ಪ್ರಮುಖ ಸುದ್ದಿಮೈಸೂರು

ಕೆ.ಆರ್.ಆಸ್ಪತ್ರೆಗೆ ಸಚಿವ ಜಿ.ಟಿ.ದೇವೇಗೌಡ ಭೇಟಿ : ಉನ್ನತ ಮಟ್ಟದಲ್ಲಿ ತನಿಖೆ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ

ಮೈಸೂರು,ಡಿ.16:- ಸುಳ್ವಾಡಿ‌ ಗ್ರಾಮದ ವಿಷಾಹಾರ ಸೇವನೆ ಪ್ರಕರಣದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಸ್ವಸ್ಥರನ್ನು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ ಟಿ ದೇವೇಗೌಡ ಅವರು ಮೈಸೂರಿನ ಕೆ ಆರ್ ಆಸ್ಪತ್ರೆಗಿಂದು ಭೇಟಿ ಮಾಡಿ‌ ಅವರ ಆರೋಗ್ಯವನ್ನು ವಿಚಾರಿಸಿದರು.

ಬಳಿಕ ಮಾತನಾಡಿದ ಅವರು ಕೆ.ಆರ್.ಆಸ್ಪತ್ರೆಯಲ್ಲಿ ದಾಖಲಾಗಿರುವ ಎಲ್ಲರೂ ಚೆನ್ನಾಗಿದ್ದಾರೆ. ಖಾಸಗಿ ಆಸ್ಪತ್ರೆ ಅಪೋಲೋ ದಲ್ಲಿ ನಿನ್ನೆ ಇಂದು ಬೆಳಿಗ್ಗೆ ಸೇರಿ ಇಬ್ಬರು ಮೃತಪಟ್ಟಿದ್ದಾರೆ. ವೈದ್ಯರು ಕೂಡ ಪ್ರಾಣ ಉಳಿಸಲು ಶತಾಯ ಗತಾಯ ಪ್ರಯತ್ನ ನಡೆಸುತ್ತಿದ್ದಾರೆ. ಉನ್ನತ ಮಟ್ಟದಲ್ಲಿ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲೇಬೇಕು ಎಂದರು.

ಕೆ.ಆರ್.ಆಸ್ಪತ್ರೆಯಲ್ಲಿ ಮೂಲಭೂತ ಸೌಕರ್ಯ ಕೊರತೆ ವಿಚಾರಕ್ಕೆ ಪ್ರತಿಕ್ರಿಯಿಸಿ ಈ ಆಸ್ಪತ್ರೆ ಉಸ್ತುವಾರಿ ಸಚಿವ ಡಿ.ಕೆ.ಶಿವಕುಮಾರ್ ಬರುತ್ತಾರೆ. ಈಗಾಗಲೇ ಶಿವಕುಮಾರ್ ಜೊತೆ ಮಾತುಕಥೆ ನಡೆಸಿದ್ದೇನೆ. ಅವರು ಖುದ್ದು ಆಸ್ಪತ್ರೆಗೆ ಭೇಟಿ ನೀಡಿ ಮೂಲಭೂತ ಸಮಸ್ಯೆ ಬಗ್ಗೆ ಚರ್ಚಿಸಲಿದ್ದಾರೆ. ಶೀಘ್ರದಲ್ಲೇ ಸಮಸ್ಯೆ ಪರಿಹರಿಸಲಾಗುವುದು ಎಂದರು.

ಕೆ.ಆರ್.ಆಸ್ಪತ್ರೆಯಲ್ಲಿ 14 ವೆಂಟಿಲೇಟರ್ ಇದೆ. ಇನ್ನು ಹೆಚ್ಚು ವೆಂಟಿಲೇಟರ್ ಬೇಕು ಅಂತ ಹೇಳಿದ್ದಾರೆ. ನಾನು ಡಿ.ಕೆ.ಶಿವಕುಮಾರ್ ಅವರ ಜೊತೆ ಮಾತನಾಡಿದ್ದೇನೆ. ಅಧಿವೇಶನ ಮುಗಿದ ತಕ್ಷಣ ಈ ಬಗ್ಗೆ ಕ್ರಮ ವಹಿಸುವುದಾಗಿ ಹೇಳಿದ್ದಾರೆ ಎಂದರು.

ನನಗೆ ಕಾಲು ನೋವಾಗಿತ್ತು. ಚಿಕಿತ್ಸೆ ಪಡೆದು ಒಂದು ದಿನ ಏಳಲು ಆಗಲಿಲ್ಲ. ಆ ಕಾರಣದಿಂದ ನಿನ್ನೆ ಮೊನ್ನೆ ನಾನು ಆಸ್ಪತ್ರೆಗೆ ಬರಲು ಸಾಧ್ಯವಾಗಲಿಲ್ಲ ಎಂದು ತಮ್ಮ ಗೈರು ಹಾಜರಿಗೆ ಸ್ಪಷ್ಟನೆ ನೀಡಿದರು. ನಮ್ಮ ಸಚಿವರು ಹಾಗೂ ಅಧಿಕಾರಿಗಳು ಎಲ್ಲವನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ. ಸದ್ಯ ಇಲ್ಲಿರುವ ಅಸ್ವಸ್ಥರಲ್ಲಿ ಇಬ್ಬರು ಮಾತ್ರ ಚಿಂತಾಜನಕವಾಗಿದ್ದಾರೆ. ಉಳಿದೆಲ್ಲರು ಆರೋಗ್ಯವಾಗಿದ್ದಾರೆ ಅಂತ ವೈದ್ಯರು ಹೇಳಿದ್ದಾರೆ. ಎಲ್ಲರಿಗೂ ಸೂಕ್ತ ಚಿಕಿತ್ಸೆ ನೀಡುತ್ತೇವೆ ಎಂದರು.  ಜೆ.ಎಸ್.ಎಸ್. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಶೀಲ ಬಾಯಿ ಅವರ ಆರೋಗ್ಯ ವಿಚಾರಿಸಿದ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಜಿ.ಟಿ.ದೇವೇಗೌಡ ಅವರು ಸುಶೀಲ ಬಾಯಿ ಅವರ ಸಹೋದರಿ ನಳಿನಾ ಬಾಯಿ ಅವರಿಗೆ ಸಾಮಾಧಾನ ಹೇಳಿದರು.

ವೈಯುಕ್ತಿಕ 10 ಸಾವಿರ ನೆರವು ನೀಡಿದ ಸಚಿವರು

ಇದೇ ವೇಳೆ ಅಪೋಲೋ ಆಸ್ಪತ್ರೆಯಲ್ಲಿ ಮೃತರ ಕುಟುಂಬವೊಂದಕ್ಕೆ ಶವ ಸಂಸ್ಕಾರಕ್ಕೆಂದು ಜಿಟಿಡಿ 10 ಸಾವಿರ ವೈಯುಕ್ತಿಕ ನೆರವು ನೀಡಿದ್ದಾರೆ.

ಹಣ ನೀಡುವ ವೇಳೆ ಸಚಿವರ ಕಾಲಿಗೆ ಬಿದ್ದವರನ್ನು ತಡೆದ ಸಚಿವರು, ಹೀಗೆಲ್ಲ ಮಾಡಬಾರದು ಧೈರ್ಯ ತಂದುಕೊಳ್ಳಮ್ಮ ಎಂದು ಸಮಾಧಾನ ಮಾಡಿದ್ದಾರೆ. ಅಪೋಲೋ ಆಸ್ಪತ್ರೆಯಿಂದ ಕೆ.ಆರ್.ಆಸ್ಪತ್ರೆಯ ಶವಗಾರಕ್ಕೆ ಶವ ರವಾನೆ‌ಯಾಗಿದ್ದು, ಮರಣೋತ್ತರ ಪರೀಕ್ಷೆ ನಂತರ ಕುಟುಂಬಕ್ಕೆ ಶವ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: