾಣ, ಭಾಗವತ ಕಥೆಗಳನ್ನು ಕೇಳಿ ಬೆಳೆಯುತ್ತವೆ. ಇಂತಹ ಕಥೆಗಳೇ ಮಕ್ಕಳಲ್ಲಿ ಸಂಸ್ಕೃತಿ, ಸಂಸ್ಕಾರ ಬೆಳೆಸುತ್ತವೆ ಎಂದರು. ನಾಟ್ಯ ಎನ್ನುವುದು ಕೇವಲ ಕೈಕಾಲು ಆಡಿಸುವುದಲ್ಲ. ಅಂಗ, ಪ್ರತ್ಯಾಂಗ, ಉಪಾಂಗಗಳ ಸಹಾಯವಿಲ್ಲದೇ, ಏನನ್ನೂ ಪ್ರದರ್ಶಿಸಲು ಸಾಧ್ಯವಿಲ್ಲ. ಮಕ್ಕಳು ಪ್ರೌಢಾವಸ್ಥೆಗೆ ಬಂದಾಗ ಕಲಿಕೆಯ ಮಹತ್ವವನ್ನು ತಿಳಿಯಲು ಆರಂಭಿಸುತ್ತವೆ. ಸ್ಪರ್ಧೆಯಲ್ಲಿ ಬಹುಮಾನ ಬರುವುದಕ್ಕಿಂತ ನಿಮ್ಮಲ್ಲಿರುವ ಪ್ರತಿಭೆಯನ್ನು ಹೊರತರುವುದು ಮುಖ್ಯ. ಭಾಗವಹಿಸುವಿಕೆ ಮುಖ್ಯ ಎಂದು ತಿಳಿಸಿದರು. ಕಲೆ, ಸಂಸ್ಕೃತಿ ಮಕ್ಕಳನ್ನು ಹೆಚ್ಚು ಹೆಚ್ಚು ಬುದ್ಧಿವಂತರನ್ನಾಗಿಸುತ್ತದೆ. ದೇಹವನ್ನು ವ್ಯಾಯಾಮಗೊಳಿಸಿ, ಮನಸ್ಸನ್ನು ಉಲ್ಲಾಸಗೊಳಿಸಿ ಆತ್ಮವಿಶ್ವಾಸ ಬೆಳವಣಿಗೆಗೆ, ಬುದ್ಧಿಯ ಬೆಳವಣಿಗೆಗೆ ಸಹಕಾರಿಯಾಗಿ ಚೇತೋಹಾರಿಯಾಗಿ ಶಕ್ತಿ ತುಂಬುತ್ತಾ ಹೋಗುತ್ತದೆ. ಇಂತಹ ಶಕ್ತಿಪೂರ್ಣವಾದ, ಚೈತನ್ಯಪೂರ್ಣವಾದ, ಆಧ್ಯಾತ್ಮಿಕವಾದ, ಆದಿ ಭೌತಿಕ, ಆದಿ ದೈವಿಕ, ಆದಿ ಆಧ್ಯಾತ್ಮಿಕವಾಗಿ ನಮಗೆ ಶಕ್ತಿ ತುಂಬುವಂತಹ ಇಂತಹ ವಿದ್ಯೆಯನ್ನು ಎಲ್ಲ ಮಕ್ಕಳೂ ಕಲಿಯಬೇಕು. ಭಾರತೀಯ ಸಂಸ್ಕೃತಿಯನ್ನು ಬೆಳೆಸುವ ಜವಾಬ್ದಾರಿ ಪ್ರತಿಯೊಂದು ಮಕ್ಕಳಲ್ಲಿದ್ದು, ಮುಂದಿನ ಜನಾಂಗಕ್ಕೆ ದಾರಿ ದೀಪವಾಗಬೇಕು ಎಂದು ತಿಳಿಸಿದರು.

ಜೆಎಸ್ ಎಸ್ ಮಹಾವಿದ್ಯಾಪೀಠದ ಸಾಮಾನ್ಯ ಶಿಕ್ಷಣದ ಉಪನಿರ್ದೇಶಕ ಹೆಚ್.ವಿ.ಶೇಷಗಿರಿರಾವ್ ಮಾತನಾಡಿ  ಕಲೆ ಮನುಷ್ಯನಿಗೆ ಬಹಳ ಮುಖ್ಯ. ಕಲೆಯಿಲ್ಲದಿದ್ದರೆ ಜೀವನ ರಸಹೀನವಾಗುತ್ತದೆ. ಹೂವಿನಲ್ಲಿರತಕ್ಕ ಸುಮಧುರ ವಾಸನೆ ಇಲ್ಲದ ಹಾಗೇ ಕಲೆಯಿಲ್ಲದಿದ್ದರೆ ಜೀವನ ವ್ಯರ್ಥ. ಸಂಗೀತ, ನಾಟ್ಯ ಹೀಗೆ ಬೇರೆ ಬೇರೆ ಪ್ರಕಾರಗಳು ಕಲೆಯಲ್ಲಿವೆ. ನಾಟ್ಯದಿಂದಲೇ ನಟನೆ, ನಟನೆಯಿಂದಲೇ ನಾಟಕ. ಸುಸಂಸ್ಕೃತವಾಗಿ ಉಳಿದುಬಂದ ನಾಟ್ಯ ಪದ್ಧತಿ ಭರತನಾಟ್ಯ ಎಂದು ತಿಳಿಸಿದರು. ಭರತನಾಟ್ಯದಲ್ಲಿ ಶಾಸ್ತ್ರ ಬದ್ಧವಾಗಿ ಹೆಜ್ಜೆ ಹಾಕಬೇಕು. ಮುದ್ರೆಯೂ ಸರಿ ಇರಬೇಕು ಎಂದರು. ಮನುಷ್ಯನಲ್ಲಿ ಕಾಣಿಸಿಕೊಳ್ಳುವ ಒತ್ತಡಗಳು ಕಲೆಗಳಿಂದ ಮಾಯವಾಗುತ್ತವೆ. ಕಲೆಗಳಿಗೆ ಸಮಯ ನೀಡಲು ನಮಗೆ ಪುರುಸೊತ್ತಿಲ್ಲ. ಅದರಿಂದ ಆರೋಗ್ಯ ಕೆಡುತ್ತಿದೆ. ನಾಟ್ಯದಿಂದ ವ್ಯಾಯಾಮ ಸಿಗುತ್ತದೆ. ವ್ಯಾಯಾಮವಿಲ್ಲದ ಮನುಷ್ಯನಿಗೆ ರೋಗಗಳು ಬರುತ್ತವೆ. ಕಲೆಯಿಂದ ಆರೋಗ್ಯ, ಮನಸ್ಸು ಎರಡೂ ಪ್ರಫುಲ್ಲವಾಗಿರುತ್ತದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಎಸ್.ಎಲ್.ನಾಗೇಂದ್ರ, ಕಾರ್ಯಕ್ರಮ ಸಂಯೋಜಕಿ ಶ್ರೀಲಕ್ಷ್ಮಿ ಮತ್ತಿತರರು ಉಪಸ್ಥಿತರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: