ದೇಶಪ್ರಮುಖ ಸುದ್ದಿ

ವಿಮಾನ, ಹಡಗಿನಲ್ಲಿ ಪ್ರಯಾಣಿಸುವವರಿಗೆ ಸಿಗಲಿದೆ ವಿಶೇಷ ಸೌಲಭ್ಯ!

ನವದೆಹಲಿ (ಡಿ.17): ವಿಮಾನ ಅಥವಾ ಹಡಗಿನಲ್ಲಿ ಸಂಚರಿಸುವಾಗ ಮೊಬೈಲ್‌ ದೂರವಾಣಿ ಕರೆ ಮಾಡಲು ಅಥವಾ ಇಂಟರ್ನೆಟ್‌ ಸೇವೆ ಬಳಸಲು ಆಗುವುದಿಲ್ಲ ಎಂಬ ಅಸಂಖ್ಯಾತ ಪ್ರಯಾಣಿಕರ ಕೊರಗು ಸದ್ಯದಲ್ಲೇ ನೀಗುವ ಸಾಧ್ಯತೆ ನಿಚ್ಚಳವಾಗಿದೆ.

ಭಾರತೀಯ ಸೀಮಾರೇಖೆಯೊಳಗೆ ವಿಮಾನ ಹಾಗೂ ಹಡಗು ಸಂಚರಿಸುವಾಗ ಅದರಲ್ಲಿರುವ ಪ್ರಯಾಣಿಕರಿಗೆ ಕರೆ ಹಾಗೂ ಇಂಟರ್ನೆಟ್‌ ಸೌಲಭ್ಯ ಒದಗಿಸುವ ಕುರಿತು ಕೇಂದ್ರ ಸರ್ಕಾರ ನಿಯಮಗಳನ್ನು ಪ್ರಕಟಣೆ ಮಾಡಿದೆ.

ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಹಾಗೂ ನೌಕಾಯಾನ ಕಂಪನಿಗಳು ಲೈಸೆನ್ಸ್‌ ಹೊಂದಿರುವ ಭಾರತೀಯ ದೂರಸಂಪರ್ಕ ಕಂಪನಿಗಳ ಜತೆ ಪಾಲುದಾರಿಕೆ ಮಾಡಿಕೊಂಡು ಈ ಸೌಕರ್ಯಗಳನ್ನು ಕಲ್ಪಿಸಬಹುದಾಗಿದೆ. ಡಿ.14ರಂದು ಈ ಕುರಿತಂತೆ ನಿಯಮಗಳನ್ನು ಪ್ರಕಟಿಸಲಾಗಿದ್ದು, ಗೆಜೆಟ್‌ ಅಧಿಸೂಚನೆ ಹೊರಡಿಸಿದ ಬಳಿಕ ಜಾರಿಗೆ ಬರಲಿವೆ.

ಭಾರತೀಯ ಭೂಭಾಗದಲ್ಲಿರುವ ದೂರಸಂಪರ್ಕ ಜಾಲ ಅಥವಾ ಉಪಗ್ರಹಗಳನ್ನು ಬಳಸಿ ಕರೆ, ಇಂಟರ್ನೆಟ್‌ ಸೌಲಭ್ಯ ಕಲ್ಪಿಸಲು ‘ವಿಮಾನ ಹಾಗೂ ನೌಕಾಯಾನ ಸಂಪರ್ಕ ನಿಯಮ 2018’ ಅನುವು ಮಾಡಿಕೊಡುತ್ತದೆ.

ಭಾರತೀಯ ದೂರಸಂಪರ್ಕ ಕಂಪನಿಗಳು ಬಾಹ್ಯಾಕಾಶ ಇಲಾಖೆಯಿಂದ ಪೂರ್ವಾನುಮತಿ ಪಡೆದುಕೊಂಡು, ದೇಶಿ ಅಥವಾ ವಿದೇಶಿ ಉಪಗ್ರಹಗಳ ಮೂಲಕ ಈ ಸೌಲಭ್ಯ ಒದಗಿಸಬಹುದಾಗಿದೆ. ವಿಮಾನವು ಭಾರತೀಯ ವಾಯುಸೀಮೆಯಲ್ಲಿ ಕನಿಷ್ಠ 3000 ಮೀಟರ್‌ ಎತ್ತರಕ್ಕೆ ಹೋದ ಬಳಿಕ ಈ ಸೇವೆಗಳನ್ನು ನೀಡಬಹುದು ಎಂದು ಸ್ಪಷ್ಟಪಡಿಸಲಾಗಿದೆ. (ಎನ್.ಬಿ)

Leave a Reply

comments

Related Articles

error: