ಮೈಸೂರು

ಸ್ವತಂತ್ರ ಕರ್ನಾಟಕ ದೇಶಕ್ಕಾಗಿ ಸಾಮಾಜಿಕ ನ್ಯಾಯ ರಕ್ಷಣಾ ವೇದಿಕೆ ಆಗ್ರಹ

ಕಾವೇರಿ, ಕೃಷ್ಣ, ತುಂಗಭದ್ರಾ, ಮಹದಾಯಿ ನದಿ ನೀರು ಹಂಚಿಕೆಯಲ್ಲಿ ಕೇಂದ್ರ ಸರ್ಕಾರ ಶಾಶ್ವತ ಪರಿಹಾರ ನೀಡದೆ ಪಕ್ಷಪಾತವೆಸಗಿದೆ. ಚುನಾಯಿತ ಪ್ರತಿನಿಧಿಗಳ ತಾತ್ಸಾರ ಹಾಗೂ ಸಮನ್ವಯ ಕೊರತೆಯಿಂದಾಗಿ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಲೇ ಇದೆ. ಆದ್ದರಿಂದ ಕರ್ನಾಟಕವು ಭಾರತ ಒಕ್ಕೂಟದಿಂದ ಹೊರಬಂದು ಪ್ರತ್ಯೇಕ ರಾಷ್ಟ್ರವಾದಾಗಲೇ ನ್ಯಾಯ ಲಭಿಸುವುದು ಎಂದು ಕರ್ನಾಟಕ ಸಾಮಾಜಿಕ ನ್ಯಾಯ ರಕ್ಷಣಾ ವೇದಿಕೆಯ ಜಯಶೀಲ ಅವರು ಆಗ್ರಹಿಸಿದ್ದಾರೆ.

ನಗರದ ಪ್ರತಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಗೋವಾದಲ್ಲಿ ಯಾವುದೇ ನೀರಾವರಿ ಯೋಜನೆಗಳು ಇಲ್ಲದೆ ಮಹದಾಯಿ ನದಿ ನೀರು ವ್ಯರ್ಥವಾಗಿ ಸಮುದ್ರ ಸೇರುತ್ತಿದೆ. ಕರ್ನಾಟಕ ಕುಡಿಯುವ ಬಳಕೆಗಾಗಿ ಆಗ್ರಹಿಸಿ ಗದಗ ಭಾಗದ ಜನ ಕಳೆದೊಂದು ವರ್ಷದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕಾವೇರಿ ನೀರಿಗಾಗಿ ಆಗ್ರಹಿಸಿ ಹಳೇ ಮೈಸೂರು ಭಾಗದಲ್ಲಿ ನಡೆಯುತ್ತಿರುವ ಪ್ರತಿಭಟನೆಗಳಿಗೆ ಕೇಂದ್ರ ಸರ್ಕಾರ ತಟಸ್ಥ ನೀತಿ ತೋರುತ್ತಿದೆ. ನೀರಿನ ಸಮಸ್ಯೆಗಳನ್ನು ಬಗೆಹರಿಸುವ ಬದಲು ಕೇಂದ್ರವು ಇಬ್ಬಗೆಯ ನೀತಿ, ನಿರ್ಲಕ್ಷ ಧೋರಣೆ ತೋರಿ ಪರಿಸ್ಥಿತಿಯನ್ನು ಮತ್ತಷ್ಟು ಉಲ್ಬಣಗೊಳಿಸುತ್ತಿದೆ. ರಾಜ್ಯಕ್ಕೆ ನಿರಂತರವಾಗಿ ಆನ್ಯಾಯವಾಗುತ್ತಿದ್ದು  ಗದಗ-ಮಂಡ್ಯ ಭಾರತ ರಾಷ್ಟ್ರದಲ್ಲಿಯೇ ಇವೆಯೇ? ಎನ್ನುವ ಪ್ರಶ್ನೆ ಮೂಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ತಮಿಳುನಾಡು ಸರ್ಕಾರವು ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಕಾಮಗಾರಿಗಳನ್ನು ನಡೆಸಲು ಪ್ರತಿರೋಧ ವ್ಯಕ್ತಪಡಿಸಿ ರಾಜ್ಯದ ಪ್ರಗತಿಗೆ ಕಂಟಕವಾಗುತ್ತಿದೆ ಎಂದು ಆರೋಪಿಸಿದರು.

ನ್ಯಾಯಾಲಯಕ್ಕೆ ರಾಜ್ಯದ ವಾಸ್ತವಾಂಶ ನೀಡುವಲ್ಲಿ ಸ್ಥಳೀಯ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ. ಇದರ ಪ್ರತಿಫಲವಾಗಿ ರೈತರು ಸಂಕಷ್ಟಗೊಳಗಾಗಿದ್ದಾರೆ, ಕೇಂದ್ರವು ಕೃಷಿ, ರೈಲ್ವೆ ಇತರೇ ಅಭಿವೃದ್ಧಿ ಯೋಜನೆಗಳಿಗೆ ಆದ್ಯತೆ ನೀಡುತ್ತಿಲ್ಲ, ಗಡಿ ಸಮಸ್ಯೆ ಇನ್ನೂ ಜಟಿಲವಾಗುತ್ತಿದ್ದು ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲದಂತಹ ವಾತಾವರಣ ಸೃಷ್ಟಿಯಾಗಿದೆ. ಕೇಂದ್ರ ಸರ್ಕಾರವು ಕರ್ನಾಟಕವನ್ನು ಭಾರತ ಒಕ್ಕೂಟ ವ್ಯವಸ್ಥೆಯ ಭಾಗವೆಂದೆ ಪರಿಗಣಿಸದೆ ಮಲತಾಯಿ ಧೋರಣೆ ತೋರುತ್ತಿದೆ ಎಂದು ಕಿಡಿಕಾರಿದರು. ರಾಜ್ಯದಲ್ಲಿ ವಿಫುಲ ನೈಸರ್ಗಿಕ ಸಂಪತ್ತು ಇದೆ. ಕನ್ನಡ ಭಾಷೆ, ಸಂಸ್ಕೃತಿ, ನೆಲ, ಜಲ ನಾಡಿನ ಉಳಿವಿಗಾಗಿ ಕರ್ನಾಟಕವೂ ಭಾರತ ಒಕ್ಕೂಟ ವ್ಯವಸ್ಥೆಯಿಂದ ಹೊರಬರುವುದು ಅನಿರ್ವಾಯವೆಂಬಂತಹ ಪರಿಸ್ಥಿತಿ ಬಂದೊಗಿದೆ. ಆದ್ದರಿಂದ ರಾಜ್ಯದ ಜನತೆ ‘ಸ್ವತಂತ್ರ ಕನ್ನಡನಾಡಿನ’ ಉದಯಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ರಾಜ್ಯ ಸಂಚಾಲಕ ಹಂ. ಲಕ್ಕೇಗೌಡ, ಷಣ್ಮುಖ, ಹಿಂದೂ ಸಂಸ್ಕೃತಿ ಉಳಿಸಿ ಹೋರಾಟ ಒಕ್ಕೂಟದ ಅಧ್ಯಕ್ಷ ಆರ್.ವಿ. ಗೋವಿಂದ ರಾಜು ಉಪಸ್ಥಿತರಿದ್ದರು.

Leave a Reply

comments

Related Articles

error: