
ಪ್ರಮುಖ ಸುದ್ದಿಮೈಸೂರು
ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾಗಿದ್ದವರ ಆರೋಗ್ಯ ವಿಚಾರಿಸಿದ ಆರೋಗ್ಯ ಸಚಿವರು : 44ಗಂಟೆ ತಡವಾಗಿ ಬಂದಿದ್ದಕ್ಕೆ ಸಮರ್ಥನೆ
ಮೈಸೂರು,ಡಿ.16:- ನಗರದ ಅಪೋಲೋ ಆಸ್ಪತ್ರೆಗೆ ಇಂದು ಭೇಟಿ ನೀಡಿದ ಆರೋಗ್ಯ ಸಚಿವ ಶಿವಾನಂದ್ ಪಾಟೀಲ್, ವಿಷ ಪ್ರಸಾದ ಸೇವಿಸಿ ಅಸ್ವಸ್ಥರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳ ಬಗ್ಗೆ ಮಾಹಿತಿ ಪಡೆದುಕೊಂಡರು.
ಆರೋಗ್ಯ ಸಚಿವರಿಗೆ ಸಚಿವ ಜಿ.ಟಿ. ದೇವೇಗೌಡ, ಪುಟ್ಟರಂಗಶೆಟ್ಟಿ, ಸಂಸದ ಧ್ರುವನಾರಾಯಣ್ ಸಾಥ್ ನೀಡಿದರು. ಇನ್ನೂ 6-7ರೋಗಿಗಳ ಪರಿಸ್ಥಿತಿ ಚಿಂತಾಜನಕವಾಗಿದ್ದು, ಈ ಎಲ್ಲಾ ಮಾಹಿತಿಯನ್ನು ಆರೋಗ್ಯ ಸಚಿವರಿಗೆ ನೀಡಲಾಗಿದೆ. ನಂತರ ಮಾತನಾಡಿದ ಸಚಿವರು, ಎಲ್ಲರನ್ನು ಉಳಿಸಿಕೊಳ್ಳುವ ಕೆಲಸ ಆಸ್ಪತ್ರೆಗಳಿಂದ ಮಾಡುತ್ತಿದ್ದೇವೆ ಎಂದರು. ಸರ್ಕಾರದಿಂದ ಈಗಾಗಲೇ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡಲಾಗಿದೆ. ಕೆಪಿಸಿಸಿ ಕಡೆಯಿಂದಲೂ ಮೃತರ ಕುಟುಂಬಕ್ಕೆ ತಲಾ 1 ಲಕ್ಷ ನೀಡಲಾಗಿದೆ. ಅಗತ್ಯ ಬಿದ್ದರೆ ಹೆಚ್ಚಿನ ನೆರವಿನ ಅಗತ್ಯತೆ ಇದ್ದರೆ, ಸರ್ಕಾರ ಮುಲಾಜಿಲ್ಲದೆ ಮೃತರ ಕುಟುಂಬಸ್ಥರಿಗೆ ಸಹಾಯ ಮಾಡಲಿದೆ. ಇದರಲ್ಲಿ ಯಾವುದೇ ರೀತಿಯ ಸಂಶಯ ಬೇಡ ಎಂದರು. ಹೆಚ್ಚಿನ ವಿಷದ ಅಂಶ ದೇಹದೊಳಗೆ ಸೇರಿದ ಹಿನ್ನೆಲೆಯಲ್ಲಿ ಚಿಂತಾಜನಕವಾಗಿರುವವರ ಸಂಖ್ಯೆ ಹೆಚ್ಚಾಗಿದೆ ಎಂದಿರುವ ಸಚಿವರು, ಸರ್ಕಾರ ನಿಮ್ಮ ಜೊತೆ ಇದೆ ಎಂದು ಅಸ್ವಸ್ಥರಿಗೆ ಭರವಸೆ ನೀಡಿದರು.
ಬಳಿಕ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿ ಅದು ವಿಷ ಪ್ರಾಶನ ಅನ್ನೋದು ಖಚಿತ ಮಾಡಿಕೊಳ್ಳುವ ವಿಚಾರದಲ್ಲಿ ವಿಳಂಬವಾಯಿತು. ಹೀಗಾಗಿ ಚಿಕಿತ್ಸೆ ಮತ್ತು ಮೈಸೂರಿಗೆ ಸ್ಥಳಾಂತರ ತಡವಾಗಿದ್ದು ಸತ್ಯ ಎಂದು ಅಸ್ವಸ್ಥರನ್ನು ತಡವಾಗಿ ರವಾನೆ ಮಾಡಿದ್ದನ್ನು ಒಪ್ಪಿಕೊಂಡರು. 44 ಗಂಟೆ ತಡವಾಗಿ ಬಂದಿದ್ದನ್ನು ಸಮರ್ಥಿಸಿಕೊಂಡ ಆರೋಗ್ಯ ಸಚಿವರು ಗಂಭೀರ ಪ್ರಕರಣದ ಬಗ್ಗೆ ಬೇಜವಬ್ದಾರಿತನ ಪ್ರದರ್ಶಿಸಿದರು. ನನಗೆ ವಿಷಯ ಗೊತ್ತಾಗಿದ್ದೆ ನಿನ್ನೆ ಸಂಜೆ 4 ಗಂಟೆಗೆ. ನಾನಿರೋದು ವಿಜಾಪುರದಲ್ಲಿ ಅಲ್ಲಿಂದ ಇಲ್ಲಿಗೆ ಬರೋಕೆ ಟೈಂ ಆಗುತ್ತೆ. ಮುಖ್ಯಮಂತ್ರಿಗಳೆ ಬಂದಿದ್ದಾರೆ ತಾನೆ? ನಾ ಬಂದು ಇನ್ನೇನು ಆಗಬೇಕಿದೆ. ನನಗಿಂತ ದೊಡ್ಡವರೇ ಬಂದಿದ್ದರಲ್ಲ ಬಿಡಿ ಎಂದು ಉಡಾಫೆಯ ಉತ್ತರ ನೀಡಿದರು.
ನಾನು ಬಂದ ಮೇಲೆ ಹಲವು ಸಮಸ್ಯೆ ಸರಿಪಡಿಸಿದ್ದೇನೆ. 400 ಅಂಬ್ಯುಲೆನ್ಸ್ ಖರೀದಿ ಮಾಡಿದ್ದೇವೆ. 360 ಜನ ವೈದ್ಯರನ್ನು ನೇಮಿಸಿಕೊಂಡಿದ್ದೇವೆ. ಇನ್ನು 1000 ಹುದ್ದೆ ಕೊರತೆ ಇದೆ. ಅವೆಲ್ಲವನ್ನು ತುಂಬುವ ಪ್ರಯತ್ನ ಮಾಡುತ್ತೇವೆ ಎಂದರು. (ಕೆ.ಎಸ್,ಎಸ್.ಎಚ್)