ಮೈಸೂರು

ರೈಲ್ವೆ ಉದ್ಯೋಗಿ ಆತ್ಮಹತ್ಯೆ

ರೈಲ್ವೆ ಇಲಾಖೆಯಲ್ಲಿನ ಹಣ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಮೇಲೆ ಎಫ್ಐಆರ್ ದಾಖಲಾದ ಕುರಿತು ಮನನೊಂದ ರೈಲ್ವೆ ಉದ್ಯೋಗಿಯೋರ್ವರು ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಘಟನೆ  ಶನಿವಾರ ಸಂಜೆ ಮೈಸೂರಿನ ಲಷ್ಕರ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಮೃತನನ್ನು ಶಿವರಾಂಪುರ ನಿವಾಸಿ ಶೇನಾಜ್(33) ಎಂದು ಗುರುತಿಸಲಾಗಿದೆ. ಈತ  ಅರಸಿಕೆರೆಯಲ್ಲಿ ರೈಲ್ವೆ ಕಮರ್ಶಿಯಲ್ ವಿಭಾಗದಲ್ಲಿ ಕ್ಲರ್ಕ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ. ಕಳೆದ 6 ತಿಂಗಳ ಹಿಂದೆ ಕಮರ್ಶಿಯಲ್ ವಿಭಾಗದಲ್ಲಿದ್ದ 10 ಲಕ್ಷ ರೂ. ನಾಪತ್ತೆಯಾಗಿತ್ತು. ನಾಪತ್ತೆಯ ಹಿಂದೆ ಐವರ ಹೆಸರು ಕೇಳಿ ಬಂದಿದ್ದು, ಅದರಲ್ಲಿ ಇವನೂ ಶಾಮೀಲಾಗಿದ್ದ ಎಂದು ಆರೋಪಿಸಲಾಗಿತ್ತು. ಪ್ರಕರಣ ಸಂಬಂಧ ಅರಸಿಕೆರೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು. ಇದರಿಂದ ತೀವ್ರ ಮನನೊಂದಿದ್ದ ಎಂಬ ಮಾತು ಕೇಳಿ ಬರುತ್ತಿದೆ.

ಅವನನ್ನು ಅಲ್ಲಿಂದ ಮೈಸೂರಿನ ಅಶೋಕಪುರಂ ರೈಲ್ವೆ ವಿಭಾಗಕ್ಕೆ ಎತ್ತಂಗಡಿ ಮಾಡಲಾಗಿತ್ತು. ಶುಕ್ರವಾರ ಮನೆಯಿಂದ ತೆರಳಿದ ಈತ, ಲಷ್ಕರ್ ಠಾಣೆಯ ಹಿಂದಿರುವ ಖಾಸಗಿ ವಸತಿಗೃಹದಲ್ಲಿ ತಂಗಿದ್ದ ಎನ್ನಲಾಗಿದೆ. ಸಂಜೆಯಾದರೂ ವಸತಿಗೃಹದ ಬಾಗಿಲು ತೆರೆಯದೇ ಇರುವುದನ್ನು ಗಮನಿಸಿದ ವಸತಿ ಗೃಹ ಸಿಬ್ಬಂದಿಗಳು ಠಾಣೆಗೆ ಮಾಹಿತಿ ನೀಡಿದ್ದು, ಪೊಲೀಸರು ಬಂದು ನೋಡಲಾಗಿ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿರುವುದು ತಿಳಿದು ಬಂದಿದೆ.

ಲಷ್ಕರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

comments

Related Articles

error: