ಮೈಸೂರು

ಶಿಲ್ಪಕಲೆಯನ್ನು ಯುವ ಪೀಳಿಗೆ ಉಳಿಸಿ ಬೆಳೆಸಬೇಕು : ಎಂ.ಕೆ. ಸೋಮಶೇಖರ್

ಕಲಾವಿದರು ಇಂದು ಎಷ್ಟೇ ಕಲಾ ನೈಪುಣ್ಯತೆಯನ್ನು ಹೊಂದಿದ್ದರೂ ಆರ್ಥಿಕವಾಗಿ ಸದೃಢರಾಗದೇ, ಮಧ್ಯವರ್ತಿಗಳಿಂದಾಗಿ ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ಶಾಸಕ ಎಂ.ಕೆ. ಸೋಮಶೇಖರ್ ಬೇಸರ ವ್ಯಕ್ತಪಡಿಸಿದರು.

ಮೈಸೂರು ಜಿಲ್ಲಾ ವಿಶ್ವಕರ್ಮ ಮಹಾಒಕ್ಕೂಟ ಮತ್ತು ಮೈಸೂರು ಜಿಲ್ಲಾ ವಿಶ್ವಕರ್ಮ ಜಯಂತ್ಯೋತ್ಸವ ಸಮಿತಿ ವತಿಯಿಂದ ಶನಿವಾರ ಕಲಾಮಂದಿರದಲ್ಲಿ ಆಯೋಜಿಸಲಾದ ಅಮರ ಶಿಲ್ಪಿ ಜಕಣಾಚಾರಿ ಅವರ ಸ್ಮರಣಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, “ಜಕಣಾಚಾರಿ ಹೆಸರಾಂತ ಶಿಲ್ಪಿ. ಆತನ ಕೈಚಳಕದಿಂದ ಸೃಷ್ಟಿಯಾಗಿರುವ ಬೇಲೂರು, ಹಳೇಬೀಡಿನ ಶಿಲ್ಪ ಕಲಾಕೃತಿಗಳು ಪ್ರಪಂಚವವನ್ನು ಆಕರ್ಷಿಸುತ್ತಿವೆ. ಜಕಣಾಚಾರಿಯನ್ನು ಮೀರಿಸುವ ಕಲಾವಿದ ಇನ್ನೂ ಹುಟ್ಟಿಲ್ಲ” ಎಂದು ಹೇಳಿದರೆ ತಪ್ಪಾಗಲಾರದು ಎಂದು ಹೇಳಿದರು.

ಪ್ರಾಚೀನ ಕಾಲದಿಂದಲೂ ಕಲೆ ವಂಶಪಾರಂಪರ್ಯವಾಗಿ ಬಂದಿದೆ. ಅಂತೆಯೇ ಇಂದು ಸಹ ಕಲಾವಿದರು ತಮ್ಮ ಕಲೆಯನ್ನು ವಂಶಪಾರಂಪರ್ಯವಾಗಿ ಉಳಿಸಿಕೊಂಡು ಹೋಗಬೇಕು. ಶ್ರಮವಹಿಸಿ ತಾಳ್ಮೆಯಿಂದ ಅದ್ಭುತ ಕಲೆಯನ್ನು ಸೃಷ್ಟಿಸಿದರೆ ಇಡೀ ಪ್ರಪಂಚವನ್ನು ತನ್ನತ್ತ ಆಕರ್ಷಿಸಬಹುದು. ಆದರೆ ಇಂದು ಕಲಾವಿದರು ಆರ್ಥಿಕವಾಗಿ ಸದೃಢರಾಗದೆ ತಮ್ಮ ಕಲಾಕೃತಿಗಳನ್ನು ಮಧ‍್ಯವರ್ತಿಗಳಿಗೆ ಮಾರಾಟ ಮಾಡಿ ನಷ್ಟ ಅನುಭವಿಸುತ್ತಿದ್ದಾರೆ. ಮ‍ಧ್ಯವರ್ತಿಗಳ ಉದ್ಧಾರ ಮಾಡುತ್ತಿದ್ದಾರೆ. ಆದ್ದರಿಂದ ಕಲಾಕಾರರು ತಾವು ಮಾಡಿದ ಕಲಾಕೃತಿಗಳನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡಿ ಲಾಭ ಪಡೆದುಕೊಳ್ಳಬೇಕು ಎಂದು ಹೇಳಿದರು.

ಮೈಸೂರು ಜಿಲ್ಲಾ ವಿಶ್ವಕರ್ಮ ಮಹಾಒಕ್ಕೂಟದ ಸಿ.ಹುಚ್ಚಪ್ಪಾಚಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭ ವಿಶ್ವಕರ್ಮ ಸಮುದಾಯದ ಕ್ಯಾಲೆಂಡರ್ ಬಿಡುಗಡೆ ಮಾಡಲಾಯಿತು. ನಂತರ ಸಮುದಾಯದ ಮುಖಂಡರನ್ನು ಸನ್ಮಾನಿಸಿ ಗೌರವಿಸಿದರು.

ಇಳೈ ಆಳ್ವಾರ್ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಜಿ.ರಘು ಆಚಾರ್, ಕರ್ನಾಟಕ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ಅಧ್ಯಕ್ಷ ಸತ್ಯವತಿ, ಕನ್ನಡಪ್ರಭ ದಿನಪತ್ರಿಕೆಯ ಸಂಪಾದಕ ಅಂಶಿ ಪ್ರಸನ್ನ ಕುಮಾರ್, ಸಮುದಾಯದ ಮುಖಂಡರಾದ ಬಾಬು ಪತ್ತಾರ್, ಎಲ್.ನಾಗರಾಜು, ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: