ಮೈಸೂರು

ಜೀವನದಲ್ಲಿ ಕಲಿಯುವ ಪಾಠವೇ ಹೆಚ್ಚು ಪರಿಣಾಮಕಾರಿ : ಪ್ರೊ.ವಿ.ನಾಗರಾಜು

ಸಾಮಾಜಿಕವಾಗಿ, ಆರ್ಥಿಕವಾಗಿ ಅಭಿವೃದ್ಧಿ  ಹೊಂದುವ ಜತೆಗೆ ಶಿಕ್ಷಣದಿಂದಲೇ ಮನುಷ್ಯ ಉತ್ತಮ ನಾಗರಿಕನಾಗಿ ಬೆಳೆಯಲು ಸಾಧ್ಯ ಎಂದು ಬೆಂಗಳೂರಿನ ಜವಾಹರಲಾಲ್ ನೆಹರು ಸುಧಾರಿತ ವೈಜ್ಞಾನಿಕ ಸಂಶೋಧನಾ ಕೇಂದ್ರದ ಅಧ್ಯಕ್ಷ ಪ್ರೊ.ವಿ.ನಾಗರಾಜು ಅಭಿಪ್ರಾಯಪಟ್ಟರು.
ಮೈಸೂರಿನ ಮಹಾರಾಜ ಕಾಲೇಜಿನ ಶತಮಾನೋತ್ಸವ ಭವನದಲ್ಲಿ ಏರ್ಪಡಿಸಲಾಗಿದ್ದ ಯುವರಾಜ ಕಾಲೇಜು 4ನೇ ಪದವಿ ಪ್ರದಾನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಪ್ರೊ.ವಿ.ನಾಗರಾಜು ಮಾತನಾಡಿದರು.
ಮೌಲ್ಯಾಧಾರಿತ ಶಿಕ್ಷಣವನ್ನು ಪಡೆಯುವ ಮೂಲಕ ವಿದ್ಯಾರ್ಥಿಯು ತನ್ನ ಜೀವನವನ್ನು ಕಟ್ಟಿಕೊಳ್ಳಬಹುದು. ವೈಯುಕ್ತಿಕ ಹಾಗೂ ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಶಿಕ್ಷಣವೇ ಊರುಗೋಲು. ಆದರೆ, ತರಗತಿಯಲ್ಲಿ ಕಲಿಯುವುದಕ್ಕಿಂತ, ಜೀವನದಲ್ಲಿ ಕಲಿಯುವ ಪಾಠವು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ. ಹಾಗಾಗಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ಬದುಕನ್ನು ಗೌರವಿಸುವ, ಪ್ರೀತಿಸುವ ಕೆಲಸ ಆಗಬೇಕು ಎಂದು ಅವರು ಸಲಹೆ ನೀಡಿದರು.
ಪರದೆಯ ಮೇಲಿನ ನಾಯಕರಿಗಿಂತ ನಿಜ ಜೀವನದ ನಾಯಕರಿಗೆ ಬೆಲೆ ಹೆಚ್ಚು. ನಿಜ ಜೀವನದ ನೋವು, ಸಂಕಟ, ಸುಖ- ದುಃಖಗಳನ್ನು ಗಣನೆಗೆ ತೆಗೆದುಕೊಂಡು ಹೋರಾಡುವವನೇ ನಾಯಕನಾಗುತ್ತಾನೆ. ಅನೇಕರ ಜೀವನವನ್ನು ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯುತ್ತಾನೆ. ಇಂಥವರ ಸಾಲಿಗೆ ಕುವೆಂಪು, ದ.ರಾ.ಬೇಂದ್ರೆ, ಡಿ.ವಿ.ಗುಂಡಪ್ಪ, ಶಿವರಾಮ ಕಾರಂತ, ಸಿ.ಎನ್.ಆರ್.ರಾವ್ ಮುಂತಾದವರು ಸೇರುತ್ತಾರೆ ಎಂದು ಉದಾಹರಿಸಿದರು.
ಸ್ವಾತಂತ್ರ್ಯಪೂರ್ವದಲ್ಲಿ ಭಾರತವನ್ನು ಮೂರನೇ ವಿಶ್ವದ ರಾಷ್ಟ್ರಗಳಲ್ಲಿ ಒಂದು ಎಂದು ಕರೆಯಲಾಗುತ್ತಿತ್ತು. ಆದರೆ, ಈಗ ವಿಶ್ವದ ಮೂರು ಪ್ರಬಲ ರಾಷ್ಟ್ರಗಳಲ್ಲಿ ಭಾರತವೂ ಒಂದು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಇದಕ್ಕೆ ಕಾರಣ, ಭಾರತವನ್ನು ಕಟ್ಟಿ ಬೆಳೆಸಿದ ಯುವಕರು. ಶಿಕ್ಷಿತ ಯುವಕರು. ಇದನ್ನು ಸದಾ ಸ್ಮರಿಸುತ್ತ ದೇಶ ಕಟ್ಟುವ ಕಾರ್ಯದಲ್ಲಿ ಯುವಕರು ತೊಡಗಿಸಿಕೊಳ್ಳಬೇಕು ಎಂದು ಅವರು ಕಿವಿಮಾತು  ಹೇಳಿದರು.
ವಿಜ್ಞಾನವು ಮಿತಿಗಳನ್ನು ಮೀರಿದ್ದು. ಅದನ್ನು ತಿಳಿದುಕೊಳ್ಳುವ ಹುಮ್ಮಸ್ಸು ಎಷ್ಟಿದ್ದರೂ ಸಾಲದು. ವಿಜ್ಞಾನದ ಎಲ್ಲ ಹಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಶಿಸ್ತನ್ನು ಹೊಂದಬೇಕು. ಇದರಿಂದ ವೈಯುಕ್ತಿಕ ಹಾಗೂ ಸಾಮಾಜಿಕವಾಗಿ ಶ್ರೇಯಸ್ಸು ಹೊಂದುವುದು ಸಾಧ್ಯ ಎಂದರು.
ಶ್ರಮ ದುಡಿಮೆಗೆ ಅಡ್ಡಮಾರ್ಗಗಳಿಲ್ಲ. ಹಾಗಾಗಿ, ಯುವಕರು ದುಡಿಮೆಯನ್ನೇ ಮೆಟ್ಟಿಲನ್ನಾಗಿ ಮಾಡಿಕೊಂಡು ಬೆಳೆಯಬೇಕು. ಇದನ್ನು ಹೊರತುಪಡಿಸಿ ಬೇರಾವ ಮಾರ್ಗವನ್ನು ಅನುಸರಿಸಿದರೂ ಅದರಿಂದ ಯಶಸ್ಸನ್ನು ನಿರೀಕ್ಷಿಸುವುದು ಸಾಧ್ಯವೇ ಇಲ್ಲ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಅತಿಹೆಚ್ಚು ಅಂಕ ಗಳಿಸಿದ ಎಂ.ಶಮೈಲಾ, ಇ.ನರಸಿಂಹಮೂರ್ತಿ, ಹೆಪ್ಜಿಬಾಹ್ ಸೈರಿಲ್, ಎಂ.ಕೀರ್ತಿರಾಜ್, ಎಚ್.ಎನ್.ಕಾವ್ಯಾ, ಪ್ರೀತ್ ಪ್ಲೋರಿನಾ, ಕೆ.ಉತ್ತರಕುಮಾರಿ, ದರ್ಶಿನಿಗೌಡ, ಎನ್.ಎಂ.ನಾಗೇಂದ್ರ, ಕೆ.ಪ್ರವೀಣ್ ಕುಮಾರ್, ಕೆ.ಆಶ್ರಿತಾ ರಂಗನಾಥ್ ಇವರಿಗೆ ಚಿನ್ನದ ಪದಕವನ್ನು ವಿತರಿಸಲಾಯಿತು.

ಈ ಸಂದರ್ಭ ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ, ಪ್ರಾಂಶುಪಾಲ ಡಾ.ಆರ್.ಗಣೇಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: